ಪಾದಚಾರಿ ಮೂಲಸೌಕರ್ಯ ಯೋಜನೆ ಅನುಷ್ಠಾನಕ್ಕೆ ಕೋರಿ ಪಿಐಎಲ್; ಸರ್ಕಾರ, ಪಾಲಿಕೆಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಪಾದಚಾರಿ ಮಾರ್ಗಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ, ಸುರಕ್ಷಿತವಾಗಿ ನಡೆದಾಡಲು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಪಾದಚಾರಿ ಮೂಲಸೌಕರ್ಯ ಯೋಜನೆ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ನಗರದ ಅರಕೆರೆ ಮೈಕೋ ಲೇಔಟ್ ನಿವಾಸಿ ದೇವರಾಯ ಸಮುದ್ರಂ ವೆಂಕಟೇಶ ವಿಜಯಕುಮಾರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ್ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿ ಕುರಿತು ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ನಗರಾಭಿವೃದ್ಧಿ ಇಲಾಖೆಯ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರು, ಬಿಬಿಎಂಪಿ ಮುಖ್ಯ ಆಯುಕ್ತರು, ಅಂಗವಿಕಲರ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿತು.

ಅರ್ಜಿದಾರರ ಮನವಿ ಏನು?
ನಗರ ಭೂ ಸಾರಿಗೆ ನಿರ್ದೇಶಕರು 2014ರಲ್ಲಿ ಹೊರಡಿಸಿರುವ ಪಾದಚಾರಿ ಮೂಲಸೌಕರ್ಯ ಯೋಜನೆ ಮತ್ತು ಅನುಷ್ಠಾನ ಮಾರ್ಗಸೂಚಿಗಳು ಹಾಗೂ 2016ರಲ್ಲಿ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರುವಂತೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಅಡಚಣೆ ರಹಿತ, ಸುರಕ್ಷಿತ ಪಾದಚಾರಿ ಮಾರ್ಗ, ರಸ್ತೆ, ಸಾರಿಗೆ ಸೌಲಭ್ಯಗಳನ್ನು ಆದ್ಯತೆಯ ಮೇಲೆ ಒದಗಿಸುವಂತೆ ಹಾಗೂ ಈ ಸಂಬಂಧ ನ್ಯಾಯಾಲಯ ನೀಡುವ ಆದೇಶಗಳನ್ನು ಜಾರಿಗೆ ತರಲು ವಿಶೇಷಾಧಿಕಾರ ಸಮಿತಿ ರಚಿಸುವಂತೆ ಮತ್ತು ಅಂಗವಿಕಲ ಸ್ನೇಹಿ ಮೂಲಸೌಕರ್ಯಗಳನ್ನು ಒದಗಿಸಿ ಅದರ ನಿರ್ವಹಣೆ ಮಾಡಲು ವಾರ್ಡ್ ಮಟ್ಟದಿಂದ ಪಾಲಿಕೆ ಆಯುಕ್ತ ಮಟ್ಟದವರಿಗೆ ಆಡಳಿತ ವ್ಯವಸ್ಥೆ ರೂಪಿಸುವಂತೆ ರಾಜ್ಯ ಸರ್ಕಾರ ಹಾಗೂ ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment