ಟೆಕಿ ಅತುಲ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಂಶಗಳು ಎಫ್‌ಐಆರ್‌ನಲ್ಲಿವೆ; ಹೈಕೋರ್ಟ್ ಮೌಖಿಕ ಅಭಿಪ್ರಾಯ
- by Jagan Ramesh
- January 6, 2025
- 33 Views
ಬೆಂಗಳೂರು: ಸಾಫ್ಟ್‌ವೇರ್ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಸಂಬಂಧ ದಾಖಲಾಗಿರುವ ದೂರಿನಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತುಪಡಿಸುವ ಅಂಶಗಳಿವೆ ಎಂದು ಮೌಖಿಕವಾಗಿ ನುಡಿದಿರುವ ಹೈಕೋರ್ಟ್, ತನಿಖೆ ಸಂದರ್ಭದಲ್ಲಿ ಸಂಗ್ರಹಿಸಲಾಗಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಮೃತನ ಪತ್ನಿ ನಿಖಿತಾ ಆಕೆಯ ಕುಟುಂಬ ಸದಸ್ಯರಾದ ನಿಶಾ, ಅನುರಾಗ್ ಮತ್ತು ಸುಶೀಲ್ ಸಿಂಘಾನಿಯಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಿಚಾರಣಾ ನ್ಯಾಯಾಲಯ ಕಳೆದ ಶನಿವಾರ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆತ್ಮಹತ್ಯೆ ಪ್ರಚೋದನೆಯಡಿ ಪ್ರಕರಣ ದಾಖಲಿಸಲು ಯಾವುದೇ ಅಂಶಗಳು ಇಲ್ಲ. ಆರೋಪಿಗಳನ್ನು ಬಂಧಿಸುವುದಕ್ಕೆ ಆಧಾರಗಳನ್ನೂ ಪೊಲೀಸರು ನೀಡಿಲ್ಲ. ಆದ್ದರಿಂದ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.
ಆಗ ನ್ಯಾಯಮೂರ್ತಿಗಳು, ಎಫ್‌ಐಆರ್ ಓದಿದರೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಎಲ್ಲ ಅಂಶಗಳು ಸ್ಪಷ್ಟವಾಗಿವೆ. ನನ್ನ ಪ್ರಕಾರ ಎಲ್ಲ ವಿವರಗಳನ್ನು ನೀಡಲಾಗಿದೆ. ಎಫ್‌ಐಆರ್‌ನಲ್ಲಿ ಇದಕ್ಕಿಂತ ಹೆಚ್ಚಿನದು ಬೇರೇನು ಕೊಡಲು ಸಾಧ್ಯ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದರು. ಇದೇ ವೇಳೆ, ತನಿಖೆ ಮುಂದುವರಿದಿದೆಯೇ, ಏನೆಲ್ಲ ದಾಖಲೆಗಳನ್ನು ಸಂಗ್ರಹಿಸಲಾಗಿದೆ, ಡೆತ್ ನೋಟ್, ಆತ್ಮಹತ್ಯೆ ವಿಡಿಯೊ ಸಂಗ್ರಹಿಸಲಾಗಿದೆಯೇ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದರು.
ಸರ್ಕಾರದ ಪರ ವಕೀಲರು, ತನಿಖೆ ಪ್ರಗತಿಯಲ್ಲಿದೆ ಎಂದು ಉತ್ತರಿಸಿದರು. ಆಗ ನ್ಯಾಯಪೀಠ, ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜತೆಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಎರಡು ವಾರ ಮುಂದೂಡಿತು.
ಪ್ರಕರಣವೇನು?
ಟೆಕಿ ಅತುಲ್ ಸುಭಾಷ್ (34) ಕಳೆದ ಡಿಸೆಂಬರ್ 9ರಂದು ಪತ್ನಿ ಮತ್ತು ಆಕೆಯ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಸುದೀರ್ಘ ಮರಣಪತ್ರ ಬರೆದು, ವಿಡಿಯೊ ಚಿತ್ರೀಕರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 108ರ ಅಡಿಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಡಿಸೆಂಬರ್ 20ರಂದು ನಿಖಿತಾ ಅವರನ್ನು ಹರಿಯಾಣದ ಗುರುಗ್ರಾಮ ಹಾಗೂ ಆಕೆಯ ತಾಯಿ ಹಾಗೂ ಸಹೋದರರನ್ನು ಉತ್ತರಪ್ರದೇಶದ ಪ್ರಯಾಗ್ರಾಜ್ನ ಹೋಟೆಲ್ ಒಂದರಲ್ಲಿ ಬಂಧಿಸಿದ್ದರು. ಪ್ರಕರಣದಲ್ಲಿ ನಿಖಿತಾ, ನಿಶಾ, ಅನುರಾಗ್ ಸಿಂಘಾನಿಯಾಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಜನವರಿ 4ರಂದು ಜಾಮೀನು ಮಂಜೂರು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
Related Articles
Thank you for your comment. It is awaiting moderation.
Comments (0)