ನೀತಿ ರೂಪಿಸಲು ಸರ್ಕಾರ ವಿಫಲ; ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ನಿರ್ಬಂಧಕ್ಕೆ ತಡೆ ನೀಡುವ ಬಗ್ಗೆ ಹೈಕೋರ್ಟ್ ಇಂಗಿತ

ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನೀತಿ ರೂಪಿಸುವ ಕುರಿತು ಒಂದು ತಿಂಗಳು ಕಾಲಾವಕಾಶ ನೀಡಿದ ಹೊರತಾಗಿಯೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆಗೆ ವಿಧಿಸಿರುವ ನಿರ್ಬಂಧಕ್ಕೆ ತಡೆ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಮೌಖಿಕವಾಗಿ ಹೇಳಿದೆ.

ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ನಿಷೇಧಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿರುವ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್ ಹಾಗೂ ರ‌್ಯಾಪಿಡೋ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ‌ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ಹಾಜರಾದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಸರ್ಕಾರವು ಗಿಗ್ ಕಾರ್ಮಿಕರ ಕಾಯ್ದೆಯನ್ನು ಜಾರಿಗೆ ತಂದಿದ್ದು, ವಿತರಣೆ (ಡೆಲಿವರಿ) ಉದ್ದೇಶಗಳಿಗಾಗಿ ದ್ವಿಚಕ್ರ ವಾಹನಗಳನ್ನು ಬಳಸಬಹುದಾಗಿದೆ. ಅದಕ್ಕಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಆದರೆ, ಬೈಕ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶವಿಲ್ಲ ಎಂದು ತಿಳಿಸಿದರಲ್ಲದೆ, ಕೆಲ ಕಂಪನಿಗಳು ಅನುಮತಿಯಿಲ್ಲದಿದ್ದರೂ ಬೈಕ್‌ ಟ್ಯಾಕ್ಸಿಗಳನ್ನು ಪ್ರಯಾಣಿಕರಿಗಾಗಿ ಬಳಸುತ್ತಿವೆ. ಅಂತಹ ಕಂಪನಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.

ಆಗ ನ್ಯಾಯಪೀಠ, ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆಗೆ ಅನುಮತಿ ನೀಡುವ ಕುರಿತು ನೀತಿ ರೂಪಿಸಲು ಒಂದು ತಿಂಗಳು ಸಮಯ ನೀಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಲಯ ಸೂಚಿಸಿದ್ದು ಬೈಕ್‌ ಟ್ಯಾಕ್ಸಿ ವಿಚಾರ. ಆದರೆ,‌ ಈಗ ನೀವು ಗಿಗ್‌ ಕಾರ್ಮಿಕರ ಬಗ್ಗೆ ಹೇಳುತ್ತಿದ್ದೀರಿ. ಇದನ್ನು ಒಪ್ಪಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮೇಲಿನ ನಿರ್ಬಂಧಕ್ಕೆ ತಡೆ ನೀಡುವ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಎಂದು ಮೌಖಿಕವಾಗಿ ಹೇಳಿತು.

ಅಂತಿಮವಾಗಿ ನ್ಯಾಯಪೀಠ, ಬೈಕ್‌ ಟ್ಯಾಕ್ಸಿ ಬಗ್ಗೆ ನಿಮ್ಮ ವಾದವೇನಿದೆ ಮಂಡಿಸಿ. ಆನಂತರ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿತು.

ಕಾಲಾವಕಾಶ ನೀಡಿದ್ದ ಕೋರ್ಟ್:
ಅರ್ಜಿ ಕುರಿತು ಆಗಸ್ಟ್ 20ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ನೀತಿ ಮಟ್ಟದಲ್ಲಿ ಪರಿಶೀಲಿಸಬಹುದೇ ಎಂದು ಕೇಳಿತ್ತಲ್ಲದೆ, ಪ್ರಕರಣವನ್ನು ಒಂದು ತಿಂಗಳು ಮುಂದೂಡಲಾಗುತ್ತದೆ. ಸರ್ಕಾರ ನಿರ್ಧಾರ ತಿಳಿಸಲಿ. ನೀತಿಯು ನ್ಯಾಯಾಲಯಕ್ಕೆ ತೃಪ್ತಿದಾಯಕವಿರಬೇಕೆಂದಿಲ್ಲ. ಆ ನೀತಿಯು ಸ್ವೇಚ್ಛೆಯಿಂದ ಕೂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ನ್ಯಾಯಾಲಯ ಪರಿಶೀಲಿಸಲಿದೆ. ನೀತಿಯ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿತ್ತು.

ಪ್ರಸ್ತುತ ವಿಷಯದಲ್ಲಿ ಎತ್ತಲಾದ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಸಲಾಗುವುದು ಎಂಬ ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡಿದ್ದ ನ್ಯಾಯಪೀಠ, ವಿಚಾರಣೆಯನ್ನು ಒಂದು ತಿಂಗಳ ಮಟ್ಟಿಗೆ ಮುಂದೂಡಿತ್ತಲ್ಲದೆ, ಈ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು. ಏಕೆಂದರೆ, ಇಲ್ಲಿ ಹಲವರ ಜೀವನೋಪಾಯವಿದೆ ಎಂದು ಮೌಖಿಕವಾಗಿ ಹೇಳಿತ್ತು.

Related Articles

Comments (0)

Leave a Comment