ಜಯನಗರ ಕ್ಷೇತ್ರದ ಮತಗಳ ಮರು ಎಣಿಕೆ ಪ್ರಕ್ರಿಯೆ ಕಾನೂನುಬಾಹಿರ; ಹೈಕೋರ್ಟ್‌ನಲ್ಲಿ ಸೌಮ್ಯಾ ರೆಡ್ಡಿ ಪ್ರತಿಪಾದನೆ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವೇಳೆ ನಡೆದ ಮತಗಳ ಮರುಪರಿಶೀಲನೆ ಮತ್ತು ಮರು ಎಣಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿತ್ತು ಎಂದು ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಸೌಮ್ಯರೆಡ್ಡಿ ಹೈಕೋರ್ಟ್‌ಗೆ ದೂರಿದ್ದಾರೆ.

ಮತದಾನದ ವೇಳೆ ಚಲಾವಣೆಯಾದ ಎಲ್ಲ 827 ಅಂಚೆ ಮತಗಳನ್ನು ಮರು ಎಣಿಕೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಸೌಮ್ಯಾ ರೆಡ್ಡಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ಸಾಕ್ಷಿ ವಿಚಾರಣೆಗೆ ಹಾಜರಾಗಿ ಪ್ರತಿವಾದಿಯಾಗಿರುವ ವಿಜೇತ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಪರ ವಕೀಲರ ಸವಾಲುಗಳಿಗೆ ಸೌಮ್ಯಾ ರೆಡ್ಡಿ ಉತ್ತರಿಸಿದರು.

ರಾಮಮೂರ್ತಿ ಪರ ವಕೀಲರು, ನಿಮ್ಮ ಮನವಿಯಂತೆ ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರು ತಿರಸ್ಕೃತಗೊಂಡ 198 ಅಂಚೆ ಮತಗಳಲ್ಲಿ ಮರು ಪರಿಶೀಲಿಸಿ ಅದರಲ್ಲಿ 124 ಮತಗಳು ಸಿಂಧು ಎಂದು ನಿರ್ಧರಿಸಿದ್ದು, ಬಳಿಕ ಒಟ್ಟಾರೆ ಮತಗಳ ಮರು ಎಣಿಕೆ, ಮರು ಪರಿಶೀಲನೆ ನಡೆಸಿದ ನಂತರ ಅಂತಿಮವಾಗಿ ಸಿ.ಕೆ. ರಾಮಮೂರ್ತಿ 16 ಮತಗಳ ಅಂತರಿಂದ ಗೆಲವು ಸಾಧಿಸಿದ್ದಾಗಿ ಘೋಷಿಸಿದ್ದು ಹೌದೇ ಎಂದು ಸೌಮ್ಯಾ ರೆಡ್ಡಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸೌಮ್ಯಾ ರೆಡ್ಡಿ, ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರ ಘೋಷಣೆ ತಾಂತ್ರಿಕವಾಗಿ ಸರಿ ಹೌದು. ಆದರೆ, ಮತಗಳ ಮರು ಎಣಿಕೆ ಮತ್ತು ಮರು ಪರಿಶೀಲನೆ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿ ಮಾಡಲಾಗಿದೆ ಎನ್ನುವುದು ನನ್ನ ಬಲವಾದ ಆಕ್ಷೇಪವಾಗಿತ್ತು. ಅದಕ್ಕಾಗಿಯೇ ನಾನು ಹೈಕೋರ್ಟ್ ಮೆಟ್ಟಿಲೇರಿದ್ದೇನೆ ಎಂದರು.

ಇದೇ ವೇಳೆ ವಕೀಲರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸೌಮ್ಯಾ ರೆಡ್ಡಿ, ನಾನು 42 ಮತಗಳ ಅಂತದಿಂದ ಗೆದ್ದಿದ್ದೇನೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಯಿತು. ಅದನ್ನು ನೋಡಿ ಗೆಲುವಿನ ಸರ್ಟಿಫಿಕೇಟ್ ಪಡೆದುಕೊಳ್ಳಲು ಮತ ಎಣಿಕೆ ಕೇಂದ್ರಕ್ಕೆ ತೆರಳಿದಾಗ ಈ ಎಲ್ಲ ವಿವಾದ, ಗೊಂದಲ ಪ್ರಾರಂಭವಾಯಿತು ಎಂದರು. ಇದರ ಜತೆಗೆ ವಕೀಲರ ಇನ್ನೂ ಕೆಲವು ಪ್ರಶ್ನೆಗಳಿಗೆ ಸೌಮ್ಯಾ ರೆಡ್ಡಿ ಉತ್ತರ ನೀಡಿದರು.

ಸಾಕ್ಷಿ ವಿಚಾರಣೆಗೆ ವಕೀಲರ ಇನ್ನೂ ಕೆಲ ಪ್ರಶ್ನೆಗಳು ಇದ್ದ ಕಾರಣಕ್ಕೆ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 6ರ ಮಧ್ಯಾಹ್ನ 3.30ಕ್ಕೆ ಮುಂದೂಡಿತು.

Related Articles

Comments (0)

Leave a Comment