ಆನ್‌ಲೈನ್ ಗೇಮಿಂಗ್ ನಿಷೇಧ ಪ್ರಶ್ನಿಸಿದ ಅರ್ಜಿ; ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಆನ್‌ಲೈನ್‌ ಬೆಟ್ಟಿಂಗ್‌ ಗೇಮ್‌ಗಳ ನಿಷೇಧಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ‘ಆನ್‌ಲೈನ್‌ ಗೇಮಿಂಗ್‌ (ಉತ್ತೇಜನ ಮತ್ತು ನಿಯಂತ್ರಣ) ಕಾಯ್ದೆ’ಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ನವ ದೆಹಲಿಯಲ್ಲಿ ನೋಂದಾಯಿತ ಕಚೇರಿ ಹೊಂದಿರುವ ‘ಹೆಡ್‌ ಡಿಜಿಟಲ್‌ ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌’ ಸಲ್ಲಿಸಿರುವ ರಿಟ್ ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಯಾದ ವಿದ್ಯುನ್ಮಾನ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿತು.

ಲಕ್ಷಾಂತರ ಮಂದಿಯ ಉದ್ಯೋಗಕ್ಕೆ ಕುತ್ತು:
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಆರ್ಯಮಾ ಸುಂದರಮ್‌ ವಾದ ಮಂಡಿಸಿ, ಆನ್‌ಲೈನ್ ಗೇಮಿಂಗ್ (ಉತ್ತೇಜನ ಮತ್ತು ನಿಯಂತ್ರಣ) ಕಾಯ್ದೆಯನ್ನು ಪ್ರಶ್ನಿಸಲಾಗಿದೆ. ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಿದ್ದು, ಇನ್ನೂ ಅದರ ಅಧಿಸೂಚನೆ ಪ್ರಕಟಿಸಿಲ್ಲ. ಇದರಲ್ಲಿ ಲಕ್ಷಾಂತರ ಮಂದಿಯ ಉದ್ಯೋಗದ ವಿಚಾರ ಅಡಗಿದೆ. ರಾತ್ರೋರಾತ್ರಿ ಗೇಮಿಂಗ್‌ ಕ್ಷೇತ್ರವನ್ನು ಮುಚ್ಚಿದರೆ ಅದರಿಂದ ದೊಡ್ಡ ಮಟ್ಟದ ಪರಿಣಾಮ ಎದುರಾಗಲಿದೆ. ಆದ್ದರಿಂದ, ನಮ್ಮ ವಾದ ಪೂರ್ಣಗೊಳ್ಳುವವರೆಗೆ ಕೇಂದ್ರ ಸರ್ಕಾರ ಕಾಯ್ದೆಯ ಅಧಿಸೂಚನೆ ಪ್ರಕಟಿಸಬಾರದು ಇಲ್ಲವೇ, ಕಾಯ್ದೆಯ ಅಧಿಸೂಚನೆ ಪ್ರಕಟಿಸುವುದಕ್ಕೂ ಒಂದು ವಾರ ಮುಂಚಿತವಾಗಿ ನಮಗೆ ಮಾಹಿತಿ ನೀಡಿದರೆ ನ್ಯಾಯಾಲಯದ ಮುಂದೆ ಬರುತ್ತೇವೆ ಎಂದು ತಿಳಿಸಿದರು.

ಮೊದಲೇ ತಿಳಿಸಲು ಸಾಧ್ಯವಿಲ್ಲ:
ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಿದ ಬಳಿಕ ಅಧಿಸೂಚನೆ ಪ್ರಕಟಿಸುವುದು ಸಾಂವಿಧಾನಿಕ ಪ್ರಕ್ರಿಯೆ. ಯಾರಿಗೋ ವೈಯಕ್ತಿಕವಾಗಿ ಸಮಸ್ಯೆಯಾಗಲಿದೆ ಎಂಬ ಕಾರಣಕ್ಕೆ ಕಾಯ್ದೆಯ ಅಧಿಸೂಚನೆ ಪ್ರಕಟಿಸುವಾಗ ಅವರಿಗೆ ಮುಂಚಿತವಾಗಿ ತಿಳಿಸುವ ಅಗತ್ಯವಿಲ್ಲ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು. ಇದು ಕೇವಲ ಗೇಮಿಂಗ್‌ಗೆ ಸಂಬಂಧಿಸಿದ ವಿಚಾರವಲ್ಲ, ಹಣವನ್ನು ಒಳಗೊಂಡಿರುವ ಗೇಮಿಂಗ್‌ಗೆ ಸಂಬಂಧಿಸಿದ್ದಾಗಿದೆ. ಇಲ್ಲಿ ಗಡಿಯಾಚೆಗಿನ ಪರಿಣಾಮಗಳಿವೆ ಎಂದರು.

ಆಗ ನ್ಯಾಯಪೀಠ, ಕಾಯ್ದೆಯ ಅಧಿಸೂಚನೆ ಶೀಘ್ರದಲ್ಲಿ ಪ್ರಕಟಿಸುವ ಸಾಧ್ಯತೆ ಏನಾದರೂ ಇದೆಯೇ ಎಂದು ಮೆಹ್ತಾ ಅವರನ್ನು ಪ್ರಶ್ನಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ಈ ವಿಚಾರದಲ್ಲಿ ಸೂಚನೆ ಪಡೆಯದೇ ಉತ್ತರಿಸಲು ಸಾಧ್ಯವಿಲ್ಲ. ಆದರೆ, ಅಧಿಸೂಚನೆ ಪ್ರಕಟವಾಗಲಿದೆ ಎಂದು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕಾಯ್ದೆಯ ಸೆಕ್ಷನ್‌ಗಳಾದ 2(1)(G), 5, 6, 7 ಮತ್ತು 9ಕ್ಕೆ ತಡೆ ನೀಡಬೇಕು. ಅರ್ಜಿದಾರರ ವಿರುದ್ಧ ಯಾವುದೇ ದಂಡನೀಯ ಕ್ರಮಕೈಗೊಳ್ಳದಂತೆ ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸೆಪ್ಟೆಂಬರ್‌ 8ರೊಳಗೆ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

Related Articles

Comments (0)

Leave a Comment