ವೇತನಸಹಿತ ಋತುಚಕ್ರ ರಜೆ ನೀತಿ ಸಮರ್ಥಿಸಿಕೊಂಡ ಸರ್ಕಾರ; ಅಧಿಸೂಚನೆ ತಡೆಗೆ ಹೈಕೋರ್ಟ್ ನಕಾರ
- by Ramya B T
- December 10, 2025
- 215 Views
ಬೆಂಗಳೂರು: ರಾಜ್ಯದ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿರುವ ಕ್ರಮವನ್ನು ರಾಜ್ಯ ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿದೆ. ಇದೇ ವೇಳೆ, ಸಾರ್ವಜನಿಕ ದೃಷ್ಟಿಯಿಂದ ಅತ್ಯಂತ ಮಹತ್ವದ ಈ ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸರ್ಕಾರದ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿದೆ.
ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರು ಹೋಟೆಲ್ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಫೆಸಿಲ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್, ಸ್ಯಾಮೋಸ್ ಟೆಕ್ನಾಲಜೀಸ್ ಲಿಮಿಟೆಡ್ಗಳ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ಅರ್ಜಿಗಳಿಗೆ ಸರ್ಕಾರ ಆಕ್ಷೇಪಣೆಗಳನ್ನು ಸಲ್ಲಿಸಿದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ, ಅರ್ಜಿದಾರರಿಗೆ ಪ್ರತಿಗಳನ್ನು ಒದಗಿಸಲಾಗುವುದು ಎಂದರು.
ದೇಶದಲ್ಲೇ ಮೊದಲು:
ವಾದ ಮುಂದುವರಿಸಿದ ಅಡ್ವೊಕೇಟ್ ಜನರಲ್, ಮಹಿಳೆಯರ ಹಿತದೃಷ್ಟಿಯಿಂದ ದೇಶದ ಬೇರಾವುದೇ ರಾಜ್ಯದಲ್ಲಿ ಜಾರಿಗೊಳಿಸದ ಪ್ರಗತಿಪರ ಕಾನೂನನ್ನು ಸರ್ಕಾರ ಜಾರಿಗೊಳಿಸಿದೆ. 72 ಆಕ್ಷೇಪಣೆಗಳು ಬಂದಿದ್ದು, ಎಲ್ಲವನ್ನೂ ಆಲಿಸಲಾಗಿದೆ. ಸಂವಿಧಾನದ 42ನೇ ಪರಿಚ್ಛೇದದ ಅಡಿ ನೀತಿ ರೂಪಿಸಲು ಸರ್ಕಾರಕ್ಕೆ ಅವಕಾಶವಿದೆ. ಈ ಸಂಬಂಧ ಸುಪ್ರೀಂಕೋರ್ಟ್ ನಿರ್ದೇಶನವೂ ಇದೆ. ಕಾನೂನು ಆಯೋಗವೂ ಈ ಕುರಿತು ಶಿಫಾರಸು ಮಾಡಿದೆ. ಇದೆಲ್ಲವನ್ನೂ ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಸರ್ಕಾರದ ಅಧಿಸೂಚನೆ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸಲಿದೆಯೇ ಎಂಬ ನ್ಯಾಯಪೀಠದ ಪ್ರಶ್ನೆಗೆ ಅಡ್ವೊಕೇಟ್ ಜನರಲ್ ಹೌದು ಎಂದು ಉತ್ತರಿಸಿದರು. ಇದನ್ನು ಆಲಿಸಿದ ನ್ಯಾಯಪೀಠ, ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದ್ದು, ಜನವರಿಯಲ್ಲಿ ನಡೆಸಲಾಗುವುದು. ಅಷ್ಟರಲ್ಲಿ ಸರ್ಕಾರ ಸಲ್ಲಿಸಿರುವ ಆಕ್ಷೇಪಣೆಗಳಿಗೆ ಪ್ರತಿಕ್ರಿಯೆಗಳಿದ್ದರೆ ಅರ್ಜಿದಾರರು ಸಲ್ಲಿಸಬಹುದು ಎಂದು ಹೇಳಿತು.
ಅರ್ಜಿದಾರರ ಪರ ವಕೀಲ ಬಿ.ಕೆ. ಪ್ರಶಾಂತ್ ಅವರು, ಅಲ್ಲಿಯವರೆಗೆ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಬೇಕು ಎಂದು ಕೋರಿದರು. ಇದಕ್ಕೆ ಅಡ್ವೋಕೇಟ್ ಜನರಲ್ ಅವರು, ಸರ್ಕಾರ ಈ ಆದೇಶವನ್ನು ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿಯೂ ಜಾರಿಗೊಳಿಸಿಯಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ನ್ಯಾಯಮೂರ್ತಿಗಳು, ಅರ್ಜಿಯ ಮುಂದಿನ ವಿಚಾರಣೆಯೊಳಗೆ ಏನೂ ಆಗುವುದಿಲ್ಲ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರಕರಣವಾಗಿದೆ. ಈ ಸಂಬಂಧ ವಿಸ್ತೃತವಾಗಿ ವಾದ ಆಲಿಸಿದ ಬಳಿಕವೇ ಆದೇಶ ಹೊರಡಿಸಲಾಗುವುದು, ವಿಚಾರಣೆಗೆ ದಿನ ನಿಗದಿಪಡಿಸಲಾಗುವುದು ಎಂದರು.
ಅಂತಿಮವಾಗಿ ನ್ಯಾಯಪೀಠ, ಸರ್ಕಾರದ ಆಕ್ಷೇಪಣೆಗೆ ಪ್ರತ್ಯುತ್ತರ ದಾಖಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು. ಜತೆಗೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವವರು ರಿಜಿಸ್ಟ್ರಾರ್ ಕಚೇರಿಯಲ್ಲಿ ಸಲ್ಲಿಸಿ, ಅರ್ಜಿಯ ಪ್ರತಿನ್ನು ಸರ್ಕಾರದ ಪರ ವಕೀಲರಿಗೆ ಒದಗಿಸಬೇಕು ಎಂದು ಸೂಚಿಸಿತು.
Related Articles
Thank you for your comment. It is awaiting moderation.


Comments (0)