ಹಾಸನ, ಮೈಸೂರು ಪ್ರವೇಶಕ್ಕೆ ಭವಾನಿ ರೇವಣ್ಣಗೆ ಹೈಕೋರ್ಟ್ ಅನುಮತಿ; ಜಾಮೀನು ಷರತ್ತು ಸಡಿಲಿಕೆ ಕೋರಿದ್ದ ಅರ್ಜಿ ಮಾನ್ಯ
- by Jagan Ramesh
- April 4, 2025
- 69 Views

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಎದುರಿಸುತ್ತಿರುವ ಭವಾನಿ ರೇವಣ್ಣ ಅವರಿಗೆ ಮೈಸೂರು ಹಾಗೂ ಹಾಸನ ಜಿಲ್ಲೆಗಳಿಗೆ ಪ್ರವೇಶಿಸಲು ಹೈಕೋರ್ಟ್ ಅನುಮತಿ ನೀಡಿದೆ.
ನಿರೀಕ್ಷಣಾ ಜಾಮೀನು ಷರತ್ತು ಸಡಿಲಿಕೆಗೆ ಕೋರಿ ಅಪಹರಣ ಪ್ರಕರಣದ ಎಂಟನೇ ಆರೋಪಿಯಾಗಿರುವ ಭವಾನಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪುರಸ್ಕರಿಸಿದೆ.
ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಲಾಗಿದ್ದು, ನಿರೀಕ್ಷಣಾ ಜಾಮೀನು ಷರತ್ತು ಸಡಿಲಿಕೆ ಮಾಡಲಾಗಿದೆ. ಅರ್ಜಿದಾರರಿಗೆ ಮೈಸೂರು ಹಾಗೂ ಹಾಸನ ಜಿಲ್ಲೆಗಳಿಗೆ ಪ್ರವೇಶಿಸಲು ಅನುಮತಿಸಲಾಗಿದೆ. ಆದರೆ, ಭವಾನಿ ಅವರು ಪ್ರಕರಣದ ಸಂತ್ರಸ್ತೆ ಮತ್ತು ಸಾಕ್ಷಿಗಳು ವಾಸಿಸುವ ಸ್ಥಳದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಓಡಾಡುವಂತಿಲ್ಲ. ಈ ಆದೇಶವನ್ನು ಭವಾನಿ ಅವರು ಉಲ್ಲಂಘಿಸಿದರೆ ನ್ಯಾಯಾಲಯದ ಮೆಟ್ಟಿಲೇರಲು ಸರ್ಕಾರ ಸ್ವತಂತ್ರವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ವಿಚಾರಣೆ ವೇಳೆ ಭವಾನಿ ರೇವಣ್ಣ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಐಪಿಸಿ ಸೆಕ್ಷನ್ 364ಎ (ಅಪಹರಣ) ಅನ್ನು ಕೈಬಿಡಲಾಗಿದೆ. ಪ್ರಕರಣದ ಉಳಿದ ಆರು ಆರೋಪಿಗಳಿಗೆ ಎಲ್ಲಿಯಾದರೂ ಓಡಾಡಲು ಅನುಮತಿಸಲಾಗಿದೆ. ಮೊದಲನೇ ಆರೋಪಿ ಎಚ್.ಡಿ. ರೇವಣ್ಣ ಅವರಿಗೆ ಮಾತ್ರ ಕೆ.ಆರ್. ನಗರ ಪ್ರವೇಶ ನಿರ್ಬಂಧಿಸಲಾಗಿದೆ. ಕಳೆದ ವರ್ಷ ಹಾಸನದಲ್ಲಿ ದೇವಸ್ಥಾನಕ್ಕೆ ತೆರಳಲು ನೀಡಿದ್ದ 10 ದಿನಗಳ ಅನುಮತಿ ನೀಡಿದ್ದಾಗಲೂ ಯಾವುದೇ ಷರತ್ತು ಉಲ್ಲಂಘನೆಯಾಗಿಲ್ಲ. ಅರ್ಜಿದಾರರಿಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಆದ್ದರಿಂದ, ಜಾಮೀನು ಷರತ್ತು ಸಡಿಲಿಸಬೇಕು ಎಂದು ಮನವಿ ಮಾಡಿದ್ದರು.
ಪ್ರಾಸಿಕ್ಯೂಷನ್ ಆಕ್ಷೇಪ:
ಅರ್ಜಿಗೆ ಆಕ್ಷೇಪಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್, ಸಂತ್ರಸ್ತೆ ಅಪಹರಣದಲ್ಲಿ ಭವಾನಿ ಮಾಸ್ಟರ್ ಮೈಂಡ್ ಆಗಿದ್ದಾರೆ. ಪ್ರಜ್ವಲ್ ದೇಶ ತೊರೆಯುವಲ್ಲಿಯೂ ಅವರ ಪಾತ್ರವಿದೆ. ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡುವವರೆಗೂ ಅವರು ನಾಪತ್ತೆಯಾಗಿದ್ದರು. ಅವರು ತಮ್ಮ ಮೊಬೈಲ್ ಅನ್ನು ಇಂದಿಗೂ ತನಿಖಾಧಿಕಾರಿಗೆ ಒಪ್ಪಿಸಿಲ್ಲ. ಪ್ರಕರಣದಲ್ಲಿ 9ನೇ ಆರೋಪಿಯಾಗಿರುವ ಭವಾನಿ ಅವರ ಕಾರು ಚಾಲಕ ಈವರೆಗೂ ಪತ್ತೆಯಾಗಿಲ್ಲ. ಆತನ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಯಾಗಿದೆ. ಎಸ್‌ಐಟಿ ಅಧಿಕಾರಿಗಳು ವಿಸ್ತೃತ ತನಿಖೆ ನಡೆಸಿ, ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪ ನಿಗದಿಗೂ ಮುನ್ನ ವಾದ-ಪ್ರತಿವಾದ ನಡೆಯುತ್ತಿದೆ. ಕನಿಷ್ಠ ಪಕ್ಷ ಸಂತ್ರಸ್ತೆಯರ ವಿಚಾರಣೆ ಪೂರ್ಣಗೊಳ್ಳುವವರೆಗೆ ಅರ್ಜಿದಾರರಿಗೆ ಹಾಸನ ಮತ್ತು ಮೈಸೂರು ಜಿಲ್ಲೆಗಳ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಮುಂದುವರಿಸಬೇಕು ಎಂದು ಕೋರಿದ್ದರು.
Related Articles
Thank you for your comment. It is awaiting moderation.
Comments (0)