ಕಾಂತಾರ ದೈವಪಾತ್ರಗಳ ಅಪಹಾಸ್ಯ; ರಣವೀರ್ ಸಿಂಗ್ ಕ್ಷಮಾಪಣಾ ಪ್ರಮಾಣಪತ್ರಕ್ಕೆ ದೂರುದಾರರ ಆಕ್ಷೇಪ
- by Jagan Ramesh
- April 10, 2026
- 19 Views
ಬೆಂಗಳೂರು: ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಕೃತ್ಯಕ್ಕೆ ಕ್ಷಮೆಯಾಚಿಸಿ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಯಾವುದೇ ರೀತಿಯ ಪ್ರಾಮಾಣಿಕ ಪಶ್ಚಾತ್ತಾಪ ವ್ಯಕ್ತಪಡಿಸಲಾಗಿಲ್ಲ ಎಂದು ದೂರುದಾರರ ಪರ ವಕೀಲರು ಆಕ್ಷೇಪಿಸಿದರು.
ದೈವಗಳನ್ನು ಅಪಹಾಸ್ಯ ಮಾಡಿದ, ಚಾವುಂಡಿ ದೈವವನ್ನು ‘ಹೆಣ್ಣು ದೆವ್ವ’ ಎಂದು ಕರೆದ ಆರೋಪ ಸಂಬಂಧ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹಾಜರಾಗಿ, ಅರ್ಜಿದಾರರ ಕ್ಷಮೆಯಾಚನೆಯ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮೈಸೂರಿನಲ್ಲಿರುವ ದೇವಸ್ಥಾನಕ್ಕೂ ಭೇಟಿ ನೀಡುವುದಾಗಿ ಅರ್ಜಿದಾರರು ಪ್ರಮಾಣಪತ್ರದಲ್ಲಿ ಭರವಸೆ ನೀಡಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಖಾಸಗಿ ದೂರುದಾರ ಪ್ರಶಾಂತ್ ಮೆಥಲ್ ಪರ ವಕೀಲರು, ಪ್ರಮಾಣಪತ್ರದ 3ನೇ ಪ್ಯಾರಾ ಗಮನಿಸಿದರೆ, ನೈಜ ಮನೋಭಾವದಿಂದ ಪ್ರಮಾಣಪತ್ರ ಸಲ್ಲಿಸಿಲ್ಲ. ಅದರಲ್ಲಿ ಯಾವುದೇ ಪ್ರಾಮಾಣಿಕ ಪಶ್ಚಾತ್ತಾಪವಿಲ್ಲ. ಅವರು ಏನು ಹೇಳಿದ್ದರೋ ಅದನ್ನು ಪ್ರಮಾಣಪತ್ರದಲ್ಲಿ ನಿರ್ದಿಷ್ಟವಾಗಿ ತಿಳಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದೂರುದಾರರ ಪರ ವಕೀಲರು ಆಕ್ಷೇಪಿಸಿದ ಸಾಲುಗಳನ್ನು ಓದಿದ ಸಜನ್ ಪೂವಯ್ಯ “ಘಟನೆ ನಡೆದ ದಿನದಂದು ನಾನು ದೈವದ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದೇನೆ ಎನ್ನುವುದು ನನಗೆ ಅರಿವಾಗಿರಲಿಲ್ಲ. ನಾನು ಮುಂಬೈನ ಸಿಂಧಿ ಕುಟುಂಬದಲ್ಲಿ ಬೆಳೆದವನು ಮತ್ತು ಈ ಸೂಕ್ಷ್ಮತೆಗಳ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಆದ್ದರಿಂದ, ಈ ಪ್ರಮಾಣಪತ್ರದ ಮೂಲಕ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಘಟನೆಗಾಗಿ ನನ್ನ ಪ್ರಾಮಾಣಿಕ ಬೇಷರತ್ ಕ್ಷಮೆಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಮೈಸೂರಿನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತೇನೆ ಮತ್ತು ನನ್ನ ಭಕ್ತಿಯನ್ನು ವ್ಯಕ್ತಪಡಿಸುತ್ತೇನೆ. ವಿಷಯ ತಿಳಿದ ತಕ್ಷಣ ನಾನು ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಿದ್ದೇನೆ” ಎಂದು ರಣವೀರ್ ಸಿಂಗ್ ಪ್ರಮಾಣಪತ್ರದಲ್ಲಿರುವ ಅಂಶಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನೊಪ್ಪದ ದೂರುದಾರರ ಪರ ವಕೀಲರು, ಅರ್ಜಿದಾರರ ಕ್ಷಮಾಪಣಾ ಪ್ರಮಾಣಪತ್ರ ನೋಡಿದರೆ ನಾವೇ ತಪ್ಪಾಗಿ ದೂರು ನೀಡಿರುವಂತಿದೆ. ಘಟನಾ ಸ್ಥಳದಲ್ಲಿದ್ದ ನಟ ರಿಷಬ್ ಶೆಟ್ಟಿ ಅವರು ಆ ರೀತಿ ಮಾಡದಂತೆ ಸ್ಪಷ್ಟವಾಗಿ ಹೇಳಿದ್ದಾರೆ. ಅರ್ಜಿದಾರರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಪ್ರಾಮಾಣಿಕವಾಗಿ ಪಶ್ಚಾತಾಪ ವ್ಯಕ್ತಪಡಿಸಲಾಗಿಲ್ಲ. ಆದ್ದರಿಂದ, ಸರಿಯಾದ ರೀತಿಯಲ್ಲಿ ಅಫಿಡವಿಟ್ ಸಲ್ಲಿಸಲಿ. ಅದರಲ್ಲಿ ಅವರು ಹೇಳಬೇಕಿರುವುದನ್ನು ನಿರ್ದಿಷ್ಟ ಪದಗಳಲ್ಲಿ ಹೇಳಲಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೂವಯ್ಯ, ದೂರುದಾರರಿಗೆ ತೃಪ್ತಿಯಾಗುವಂತಹ ಪ್ರಮಾಣಪತ್ರದ ಭಾಷೆಯ ಬಗ್ಗೆ ಅವರೊಂದಿಗೆ ಕುಳಿತು ಚರ್ಚಿಸಿ, ಸಿದ್ಧಪಡಿಸಲಾಗುವುದು. ಬಳಿಕ ಅದನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು. ಪ್ರಮಾಣಪತ್ರದ ಕರಡು ಪ್ರತಿಯನ್ನು ದೂರುದಾರರಿಗೂ ಒದಗಿಸಲಾಗುವುದು ಎಂದು ತಿಳಿಸಿದರು.
ಇದನ್ನು ಆಲಿಸಿದ ನ್ಯಾಯಪೀಠ, ದೂರುದಾರರ ತೃಪ್ತಿಗೆ ಅನುಗುಣವಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಮೌಖಿಕವಾಗಿ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.



Comments (0)