ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ಮೀಸಲಾತಿ ಪ್ರಕಟಿಸದಿದ್ದರೆ ಹಾಲಿ ರೋಸ್ಟರ್ ಪ್ರಕಾರವೇ ಚುನಾವಣೆಗೆ ಆದೇಶ; ಹೈಕೋರ್ಟ್ ಮೌಖಿಕ ಎಚ್ಚರಿಕೆ
- by Prashanth Basavapatna
- August 30, 2025
- 10 Views

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮೀಸಲಾತಿಯನ್ನು ರಾಜ್ಯ ಸರ್ಕಾರ ನಿರ್ದಿಷ್ಟ ದಿನಾಂಕದೊಳಗೆ ಪ್ರಕಟಿಸದಿದ್ದರೆ ಹಾಲಿ ಆವರ್ತನದ (ರೋಸ್ಟರ್) ಪ್ರಕಾರ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗುವುದು ಎಂದು ಮೌಖಿಕವಾಗಿ ಎಚ್ಚರಿಸಿರುವ ಹೈಕೋರ್ಟ್, ಸರ್ಕಾರಕ್ಕೆ ಕೊನೆಯ ಬಾರಿ ಕಾಲಾವಕಾಶ ನೀಡಿದೆ.
ರಾಜ್ಯದ ವಿವಿಧ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲು ನಿರ್ದೇಶಿಸುವಂತೆ ಹಾಗೂ ಶಿವಮೊಗ್ಗ, ತುಮಕೂರು, ದಾವಣಗೆರೆ, ಮೈಸೂರು ಮತ್ತು ಮಂಗಳೂರು ಮಹಾನಗರ ಪಾಲಿಕೆ, ಅತ್ತಿಬೆಲೆ, ಬೊಮ್ಮಸಂದ್ರ, ಕಮಲಾಪುರ ನಗರಸಭೆಗಳಿಗೆ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.
ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿ, ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳ ಅವಧಿಯು 2023ರಲ್ಲೇ ಮುಗಿದಿದ್ದು, ಸಾಕಷ್ಟು ಮನವಿಗಳನ್ನು ನೀಡಿದ ಹೊರತಾಗಿಯೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಸಾಂವಿಧಾನಿಕ ಆದೇಶ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ. ಇಷ್ಟು ಸಮಯದ ಒಳಗೆ ಮೀಸಲಾತಿ ನಿಗದಿಪಡಿಸಲಾಗುವುದು ಎಂದು ಸರ್ಕಾರ ಹೇಳಬೇಕು. ಈ ವಿಚಾರದಲ್ಲಿ ಸರ್ಕಾರ ಆಕ್ಷೇಪ ವ್ಯಕ್ತಪಡಿಸಲಾಗದು. ಶಿವಮೊಗ್ಗ, ಮೈಸೂರು ನಗರಸಭೆಗಳ ಅವಧಿಯು 2023ರ ನವೆಂಬರ್‌ನಲ್ಲೇ ಮುಗಿದಿದೆ. ಅಲ್ಲಿ ಚುನಾವಣೆ ನಡೆದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಆಗ ನ್ಯಾಯಪೀಠ, ಚುನಾವಣೆ ನಡೆಯಬೇಕಲ್ಲವೇ, ನಿಮ್ಮದೇ ಸರ್ಕಾರವಿದೆ, ಪುರಸಭೆ ಮತ್ತು ನಗರಸಭೆ ಚುನಾವಣೆಗಳಲ್ಲಿ ಗಾಳಿ ನಿಮ್ಮ ಪರವಾಗಿಯೇ ಇರುತ್ತದೆಯಲ್ಲವೇ, ಅವಧಿ ಮುಗಿಯುವುದರೊಳಗೆ ಮೀಸಲಾತಿ ಸೇರಿ ಎಲ್ಲವನ್ನೂ ಪೂರ್ಣಗೊಳಿಸಬೇಕು. ಅವಧಿ ಮುಗಿದು ಎರಡು ವರ್ಷಗಳಾದ ಮೇಲೆ ಏನಿದು, ಮೀಸಲಾತಿ ಅಧಿಸೂಚನೆಯನ್ನು ನಿರ್ದಿಷ್ಟ ದಿನಾಂಕದಲ್ಲಿ ಪ್ರಕಟಿಸಲು ಮುಂದಾಗದಿದ್ದರೆ ಹಾಲಿ ಇರುವ ರೋಸ್ಟರ್ ಪ್ರಕಾರವೇ ಚುನಾವಣೆ ನಡೆಸಲು ಆಯೋಗಕ್ಕೆ ನಿರ್ದೇಶಿಸಲಾಗುವುದು. ಚುನಾವಣೆ ವಿಳಂಬ ಸಾಂವಿಧಾನಿಕ ಆಡಳಿತ ಮುರಿದು ಬಿದ್ದಿರುವುದಕ್ಕೆ ಸಮನಾಗುತ್ತದೆ. ಇದಕ್ಕೆ ಸುಪ್ರೀಂಕೋರ್ಟ್ ಉಲ್ಲೇಖ ಬೇಕೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಅಂತಿಮವಾಗಿ ಸರ್ಕಾರದ ವಕೀಲರ ಕೋರಿಕೆಯ ಮೇರೆಗೆ ಕೊನೆಯ ಬಾರಿಗೆ ಕಾಲಾವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)