ಮುಡಾ ಮಾಜಿ ಆಯುಕ್ತರ ಸಮನ್ಸ್‌ ರದ್ದತಿ ಆದೇಶಕ್ಕಿಲ್ಲ ತಡೆ; ಇತರ ಆರೋಪಿಗಳ ವಿರುದ್ಧದ ತನಿಖೆ ಮುಂದುವರಿಸಲು ಇಡಿಗೆ ಹೈಕೋರ್ಟ್ ಅಸ್ತು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳನ್ನು (ಸದ್ಯ ಹಿಂಪಡೆಯಲಾಗಿದೆ) ಹಂಚಿಕೆ ಮಾಡಿದ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರಾಗಿದ್ದ ಡಾ. ಡಿ.ಬಿ. ನಟೇಶ್‌ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಜಾರಿ ಮಾಡಿದ್ದ ಸಮನ್ಸ್‌ ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುವ ವಿಭಾಗೀಯ ನ್ಯಾಯಪೀಠ, ಪ್ರಕರಣದ ಇತರ ಆರೋಪಿಗಳ ವಿರುದ್ಧದ ತನಿಖೆ ನಡೆಸಲು ಇಡಿಗೆ ಅನುಮತಿ ನೀಡಿದೆ.

ಏಕಸದಸ್ಯ ನ್ಯಾಯಪೀಠ 2025ರ ಜನವರಿ 27ರಂದು ಹೊರಡಿಸಿದ್ದ ಆದೇಶಕ್ಕೆ ರದ್ದು ಕೋರಿ ಜಾರಿ ನಿರ್ದೇಶನಾಲಯ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಇಡಿ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿತ್ತು.

ಈ ಮಧ್ಯಂತರ ಅರ್ಜಿಯನ್ನು ಬುಧವಾರ ಇತ್ಯರ್ಥಪಡಿಸಿರುವ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂಬ ಮನವಿ ಪುರಸ್ಕರಿಸಲಾಗದು. ಆದರೆ, ಪ್ರಕರಣದ ಇತರ ಆರೋಪಿಗಳ ವಿರುದ್ಧದ ತನಿಖೆ ನಿರ್ಬಂಧಿಸಲಾಗದು ಎಂದು ಅಭಿಪ್ರಾಯಪಟ್ಟು, ತನಿಖೆಗೆ ಅನುಮತಿ ನೀಡಿದೆ.

ಹೈಕೋರ್ಟ್ ಹೇಳಿದ್ದೇನು?

  • ತನಿಖಾ ಸಂಸ್ಥೆ ನಡೆಸುತ್ತಿರುವ ತನಿಖಾ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ಸ್ಥಾಪಿತ ಕಾನೂನು ಹೇಳುತ್ತದೆ. ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯಡಿಯ ಅಪರಾಧ ಅಥವಾ ಮತ್ಯಾವುದೇ ಅಪರಾಧದ ಸಂಬಂಧ ತನಿಖೆ ಮುಂದುವರಿಸಲು ಅನುಮತಿಸುವುದು ಈ ನೆಲದ ಕಾನೂನಿನ ಭಾಗವಾಗಿದೆ.
  • ಪ್ರಕರಣದಲ್ಲಿ ಇತರ ಆರೋಪಿಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಲು ಇಡಿಗೆ ಅನುಮತಿಸದಿರಲು ಯಾವುದೇ ಸೂಕ್ತ ಕಾರಣಗಳಿಲ್ಲ. ಏಕಸದಸ್ಯ ನ್ಯಾಯಪೀಠದ ಆದೇಶದ ಕಾನೂನುಬದ್ಧತೆ ಮತ್ತು ಸೂಕ್ತತೆ ಕುರಿತು ಮುಂದಿನ ದಿನಗಳಲ್ಲಿ ಪರಿಗಣಿಸಬೇಕಿದೆ.
  • ಹೀಗಿರುವಾಗ, ಇಡಿ ತನಿಖೆಯಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ. ಅಪರಾಧದ ತನಿಖೆಯನ್ನು ಸ್ಥಗಿತಗೊಳಿಸಲು ಬಿಡಬಾರದು. ಪ್ರಕರಣದ ವಿಚಿತ್ರ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ತನಿಖೆ ಮುಂದುವರಿಸಲು ಇಡಿಗೆ ಅನುಮತಿಸಬೇಕಿದೆ.
  • ಆಪಾದಿತ ಹಗರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ ಕಾಯ್ದೆ ಅಡಿ ತನಿಖೆಗೆ ಅಡ್ಡಿಯಾಗಬಾರದು ಅಥವಾ ತಡೆಹಿಡಿಯಬಾರದು. ಆದ್ದರಿಂದ, ಪ್ರಕರಣದ ಇತರ ಆರೋಪಿಗಳ ವಿರುದ್ಧದ ತನಿಖೆ ನಡೆಸಲು ಇಡಿಗೆ ಅನುಮತಿ ನೀಡಲಾಗುತ್ತಿದೆ.

ಏಕಸದಸದ್ಯ ಪೀಠದ ಆದೇಶಕ್ಕಿಲ್ಲ ತಡೆ:
ಈಗಾಗಲೇ ತನಿಖಾ ಸಂಸ್ಥೆಯ ಮುಂದೆ ನಟೇಶ್‌ ನೀಡಿರುವ ಹೇಳಿಕೆ ಹಿಂಪಡೆಯಬಹುದೇ ಎಂಬ ವಿಚಾರವನ್ನು ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ವಿಸ್ತೃತ ನೆಲೆಯಲ್ಲಿ ಪರಿಗಣಿಸಬೇಕಿದೆ. ಆದ್ದರಿಂದ, ಸದ್ಯ ನಟೇಶ್‌ ವಿರುದ್ಧದ ಇಡಿ ಜಾರಿ ಮಾಡಿದ್ದ ಸಮನ್ಸ್‌ ರದ್ದುಪಡಿಸಿರುವ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಲಾಗದು. ಆದರೆ, ನಟೇಶ್‌ ಅವರ ಮನೆ ಜಪ್ತಿ ಮತ್ತು ಶೋಧದ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ದಾಖಲೆಗಳು ಮತ್ತು ಅವರ ಹೇಳಿಕೆ ದಾಖಲಿಸಿಕೊಂಡಿರುವುದನ್ನು ಮುಂದಿನ ತನಿಖೆಗೆ ಕಾನೂನಿನ ಅನ್ವಯ ಇಡಿ ಬಳಕೆ ಮಾಡಿಕೊಳ್ಳಬಹುದು. ನಟೇಶ್‌ ಪ್ರಕರಣ ಬಾಕಿ ಉಳಿದಿರುವುದರಿಂದ ಅವರಿಗೆ ಯಾವುದೇ ಪೂರ್ವಾಗ್ರಹ (ಅಡಚಣೆ) ಉಂಟಾಗುವುದಿಲ್ಲ. ಏಕಸದಸ್ಯ ನ್ಯಾಯಪೀಠದ ಆದೇಶದ ಹೊರತಾಗಿ ಪಿಎಂಎಲ್‌ ಕಾಯ್ದೆ ಅಡಿಯ ಕಾನೂನಿನ ಅನ್ವಯ ತನಿಖೆಗೆ ಅನುಮತಿಸಲಾಗಿದ್ದು, ಅದರಂತೆ ತನಿಖೆ ನಡೆಸುವ ಅರ್ಹತೆಯನ್ನು ಇಡಿ ಹೊಂದಿದೆ ಎಂದು ನ್ಯಾಯಪೀಠ ಹೇಳಿದೆ.

Related Articles

Comments (0)

Leave a Comment