ಮೆಟ್ರೊ ರೈಲು ದರ ನಿಗದಿ ಸಮಿತಿಯ ವರದಿ ಬಹಿರಂಗ ಬಗ್ಗೆ ನಿಲುವು ತಿಳಿಸಿ; ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ಸೂಚನೆ
- by Ramya B T
- September 8, 2025
- 17 Views

ಬೆಂಗಳೂರು: ಮೆಟ್ರೊ ರೈಲು ಪ್ರಯಾಣ ದರ ಪರಿಷ್ಕರಣೆ ಸಂಬಂಧ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ತಾರಿಣಿ ಅವರ ನೇತೃತ್ವದ ‘ಮೆಟ್ರೊ ರೈಲು ದರ ನಿಗದಿ ಸಮಿತಿ’ ಸಲ್ಲಿಸಿರುವ ವರದಿ ಸಾರ್ವಜನಿಕಗೊಳಿಸುವ ಕುರಿತು ನಿಲುವು ತಿಳಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ತಾರಿಣಿ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿ ಬಹಿರಗಂಪಡಿಸಲು ಆದೇಶಿಸುವಂತೆ ಕೋರಿ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಸಂಸದರ ಪರ ವಕೀಲರು ವಾದ ಮಂಡಿಸಿ, ಅರ್ಜಿಗೆ ಬಿಎಂಆರ್‌ಸಿಎಲ್ ಆಕ್ಷೇಪಣೆ ಸಲ್ಲಿಸಿದೆ. ದರ ನಿಗದಿ ಸಮಿತಿ ವರದಿಯನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲು ಜುಲೈನಲ್ಲಿ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಬಿಎಂಆರ್‌ಸಿಎಲ್ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇನ್ನೂ ವೆಬ್‌ಸೈಟ್ ನಲ್ಲಿ ವರದಿ ಪ್ರಕಟಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ನ್ಯಾಯಮೂರ್ತಿ ತಾರಿಣಿ ನೇತೃತ್ವದ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗಪಡಿಸುವ ಕುರಿತು ನಿಲುವು ತಿಳಿಸುವಂತೆ ಬಿಎಂಆರ್‌ಸಿಎಲ್ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ ಏನು?
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದಿಮೆಯಾಗಿದೆ. ಸಾರ್ವಜನಿಕ ನಿಧಿಯನ್ನು ಬಳಕೆಯಾಗುತ್ತಿರುವ ನಿಗಮವು ಪಾರದರ್ಶಕವಾಗಿ ಸೇವೆ ಒದಗಿಸಬೇಕಿದ್ದು, ದರ ಏರಿಕೆ ಸಂಬಂಧಿಸಿದ ವರದಿ ಬಹಿರಂಗ ಪಡಿಸುವುದು ಬಿಎಂಆರ್‌ಸಿಎಲ್ ಕರ್ತ್ಯವವಾಗಿರಲಿದೆ. ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ದರ ನಿಗದಿಗೆ ಸಂಬಂಧಿಸಿದ ವರದಿಯನ್ನು ಈ ಹಿಂದೆ ದೆಹಲಿ, ಮುಂಬೈ ಮತ್ತು ಹೈದರಾಬಾದ್ ಮೆಟ್ರೊ ರೈಲು ನಿಗಮಗಳು ಸಾರ್ವಜನಿಕಗೊಳಿಸಿದ್ದವು. ಆದ್ದರಿಂದ, ಸ್ವೇಚ್ಛೆಯಿಂದ ನಡೆದುಕೊಳ್ಳುವುದನ್ನು ಬಿಟ್ಟು ಬಿಎಂಆರ್‌ಸಿಎಲ್ ಸಹ ವರದಿ ಬಹಿರಂಗಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿದಾರರು ಮೆಟ್ರೊ ರೈಲು ಸಂಚರಿಸುವ ಕ್ಷೇತ್ರ ಪ್ರತಿನಿಧಿಸುವ ಸಂಸದರಾಗಿದ್ದು, ಹಲವು ಸಂದರ್ಭಗಳಲ್ಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಆದ್ದರಿಂದ, ವರದಿಯಲ್ಲಿನ ಅಂಶಗಳನ್ನು ತಿಳಿದುಕೊಳ್ಳಲು ಅವಕಾಶ ನೀಡಬೇಕು. ವರದಿ ಬಹಿರಂಗ ಪಡಿಸುವಂತೆ 2025ರ ಏಪ್ರಿಲ್ ತಿಂಗಳಿನಿಂದ ಈವರೆಗೂ 3 ಬಾರಿ ಮನವಿ ಸಲ್ಲಿಸಿದ್ದು, ವರದಿ ಬಹಿರಂಗಪಡಿಸುವಲ್ಲಿ ಬಿಎಂಆರ್‌ಸಿಎಲ್ ವಿಫಲವಾಗಿದೆ. ಸಾರ್ವಜನಿಕ ಪ್ರಾಧಿಕಾರವಾಗಿರುವ ನಿಗಮವು ಜನರ ಮೇಲೆ ಪರಿಣಾಮ ಬೀರುವಂತಹ ನಿರ್ಧಾರಗಳನ್ನು ತೆಗೆದುಕೊಂಡ ಸಂದರ್ಭದಲ್ಲಿ ಅದನ್ನು ಬಹಿರಂಗ ಪಡಿಸಬೇಕಾಗುತ್ತದೆ. ವರದಿಯನ್ನು ಬಹಿರಂಗ ಪಡಿಸದಂತೆ ಯಾವುದೇ ಕಾನೂನಿನಲ್ಲಿ ತಿಳಿಸಿಲ್ಲ. ಆದ್ದರಿಂದ, ಸಾರ್ವಜನಿಕ ಪ್ರಾಧಿಕಾರವಾಗಿರುವ ಬಿಎಂಆರ್‌ಸಿಎಲ್‌ಗೆ ವರದಿ ಬಹಿರಂಗ ಪಡಿಸುವಂತೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Related Articles
Thank you for your comment. It is awaiting moderation.
Comments (0)