ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ; ಪ್ರಚೋದನಕಾರಿ ಭಾಷಣ ಮಾಡಿದ ಆರೋಪ
- by Jagan Ramesh
- November 13, 2024
- 216 Views
ಬೆಂಗಳೂರು: ವಕ್ಫ್ ಆಸ್ತಿ ವಿವಾದದ ಸಂಬಂಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಅದರ ಸಂಬಂಧ ನೀಡಿರುವ ಪೊಲೀಸ್ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಹಾವೇರಿ ಜಿಲ್ಲೆಯ ಸವಣೂರು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ನವೆಂಬರ್ 16ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೀಡಿರುವ ನೋಟಿಸ್ ರದ್ದು ಕೋರಿ ಬಸವರಾಜ ಬೊಮ್ಮಾಯಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ಇದಕ್ಕೂ ಮುನ್ನ ಬೊಮ್ಮಾಯಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ, ಯಾವುದೇ ಆಕ್ಷೇಪಾರ್ಹ ಮಾತುಗಳನ್ನು ಆಡದಿದ್ದರೂ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬೇರೆಯವರು ಹೇಳಿದ್ದನ್ನು ಅರ್ಜಿದಾರರಿಗೆ ಅನ್ವಯಿಸುವುದು ಬೇಡ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ನಾವು ಬೇರೊಬ್ಬರ ಪರವಾಗಿ ಮಾತನಾಡಲಾಗದು. ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ ಎಂದು ಹೇಳುತ್ತಿಲ್ಲ. ಆದರೆ, ದೂರಿನಲ್ಲಿನ ಕೊನೆಯ ನಾಲ್ಕು ಸಾಲುಗಳಲ್ಲಿನ ಹೇಳಿಕೆಗಳು ಬೇಕಿರಲಿಲ್ಲ ಎಂದರು.
ಆಗ ನ್ಯಾಯಪೀಠ, ಪ್ರತಿಯೊಂದು ಕ್ರಿಯೆಗೂ ವಿರುದ್ಧ ಮತ್ತು ಸಮನಾದ ಪ್ರತಿಕ್ರಿಯೆ ಇರುತ್ತದೆ. ಹಾಗೆಯೇ ಪ್ರತಿಯೊಂದು ಹೇಳಿಕೆಗೂ ತಕ್ಕ ಪ್ರತಿಕ್ರಿಯೆ ಇರುತ್ತದೆ ಎಂದು ಮೌಖಿಕವಾಗಿ ನುಡಿಯಿತಲ್ಲದೆ, ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ವಿಧಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣವೇನು?
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಅರವಿಂದ್ ಬೆಲ್ಲದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮತ್ತು ಮಾಜಿ ಶಾಸಕ ಅರುಣ್‌ಕುಮಾರ್ ಪೂಜಾರ್ ಅವರು ನವೆಂಬರ್ 4ರಂದು ಸವಣೂರಿನ ಭರಮದೇವರ ಸರ್ಕಲ್ ಬಳಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಸವಣೂರಿನಲ್ಲಿ ನಿಂತು ಎಲ್ಲೇ ಕಲ್ಲು ಎಸೆದರೂ ಅದು ಬಿದ್ದ ಜಾಗ ವಕ್ಫ್ ಆಸ್ತಿ ಎನ್ನುವಂತಾಗಿದೆ. ಭೋವಿ ಸಮಾಜದವರಿಗೆ ಮನೆ ನಿರ್ಮಿಸಬೇಕೆಂದು 3 ವರ್ಷಗಳ ಹಿಂದೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಆ ಜಾಗವನ್ನೂ ವಕ್ಫ್ ಆಸ್ತಿ ಎನ್ನುತ್ತಾರೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಬಸವರಾಜ ಬೊಮ್ಮಾಯಿ ಮೇಲಿದೆ.
ಸಿ.ಟಿ. ರವಿ ಅವರು, ನಮಗೆ ಸಂವಿಧಾನ ದೊಡ್ಡದೋ ಅಥವಾ ಶರಿಯಾ ಕಾನೂನು ದೊಡ್ಡದೋ? ರೈತರ ಜಮೀನು, ದೇವಸ್ಥಾನಗಳು, ಕೆರೆಗಳ ಜಾಗವನ್ನು ವಕ್ಫ್ ಹೆಸರಿನಲ್ಲಿ ನೋಂದಾಯಿಸುತ್ತಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರ ಶರಿಯಾ ಕಾನೂನು ಇಲ್ಲಿ ನಡೆಯಲ್ಲ. 1,600 ವರ್ಷಗಳ ಹಿಂದೆ ನಿರ್ಮಿಸಿರುವ ಸೋಮೇಶ್ವರ ದೇವಸ್ಥಾನ ನಮ್ಮದು ಎನ್ನುತ್ತಿದ್ದಾರೆ. ಇವರಿಗೆ ಯಾವುದರಲ್ಲಿ ಹೊಡೆಯಬೇಕು” ಎಂದು ಕೇಳಿದ್ದರು. ಮುಂದುವರಿದು, 1947ರಲ್ಲಿ ಸಾಬರಿಗೆ ಪಾಕಿಸ್ತಾನ, ಹಿಂದುಗಳಿಗೆ ಇಂಡಿಯಾ ಕೊಟ್ಟು ಲೆಕ್ಕ ಚುಕ್ತಾ ಮಾಡಲಾಗಿದೆ. ಆದರೂ, ನಮ್ಮ ರೈತರ ಜಮೀನು, ದೇವಸ್ಥಾನ ಬೇಕಂತೆ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದರು ಗುಪ್ತ ಮಾಹಿತಿ ಸಂಗ್ರಹಿಸುವ ಪೇದೆ ಮಂಜುನಾಥ ಮಣ್ಣಿಯವರ್ ಸವಣೂರು ಠಾಣಾಧಿಕಾರಿಗೆ ನವೆಂಬರ್ 4ರಂದು ದೂರು ನೀಡಿದ್ದರು.
ಇದರ ಅನ್ವಯ ಎಲ್ಲರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 196(1)(a) ಅಡಿ ಪ್ರಕರಣ ದಾಖಲಿಸಲಾಗಿದೆ. ಬಿಎನ್‌ಎಸ್‌ಎಸ್ ಸೆಕ್ಷನ್ 35 (3) ಅಡಿ ನವೆಂಬರ್ 7ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿದೆ.
Related Articles
Thank you for your comment. It is awaiting moderation.
Comments (0)