ಕಾನೂನು ಪದವಿ ಪ್ರವೇಶಕ್ಕೆ ಅಧಿಕ ಶುಲ್ಕ ಸಂಗ್ರಹ ಪ್ರಶ್ನಿಸಿದ ಅರ್ಜಿ; ಕೆಎಸ್‌ಎಲ್‌ಯುಗೆ ಹೈಕೋರ್ಟ್ ನೋಟಿಸ್
- by Ramya B T
- August 19, 2025
- 4565 Views

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಎಲ್‌ಯು) 2025-2026ನೇ ಸಾಲಿನ ಪ್ರವೇಶಾತಿಗೆ ವಿದ್ಯಾರ್ಥಿಗಳಿಂದ ಕಾನೂನುಬಾಹಿರವಾಗಿ ಅಧಿಕ ಶುಲ್ಕ ಸಂಗ್ರಹಿಸಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ವಿಶ್ವವಿದ್ಯಾಲಯದ ಕುಲಪತಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕೆಎಸ್‌ಎಲ್‌ಯುನೊಂದಿಗೆ ಸಂಯೋಜಿತಗೊಂಡಿರುವ ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನಲ್ಲಿ 3 ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಎನ್. ಪ್ರಿಯಾಂಕ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕೆಎಸ್‌ಎಲ್‌ಯು ಕುಲಪತಿಗಳು ಹಾಗೂ ಕುಲ ಸಚಿವರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಇಂಥದೇ ಇನ್ನೂ ಕೆಲ ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್ಲವನ್ನೂ ಒಟ್ಟಾಗಿ ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ಎಚ್. ಪವನ ಚಂದ್ರ ಶೆಟ್ಟಿ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ 2025-26ನೇ ಸಾಲಿನ ಪ್ರವೇಶ ಶುಲ್ಕ ಪರಿಷ್ಕರಿಸಿ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಶುಲ್ಕಗಳ ಹೆಸರಿನಲ್ಲಿ ಕಾನೂನುಬಾಹಿರವಾಗಿ ಅಧಿಕ ಪ್ರವೇಶ ಶುಲ್ಕ ಸಂಗ್ರಹಿಸಿದೆ. ಈ ರೀತಿ ಶುಲ್ಕ ವಿಧಿಸುವ ಅಧಿಕಾರ ಶೈಕ್ಷಣಿಕ ಮಂಡಳಿಗಾಗಲಿ, ಕುಲಪತಿಗಳಿಗಾಗಲಿ ಇಲ್ಲ. ಕಳೆದ ಸಾಲುಗಳಿಗೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ಅಂದಾಜು 30 ಸಾವಿರ ವಿದ್ಯಾರ್ಥಿಗಳಿಂದ 21 ಕೋಟಿ ರೂ. ಹೆಚ್ಚುವರಿ ಶುಲ್ಕ ಸಂಗ್ರಹಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅರ್ಜಿದಾರರ ಆಕ್ಷೇಪವೇನು?
ಕೆಎಸ್‌ಎಲ್‌ಯು ಸಂಯೋಜಿತ ಕಾಲೇಜುಗಳಿಗೆ 2025-26ನೇ ಸಾಲಿನ ವಿವಿಧ ಕೋರ್ಸ್‌ಗಳ ಪ್ರವೇಶ ಶುಲ್ಕ ಪರಿಷ್ಕರಿಸಿ 2025ರ ಜುಲೈ 2ರಂದು ಸುತ್ತೋಲೆ ಹೊರಡಿಸಿದೆ. ಅದರ ಪ್ರಕಾರ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 6,580 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 4,820ರಿಂದ 5,180 ರೂ. ವರೆಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 2023-24ನೇ ಸಾಲಿನಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷಕ್ಕೆ 2,700 ರೂ. ಹಾಗೂ ನಂತರದ ವರ್ಷಗಳಿಗೆ 1,700 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. 2024-25ನೇ ಸಾಲಿನಲ್ಲಿ ಈ ಮೊತ್ತವನ್ನು ಕ್ರಮವಾಗಿ 5,150 ಹಾಗೂ 3,150 ರೂ. ಗಳಿಗೆ ಹೆಚ್ಚಿಸಲಾಗಿತ್ತು. ಇದೀಗ 2025-26ನೇ ಸಾಲಿನಲ್ಲಿ ಪ್ರವೇಶ ಶುಲ್ಕವನ್ನು ಕ್ರಮವಾಗಿ 6,180 ಹಾಗೂ 5,180 ರೂ. ನಿಗದಿಪಡಿಸಲಾಗಿದೆ. 2023-24ನೇ ಸಾಲಿನ ಪ್ರವೇಶ ಶುಲ್ಕಕ್ಕೆ ಹೋಲಿಸಿದರೆ ಈ ಸಾಲಿನ ಪ್ರಥಮ ವರ್ಷದ ಪ್ರವೇಶ ಶುಲ್ಕದಲ್ಲಿ ಶೇ. 128.8 ಹಾಗೂ ನಂತರದ ವರ್ಷಗಳ ಪ್ರವೇಶ ಶುಲ್ಕದಲ್ಲಿ ಶೇ. 204.71 ಪ್ರಮಾಣ ಅಧಿಕವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಶುಲ್ಕ ಪರಿಷ್ಕರಿಸುವಾಗ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ, ಅವರ ಪ್ರತಿಕ್ರಿಯೆ ಪಡೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಶುಲ್ಕ ಪರಿಷ್ಕರಣೆಯು ಶೈಕ್ಷಣಿಕ ಮಂಡಳಿಯ 37ನೇ ಸಭೆಯಲ್ಲಿ ಅನುಮೋದಿಸಲ್ಪಟ್ಟಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಆದರೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾಯ್ದೆ- 2009ರ ಸೆಕ್ಷನ್ 34ರ ಪ್ರಕಾರ, ಶುಲ್ಕ ನಿಗದಿಪಡಿಸಲು, ಸಂಗ್ರಹಿಸಲು ಅಥವಾ ಪರಿಷ್ಕರಿಸಲು ಯಾವುದೇ ಶಾಸನಬದ್ಧ ಅಧಿಕಾರವನ್ನು ಶೈಕ್ಷಣಿಕ ಮಂಡಳಿಯಾಗಲಿ, ಕುಲಪತಿಯಾಗಲಿ ಹೊಂದಿಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ಸೇವೆ ಅಥವಾ ಪ್ರಯೋಜನ ಒದಗಿಸಿದಯೇ ಈ ರೀತಿಯ ಶುಲ್ಕಗಳನ್ನು ವಿಧಿಸುವುದು ಕಾನೂನುಬಾಹಿರ ಕ್ರಮವಾಗಿದ್ದು, ಅಧಿಕಾರ ದುರುಪಯೋಗಕ್ಕೆ ಸಮನಾಗಿದೆ. ಆದ್ದರಿಂದ, ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೆಎಸ್‌ಎಲ್‌ಯು ಹೊರಡಿಸಿರುವ ಸುತ್ತೋಲೆ ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Related Articles
Thank you for your comment. It is awaiting moderation.
Comments (2)
I am second year student 2025-26 I am paid 35000 fees and Last year I am paid 35000 fees i asked my college staff and principal madam she tell you paying not me you paying university this announced I am middle class family. 35000 please I am raicihur SCAB law college students....
ReplyFor the second year admission R L law college taken 35000rs and given receipt for 10000rs high court should take action against this.
Reply