ನಾಡ ಧ್ವಜದ ವಿಚಾರ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ; ರಾಜ್ಯಕ್ಕೆ ಪ್ರತ್ಯೇಕ ಧ್ವಜಕ್ಕಾಗಿ ನಿರ್ದೇಶನ ಕೋರಿದ್ದ ಪಿಐಎಲ್ ವಜಾ
- by Jagan Ramesh
- October 25, 2024
- 339 Views
ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ಹೊಂದಲು ಸರ್ಕಾರದ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾವರ್ಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರತ್ಯೇಕ ನಾಡ ಧ್ವಜ ಹೊಂದುವ ವಿಚಾರ ನ್ಯಾಯಾಲಯದ ವಿಚಾರಣಾ ವ್ಯಾಪ್ತಿಗೆ ಒಳಪಡುವುದಿಲ್ಲ. ಅರ್ಜಿದಾರರು ತಪ್ಪಾಗಿ ಅರ್ಥೈಸಿಕೊಂಡು ಪಿಐಎಲ್ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣಾ ಮಾನ್ಯತೆಗೆ ಸಂಬಂಧಿಸಿದಂತೆ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ ವಾದ ಮಂಡಿಸಿ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿಂದೆ ಅಡ್ವೊಕೇಟ್ ಜನರಲ್ ಆಗಿದ್ದ ಪ್ರೊ.ರವಿವರ್ಮ ಕುಮಾರ್ ಅವರ ಅಭಿಪ್ರಾಯ ಆಧರಿಸಿ ಪ್ರತ್ಯೇಕ ಧ್ವಜಕ್ಕೆ ಕಾನೂನಿನ ಮಾನ್ಯತೆ ಹಾಗೂ ಧ್ವಜದ ವಿನ್ಯಾಸದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಾಹಿತಿ ಹಾಗೂ ಹೋರಾಟಗಾರರನ್ನು ಒಳಗೊಂಡ ಒಂಬತ್ತು ಸದಸ್ಯರ ತಜ್ಞರ ಸಮಿತಿ ರಚಿಸಿತ್ತು. ಸಮಿತಿ ವರದಿ ನೀಡಿದ್ದು, ಅದನ್ನು ರಾಜ್ಯ ಸಚಿವ ಸಂಪುಟ ಒಪ್ಪಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಸಮಿತಿ ನೀಡಿದ ವರದಿ ಆಧರಿಸಿ 2018ರ ಮಾರ್ಚ್ 8ರಂದು ಹಳದಿ, ಬಿಳಿ ಮತ್ತು ಕೆಂಪು ವರ್ಣಗಳ ನಡುವೆ ಗಂಡಭೇರುಂಡ ಚಿಹ್ನೆ ಹೊಂದಿರುವ ಧ್ವಜವನ್ನು ಅಂದಿನ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದರು. ಅದನ್ನು ರಾಜ್ಯದ ಧ್ವಜ ಎಂದಿದ್ದರು. ಆ ನಂತರ ಯಾವುದೇ ಬೆಳವಣಿಗೆಯಾಗಲಿಲ್ಲ. ನಮ್ಮದು ಒಕ್ಕೂಟ ದೇಶವಾಗಿದೆ. ಪ್ರತಿ ರಾಜ್ಯವೂ ತನ್ನದೇ ಆದ ಧ್ವಜ ಹೊಂದುವ ಹಕ್ಕು ಹೊಂದಿದೆ ಎಂದರು.
ಕರ್ನಾಟಕ ತನ್ನದೇ ಆದ ಧ್ವಜ ಹೊಂದಬೇಕು ಎಂಬ ಕೂಗು ಇದೆ. ಈಗ ರಾಜ್ಯದ ಒಂದೊಂದು ಕಡೆ ಒಂದೊಂದು ಧ್ವಜಾರೋಹಣ ಮಾಡಲಾಗುತ್ತಿದೆ. ಇದರಿಂದ ಗೊಂದಲವಿದೆ. ಪ್ರತ್ಯೇಕ ಧ್ವಜ ಹೊಂದಲು ರಾಜ್ಯ ಸರ್ಕಾರ ಬೆಂಬಲ ಸೂಚಿಸಿದೆ. ನ್ಯಾಯಾಲಯ ನಿರ್ದೇಶನ ನೀಡದ ಹೊರತು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗುವುದಿಲ್ಲ. ಸಾರ್ವಜನಿಕರ ಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಜನರು ನ್ಯಾಯಾಂಗದ ಮೇಲಿನ ಭರವಸೆ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ, ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ಈ ಮನವಿ ಒಪ್ಪದ ನ್ಯಾಯಪೀಠ, ನಿಮ್ಮ ಬಾವುಟ ನೀವು ಹಾರಿಸಿದ್ದೀರಿ. ನಾವು ನಮ್ಮ ಆದೇಶ ಮಾಡಿದ್ದೇವೆ ಎಂದು ನುಡಿದು ಅರ್ಜಿ ವಜಾಗೊಳಿಸಿತು.
Related Articles
Thank you for your comment. It is awaiting moderation.
Comments (0)