ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ನಾಯಕರ ಫೋಟೋ ಅಳವಡಿಕೆ; ಪಾಲಿಕೆಯಿಂದ ವಿವರಣೆ ಕೇಳಿದ ಹೈಕೋರ್ಟ್
- by Prashanth Basavapatna
- February 10, 2025
- 206 Views

ಬೆಂಗಳೂರು: ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಟ್ಟಡಗಳಲ್ಲಿ ರಾಜಕೀಯ ನಾಯಕರ ಭಾವಚಿತ್ರಗಳನ್ನು ಹಾಕುವುದು ಕರ್ನಾಟಕ ಬಯಲು ಪ್ರದೇಶಗಳ (ವಿರೂಪ ತಡೆ) ಕಾಯ್ದೆ ವ್ಯಾಪ್ತಿಗೆ ಬರಲಿದೆಯೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಬಿಬಿಎಂಪಿ ಹಾಗೂ ಇತರ ಸರ್ಕಾರಿ ಕಟ್ಟಡಗಳಲ್ಲಿ, ಉದ್ಯಾನಗಳಲ್ಲಿ ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಅವರ ಫೋಟೋಗಳನ್ನು ಬಿಬಿಎಂಪಿ ಹಣದಲ್ಲಿ ಹಾಕಿರುವುದನ್ನು ಆಕ್ಷೇಪಿಸಿ ಸ್ಥಳೀಯ ನಿವಾಸಿ ಎಚ್.ಎಂ. ಆರ್ತೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಾಷ್ಟ್ರಪತಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಇಲಾಖಾ ಸಚಿವರು ಚಿತ್ರಗಳನ್ನು ಹೊರತುಪಡಿಸಿ, ಸಂಸದರು, ಶಾಸಕರು ಸೇರಿ ಬೇರೆ ಯಾರ ಚಿತ್ರಗಳನ್ನೂ ಸರ್ಕಾರದ ಕಟ್ಟಡಗಳಲ್ಲಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಹೀಗಿದ್ದರೂ, ಪ್ರಿಯಕೃಷ್ಣ ಮತ್ತು ಕೃಷ್ಣಪ್ಪ ಅವರ ಚಿತ್ರಗಳನ್ನು ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳಲ್ಲಿ ಪಾಲಿಕೆಯ ಹಣದಲ್ಲೇ ಹಾಕಲಾಗಿದೆ ಎಂದು ದೂರಿದರಲ್ಲದೆ, ಅರ್ಜಿದಾರರಿಗೆ ಶಾಸಕರಿಂದ ನಿರಂತರ ಬೆದರಿಕೆ ಇದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಬಿಬಿಎಂಪಿ ವಕೀಲರು ವಾದ ಮಂಡಿಸಿ, ಈ ವಿಚಾರದಲ್ಲಿ ಪಾಲಿಕೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಆಗ ನ್ಯಾಯಪೀಠ, ಫೋಟೋ ಅಳವಡಿಸುವುದು ಬಯಲು ಪ್ರದೇಶಗಳ ವಿರೂಪ ತಡೆ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆಯೇ ಎಂದು ಪ್ರಶ್ನಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಅದು ಗೊತ್ತಿಲ್ಲ. ಆದರೆ, ಬಿಬಿಎಂಪಿ ಸುತ್ತೋಲೆಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ರಾಜಕೀಯ ನಾಯಕರ ಫೋಟೋಗಳನ್ನು ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದರಿಂದ ಕರ್ನಾಟಕ ಬಯಲು ಪ್ರದೇಶಗಳ (ವಿರೂಪ ತಡೆ) ಕಾಯ್ದೆಯ ಉಲ್ಲಂಘನೆ ಆಗಲಿದೆಯೇ, ಈ ವಿಚಾರ ಕಾಯ್ದೆಯ ವ್ಯಾಪ್ತಿಗೆ ಬರಲಿದೆಯೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)