ಅಕ್ರಮ ಬೆಟ್ಟಿಂಗ್ ಪ್ರಕರಣ; ಇಡಿ ಸಮನ್ಸ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಅನಿಲ್ ಗೌಡ

ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ. ವಿರೇಂದ್ರ ಅಲಿಯಾಸ್ ವೀರೇಂದ್ರ ಪಪ್ಪಿ ವಿರುದ್ಧದ ಅಕ್ರಮ ಆನ್‌ಲೈನ್‌ ಮತ್ತು ಆಫ್‌‌ಲೈನ್‌ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಜಾರಿಗೊಳಿಸಿರುವ ಸಮನ್ಸ್‌ ರದ್ದು ಕೋರಿ ವೀರೇಂದ್ರ ಅವರ ಕಾನೂನು ಸಲಹೆಗಾರರಾಗಿರುವ ಎಚ್‌. ಅನಿಲ್‌ ಗೌಡ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಇಡಿ ಸಮನ್ಸ್ ರದ್ದುಪಡಿಸಬೇಕು, ಅರ್ಜಿ ಇತ್ಯರ್ಥವಾಗುವರೆಗೆ ಸಮನ್ಸ್‌ಗೆ ತಡೆಯಾಜ್ಞೆ ನೀಡಬೇಕು ಹಾಗೂ ತಮ್ಮ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಇಡಿಗೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ಅನಿಲ್ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಶುಕ್ರವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅನಿಲ್‌ ಗೌಡ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ವೃತ್ತಿಯಲ್ಲಿ ವಕೀಲರಾಗಿದ್ದು, ಕೆ.ಸಿ.ವೀರೇಂದ್ರ ಅವರಿಗೆ ಕಾನೂನು ಸಲಹೆಗಾರರಾಗಿದ್ದಾರೆ. ವಕೀಲನಾಗಿ ವಿರೇಂದ್ರ ಅವರಿಗೆ ಸಲಹೆ ನೀಡಿದ್ದಾರೆ. ವಿರೇಂದ್ರ ಅವರ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆಯೇ ಹೊರತು ಕಂಪನಿಯ ದೈನಂದಿನ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ಇಡಿ ಅಧಿಕಾರ ವ್ಯಾಪ್ತಿ ಮೀರಿ, ರಾಜಕೀಯಪ್ರೇರಿತ ಮತ್ತು ದುರುದ್ದೇಶದಿಂದ ಅನಿಲ್‌ ಗೌಡಗೆ ಸಮನ್ಸ್‌ ಜಾರಿ ಮಾಡಿ ದಾಖಲೆಗಳನ್ನು ಕೇಳಿದೆ. ಇಡಿ ಅಧಿಕಾರ ವ್ಯಾಪ್ತಿಯು ಸುಪ್ರೀಂಕೋರ್ಟ್ ಪರಿಶೀಲನೆಯಲ್ಲಿದೆ. ವಿರೇಂದ್ರ ಅವರಿಗೆ ವಕೀಲರಾಗಿ ಸಲಹೆ ನೀಡಿರುವುದರಿಂದ ಅರ್ಜಿದಾರರನ್ನು ವಿಚಾರಣೆಗೊಳಪಡಿಸದಂತೆ ಇಡಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ಇಡಿ ಪರ ವಕೀಲರು ವಾದ ಮಂಡಿಸಿ, ಕೇವಲ ವಿರೇಂದ್ರ ಅವರ ವಕೀಲನಾಗಿರುವ ಕಾರಣಕ್ಕೆ ಅರ್ಜಿದಾರರಿಗೆ ಸಮನ್ಸ್ ಜಾರಿ ಮಾಡಿಲ್ಲ. ಆರೋಪಿ ವೀರೇಂದ್ರ ಅವರ ಕಂಪನಿಗಳಲ್ಲಿ ಪಾಲುದಾರರಾಗಿದ್ದಾರೆ. ವಕೀಲರಾಗುವ ಮುನ್ನವೂ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ವಕೀಲರಾಗಿ ವಾಣಿಜ್ಯ ಕಂಪನಿಗಳ ಪಾಲುದಾರರಾಗುವಂತಿಲ್ಲ. ವಿರೇಂದ್ರ ಅವರ ಕಂಪನಿಗಳಿಗೆ ಸಂಬಂಧಿಸಿದ ಆ್ಯಪ್‌ಗಳಲ್ಲಿ ಹಲವು ಜನ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆ. ಅಕ್ರಮದ ಹಣ ಹೂಡಿಕೆಯ ಬಗ್ಗೆ ಗಂಭೀರ ಆರೋಪವಿದೆ. ಇದರಿಂದಲೇ ಹೂಡಿಕೆ, ಲ್ಯಾಪ್‌ಟಾಪ್, ಮೊಬೈಲ್ ವಿವರ ಮತ್ತು ದಾಖಲೆಗಳನ್ನು ಕೇಳಲಾಗಿದ್ದು, ವಕೀಲ ವೃತ್ತಿಗೆ ಸಂಬಂಧಿಸಿದ ಪ್ರಶ್ನೆ ಕೇಳುವುದಿಲ್ಲ. ವಕೀಲ ವೃತ್ತಿ ಹೆಸರಿನಲ್ಲಿ ಅಪರಾಧ ಪ್ರಕರಣಗಳನ್ನು ಎಸಗಿ ರಕ್ಷಣೆ ಪಡೆಯಲಾಗದು ಎಂದು ಆಕ್ಷೇಪಿಸಿದರು.

Related Articles

Comments (0)

Leave a Comment