ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಮೇಲಿನ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು; ಬೈರತಿ ಬಸವರಾಜ್ ವಕೀಲರ ಸವಾಲು

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿರುವುದು ನ್ಯಾಯಸಮ್ಮತವಾಗಿಲ್ಲ ಎಂದೆನಿಸಿದರೆ ಸಿಐಡಿ ತನಿಖಾಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಬಸವರಾಜ್‌ ಪರ ಹಿರಿಯ ವಕೀಲ ಸಂದೇಶ್ ಚೌಟ ಸವಾಲೆಸೆದರು.

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಸಿಐಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್‌ ವಾದ ಮಂಡಿಸಿ, ನಿರೀಕ್ಷಣಾ ಜಾಮೀನು ಕೋರಿ ಅರ್ಜಿದಾರರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್‌ ಈ ಹಿಂದೆಯೇ ವಜಾಗೊಳಿಸಿದೆ. ಇದಾದ ನಂತರವೂ ಮತ್ತೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಯಾವುದೇ ಬದಲಾದ ಸನ್ನಿವೇಶಗಳಿಲ್ಲದ ಕಾರಣ ಅರ್ಜಿ ಊರ್ಜಿತವಾಗುವುದಿಲ್ಲ. ಇನ್ನು ಕೊಲೆಯಾದ ವ್ಯಕ್ತಿಯ ತಾಯಿಯ ಮೇಲೆ ಒತ್ತಡ ಹೇರಿ ಮಾಧ್ಯಮ ಹೇಳಿಕೆ ಕೊಡಿಸಲಾಗಿದೆ. ಇದರಿಂದ, ಸದ್ಯ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆಯಾಗಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅದಕ್ಕೆ ಪ್ರತಿವಾದ ಮಂಡಿಸಿದ ಬೈರತಿ ಬಸವರಾಜ್‌ ಪರ ಹಿರಿಯ ವಕೀಲ ಸಂದೇಶ್ ಚೌಟ, ಪ್ರಕರಣದ 1ನೇ ಆರೋಪಿ ಜಗದೀಶ್‌ ಜತೆಗೆ ಬೈರತಿ ಬಸವರಾಜ್‌ ಕರೆ ಮಾಡಿ ಸಂಭಾಷಣೆ ನಡೆಸಿಲ್ಲ. ಪ್ರಕರಣದಲ್ಲಿ ಬಸವರಾಜ್‌ ಪಿತೂರಿ ನಡೆಸಿರುವುದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿರುವುದಕ್ಕೆ ತನಿಖಾಧಿಕಾರಿಗಳ ಬಳಿ ಯಾವುದೇ ನೇರ ಅಥವಾ ಸಾಂದರ್ಭಿಕ ಸಾಕ್ಷ್ಯಗಳು, ಸಿಡಿಆರ್‌ ದಾಖಲೆಗಳು ಇಲ್ಲ. ಆದರೂ, ಬಸವರಾಜ್‌ ಅವರೊಂದಿಗೆ ಪೊಲೀಸರು ಕೈಜೋಡಿಸಿದ್ದಾರೆ, ಬಸವರಾಜ್‌ ಪರ ಕೆಲಸ ಮಾಡಿದ್ದಾರೆ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದ್ದಾರೆ. ಆ ಮೂಲಕ ತಮ್ಮದೇ ಪೊಲೀಸರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎಂದರು.

ಪ್ರಕರಣದ ತನಿಖೆ ಸಿಐಡಿ ಪೊಲೀಸರಿಗೆ ವರ್ಗಾವಣೆಯಾದ 8 ದಿನಗಳಲ್ಲೇ ಕೊಕಾ ಕಾಯ್ದೆಯ ನಿಯಮಗಳನ್ನು ಹೇರಿದ್ದಾರೆ. ಆ ಕ್ರಮವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಅಲ್ಲಿಂದೀಚೆಗೆ ವಿಚಾರಣೆಗೆ ಹಾಜರಾಗಲು ಬಸವರಾಜ್‌ಗೆ ಸೂಚಿಸಿ ಸಿಐಡಿ ಪೊಲೀಸರು ಯಾವೊಂದು ನೋಟಿಸ್‌ ನೀಡಿಲ್ಲ. ಬದಲಾಗಿ ಇತರ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಬಸವರಾಜ್‌ ವಿರುದ್ಧ ಮಾತ್ರ ದೊಷಾರೊಪ ಪಟ್ಟಿ ಸಲ್ಲಿಸಿಲ್ಲ. ಬಸವರಾಜ್‌ ವಿರುದ್ಧ ತನಿಖೆ ನಡೆಸಬೇಕಿದೆ ಎಂದಷ್ಟೇ ಹೇಳುತ್ತಿದ್ದಾರೆ. ಸಿಐಡಿ ತನಿಖಾಧಿಕಾರಿಗಳ ಈ ನಡೆ ಸೂಕ್ತವಲ್ಲ ಎಂದು ಆಕ್ಷೇಪಿಸಿದರು.

ಪ್ರಾಸಿಕ್ಯೂಷನ್ ಆರೋಪಗಳಿಗೆ ಆಕ್ಷೇಪ:
ಸತ್ಯಾಂಶಗಳನ್ನು ಮರೆ ಮಾಚಿ ಮಧ್ಯಂತರ ಜಾಮೀನು ಪಡೆಯಲಾಗಿದೆ ಎಂದು ಸರ್ಕಾರಿ ಅಭೀಯೋಜಕರು ಪದೇಪದೆ ಹೇಳುತ್ತಿದ್ದಾರೆ. ಯಾವ ಆಧಾರದಲ್ಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ ಎಂಬುದನ್ನು ನ್ಯಾಯಾಲಯ ಗಮನಿಸಬೇಕು. ಸತ್ಯಾಂಶಗಳನ್ನು ಮರೆ ಮಾಚಲಾಗಿದೆ, ಪೊಲೀಸರು ಬಸವರಾಜ್‌ ಸಹಕರಿಸಿದ್ದಾರೆ, ಮೃತನ ತಾಯಿಗೆ ಬೆದರಿಕೆ ಹಾಕಿದ್ದಾರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ, ಪ್ರಕರಣದ ಇತರ ಆರೋಪಿಗಳ ವಿರುದ್ಧ ತನಿಖೆ ನಡೆಯಬೇಕು ಆದರೆ, ತಮ್ಮ ವಿರುದ್ಧ ಮಾತ್ರ ತನಿಖೆ ನಡೆಯಬಾರದು. ತಮ್ಮ ಇಚ್ಛೆಯಾನುಸಾರ ತನಿಖೆ ನಡೆಯಬೇಕು ಎಂದು ಬಸವರಾಜ್‌ ಬಯಸುತ್ತಿದ್ದಾರೆ ಎಂಬ ಸರ್ಕಾರಿ ಅಭೀಯೋಜಕರ ನ್ಯಾಯಸಮ್ಮತವಾಗಿಲ್ಲ ಎಂದರು.

ಅರ್ಜಿದಾರರು ಸುಳ್ಳು ಮಾಹಿತಿ ನೀಡಿ, ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ನಿಷ್ಪಲಗೊಳಿಸಿದ್ದಾರೆ ಎಂದೆಲ್ಲ ಸರ್ಕಾರಿ ಅಭಿಯೋಜಕರು ಆರೋಪ ಮಾಡುತ್ತಿದ್ದಾರೆ. ಮಧ್ಯಂತರ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯ ಮಂಜೂರು ಮಾಡಿದೆ ಎಂದು ಹೇಳಬೇಕೇ ಹೊರತು ಪಡೆದುಕೊಳ್ಳಲಾಗಿದೆ ಎಂದು ಸಂಭೋದಿಸಬಾರದು. ಹಾಗೊಂದು ವೇಳೆ, ಜಾಮೀನು ಮಂಜೂರಾತಿ ಆದೇಶ ನ್ಯಾಯಯುತವಾಗಿಲ್ಲ ಎಂದಾದರೆ, ಅದನ್ನು ಮೇಲಿನ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿತ್ತು. ಅದನ್ನು ಬಿಟ್ಟು ಅರ್ಜಿದಾರರ ವಿರುದ್ಧ ವೃಥಾ ಆರೋಪ ಮಾಡುವುದು ಸರಿಯಲ್ಲ. ಸರ್ಕಾರಿ ಅಭಿಯೋಜಕರು ಪ್ರಾಸಿಕ್ಯೂಟರ್‌ ಮಾದರಿಯಲ್ಲಿರಬೇಕು. ಪರ್ಸಿಕ್ಯೂಟರ್‌ (ಪೀಡಕ) ಆಗಿರಬಾರದು ಎಂದು ತೀವ್ರವಾಗಿ ಆಕ್ಷೇಪಿಸಿದರು.

ಇದರಿಂದ ಕುಪಿತಗೊಂಡ ಎಸ್‌ಪಿಪಿ ಬಿ.ಎನ್. ಜಗದೀಶ್‌, ಇದೇನಿದು ಪರ್ಸಿಕ್ಯೂಟರ್‌ ಎಂದು ವೈಯಕ್ತಿಕವಾಗಿ ದಾಳಿ ನಡೆಸಲಾಗುತ್ತಿದೆ. ನನ್ನ ವಾದಾಂಶಗಳೆಲ್ಲವನ್ನೂ ನಾನು ಪ್ರತಿಪಾದಿಸುತ್ತೇನೆ. ಅದಕ್ಕೆ ನಾನು ಸಿದ್ಧನಿದ್ದೇನೆ. ಯಾವುದನ್ನೂ ಸಹ ನಾನು ಮುಚ್ಚಿಡುವುದಿಲ್ಲ ಎಂದು ತಿರುಗೇಟು ನೀಡಿದರು.

ನಂತರ ಬಸವರಾಜ್‌ ಪರ ವಕೀಲರು, ಈ ವಿಚಾರವಾಗಿ ನಾನೇನು ಹೆಚ್ಚು ಕಾಮೆಂಟ್‌ ಮಾಡುವುದಿಲ್ಲ. ಇಲ್ಲಿಗೇ ಇದನ್ನು ಕೈ ಬಿಡುತ್ತಿದ್ದೇನೆ. ಪ್ರಾಸಿಕ್ಯೂಷನ್‌ ಪರ ವಕೀಲರು ಘಟನೆಗೆ ಸಂಬಂಧಿಸಿದಂತೆ ಪಟ್ಟಿ ಮಾಡಿ ನ್ಯಾಯಾಲಯಕ್ಕೆ ನೀಡಿರುವ ದಿನಾಂಕಗಳು, ಅವುಗಳ ಆಧಾರದಲ್ಲಿ ಬುಧವಾರ ವಾದ ಮಂಡಿಸುವುದಾಗಿ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ (ಜನವರಿ 28) ಮುಂದೂಡಿತು.

Related Articles

Comments (0)

Leave a Comment