ಟಿಡಿಆರ್ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್; ಅರ್ಜಿದಾರ ಎನ್.ಆರ್.ರಮೇಶ್‌ಗೆ 10 ಸಾವಿರ ರೂ. ದಂಡ
- by Jagan Ramesh
- November 11, 2024
- 48 Views
ಬೆಂಗಳೂರು: ರಾಮನಗರ ತಾಲೂಕು ಕೊಡಿಯಾಲ ಕಾರೇನಹಳ್ಳಿಯಲ್ಲಿ ಬಿಬಿಎಂಪಿ ಘನತಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಮಾಲೀಕರಿಗೆ ಬೆಂಗಳೂರಿನಲ್ಲಿ ಅಭಿವೃದ್ಧಿ ವರ್ಗಾವಣೆ ಹಕ್ಕು (ಟಿಡಿಆರ್) ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಾದ ಪಾಲಿಕೆ ಮಾಜಿ ಸದಸ್ಯ ಎನ್.ಆರ್. ರಮೇಶ್‌ಗೆ 10 ಸಾವಿರ ರೂ. ದಂಡ ವಿಧಿಸಿದೆ.
ಪಾಲಿಕೆ ಮಾಜಿ ಸದಸ್ಯ ಎನ್.ಆರ್. ರಮೇಶ್ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ, ಮೇಲ್ನೋಟಕ್ಕೆ ಅರ್ಜಿದಾರರು ಮತ್ತು ಬಿಬಿಎಂಪಿ ಶಾಮೀಲಾಗಿ ಈ ಅರ್ಜಿ ಸಲ್ಲಿಸಿದಂತಿದೆ ಎಂದು ಅಭಿಪ್ರಾಯಪಟ್ಟು ವಜಾಗೊಳಿಸಿತು.
ಪ್ರಕರಣದಲ್ಲಿ ಭೂಮಾಲೀಕರಿಗೆ 2013ರಲ್ಲೇ ಟಿಡಿಆರ್ ನೀಡಲಾಗಿದೆ. ಆ ಜಾಗದಲ್ಲಿ ಸದ್ಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಹಂತದಲ್ಲಿದೆ. ಅರ್ಜಿದಾರರು 2023ರಲ್ಲಿ ಅಂದರೆ 10 ವರ್ಷ ತಡವಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ವಿಳಂಬದ ಕುರಿತು ಅರ್ಜಿಯಲ್ಲಿ ಯಾವುದೇ ವಿವರಣೆಯನ್ನೂ ನೀಡಿಲ್ಲ. ಮತ್ತೊಂದೆಡೆ, ಅರ್ಜಿ ಸಂಬಂಧ ನೋಟಿಸ್ ಜಾರಿಯಾಗದೆಯೇ ಬಿಬಿಎಂಪಿ ಪರ ವಕೀಲರು ಹಾಜರಾಗಿ ಒಂದು ರೀತಿಯಲ್ಲಿ ಅರ್ಜಿದಾರರ ನಿಲುವು ಬೆಂಬಲಸುವಂತೆ ವಾದ ಮಂಡಿಸಿದ್ದಾರೆ. ಟಿಡಿಆರ್‌ಗೆ ಒಪ್ಪಿಗೆ ನೀಡಿರುವ ಸರ್ಕಾರದ ನಿರ್ಧಾರ ಸರಿಯೇ ಇಲ್ಲವೇ ಎಂಬ ಬಗ್ಗೆ ಪಾಲಿಕೆ ವಕೀಲರಲ್ಲಿ ಉತ್ತರವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅರ್ಜಿದಾರರು 2010-15 ಅವಧಿಯಲ್ಲಿ ಪಾಲಿಕೆ ಸದಸ್ಯರಾಗಿದ್ದರು, ಆಡಳಿತ ಪಕ್ಷದ ನಾಯಕರಾಗಿದ್ದರು. ಆಗ, ಸುಮ್ಮನಿದ್ದು ಈಗ ಪ್ರಶ್ನಿಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಬಿಬಿಎಂಪಿ ಹಾಗೂ ಅರ್ಜಿದಾರರು ಸೇರಿ ಅರ್ಜಿ ಸಲ್ಲಿಸಿದಂತಿದೆ. ಇದೊಂದು ಸಂಶಯಾಸ್ಪದ ಅರ್ಜಿಯಾಗಿದೆ ಎಂದು ಅಭಿಪ್ರಾಯಪಟ್ಟು, ಪಿಐಎಲ್ ವಜಾಗೊಳಿಸಿದ ಹೈಕೋರ್ಟ್, ಅರ್ಜಿದಾರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ 10 ಸಾವಿರ ರೂ. ದಂಡ ವಿಧಿಸಿತು.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಬಿಬಿಎಂಪಿ 2011ರ ಜುಲೈ 8ರಂದು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಭೂಮಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿತ್ತು. ಭೂಮಿ ನೀಡುವವರಿಗೆ ಪರ್ಯಾಯವಾಗಿ ಬೆಂಗಳೂರಿನಲ್ಲಿ ಅಭಿವೃದ್ಧಿ ವರ್ಗಾವಣೆ ಹಕ್ಕು ನೀಡಲಾಗುವುದು ಎಂದು ಹೇಳಿತ್ತು. ಅದರಂತೆ ಕೊಡಿಯಾಲ ಕಾರೇನಹಳ್ಳಿಯ ತಿಮ್ಮಯ್ಯ ಮತ್ತು ಟಿ.ಸಿ. ಮುನಿರಾಜು ಮತ್ತಿತರರು ತಮ್ಮ ಭೂಮಿಯನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಲು ಒಪ್ಪಿದ್ದರು. ಭೂಮಿ ಬಿಬಿಎಂಪಿ ವ್ಯಾಪ್ತಿಯ ಹೊರಗೆ ಬರುವುದರಿಂದ ಅದನ್ನು ಸ್ವಾಧೀನಪಡಿಸಿಕೊಳ್ಳಲು ಪಾಲಿಕೆ ಸರ್ಕಾರದ ಅನುಮತಿ ಕೇಳಿತ್ತು. ಸರ್ಕಾರವೂ ಅನುಮತಿ ನೀಡಿತ್ತು. ಪಾಲಿಕೆ ಭೂ ಸ್ವಾಧೀನ ಮಾಡಿಕೊಂಡವರಗೆ ಪರ್ಯಾಯವಾಗಿ ಟಿಡಿಆರ್ ಅನ್ನು ವಿತರಣೆ ಮಾಡಿದೆ. ಆದು ನಿಯಮಬಾಹಿರವಾಗಿದೆ ಎಂದು ನ್ಯಾಯಪಿಠಕ್ಕೆ ವಿವರಿಸಿದ್ದರು.
ಪಾಲಿಕೆಯು ತನ್ನ ವ್ಯಾಪ್ತಿಯ ಹೊರಗಿನ ಪ್ರದೇಶಕ್ಕೆ ಬೆಂಗಳೂರು ನಗರದೊಳಗಿನ ಟಿಡಿಆರ್ ವಿತರಣೆ ಮಾಡುವ ಮೂಲಕ ಕರ್ನಾಟಕ ನಗರ ಮತ್ತು ಪಟ್ಟಣ ಯೋಜನಾ ಕಾಯ್ದೆ-1961ರ (ಅಭಿವೃದ್ಧಿ ಹಕ್ಕು ವರ್ಗಾವಣೆ-ಟಿಡಿಆರ್) ನಿಯಮ ಉಲ್ಲಂಘನೆ ಮಾಡಿದೆ. ಆದ್ದರಿಂದ, ಟಿಡಿಆರ್ ನೀಡಿರುವ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.
Related Articles
Thank you for your comment. It is awaiting moderation.
Comments (0)