ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ ಸಂಬಂಧ ಪಿಐಎಲ್ ಸಲ್ಲಿಸಿಕೊಳ್ಳಬಹುದು; ಶಾಸಕ ವೆಂಕಟಶಿವಾರೆಡ್ಡಿಗೆ ಹೈಕೋರ್ಟ್ ಸೂಚನೆ
- by Jagan Ramesh
- October 16, 2025
- 9 Views

ಬೆಂಗಳೂರು: ರಾಜ್ಯ ಸರ್ಕಾರದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿಕೊಳ್ಳುವಂತೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರಿಗೆ ಹೈಕೋರ್ಟ್ ಸೂಚಿಸಿದೆ.
ಶ್ರೀನಿವಾಸಪುರ ಕ್ಷೇತ್ರಕ್ಕೆ ಮಂಜೂರು ಮಾಡಿರುವ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಸಲ್ಲಿಸಿದ್ದ ರಿಟ್ ಅರ್ಜಿಯು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿತ್ತು.
ಶಾಸಕರ ಪರ ವಕೀಲರು ಹಾಜರಾಗಿ, ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ 2019ರಲ್ಲಿ ಅನುದಾನ ಹಂಚಿಕೆ ಮಾಡಲಾಗಿದ್ದರೂ ಈವರೆಗೂ ಬಿಡುಗಡೆ ಆಗಿಲ್ಲ ಎಂದರು. ಯಾರು ಹಣ ಕೊಡುತ್ತಿಲ್ಲ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ವಕೀಲರು, ಮುಖ್ಯಮಂತ್ರಿಗಳು ಕೊಡುತ್ತಿಲ್ಲ ಎಂದರಲ್ಲದೆ, ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಅನುದಾನ ಕೊಟ್ಟರೆ, ಜೆಡಿಎಸ್ ಶಾಸಕರಿಗೆ 25 ಕೋಟಿ ರೂ. ಮಾತ್ರ ಮಂಜೂರು ಮಾಡಲಾಗಿದೆ. ಅದೂ ಸಹ ಬಿಡುಗಡೆ ಆಗಿಲ್ಲ ಎಂದು ವಿವರಿಸಿದರು.
ಆಗ ನ್ಯಾಯಪೀಠ, ನಿಮಗೆ (ಶಾಸಕರಿಗೆ) ಹಣ ಏಕೆ ಬೇಕು ಎಂದು ಪ್ರಶ್ನಿಸಿತು. ಅದಕ್ಕೆ ವಕೀಲರು ಪ್ರತಿಕ್ರಿಯಿಸಿ, ಅರ್ಜಿದಾರರು ಶ್ರೀನಿವಾಸಪುರ ಕ್ಷೇತ್ರದ ಜನಪ್ರತಿನಿಧಿಯಾಗಿದ್ದು, ಜನರ ಕೆಲಸಗಳಿಗೆ ಹಣ ಬೇಕು ಎಂದರು.
ನಿಮ್ಮ ಮನವಿ ವೈಯುಕ್ತಿಕ ಆಗುವುದಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಅನುದಾನ ಕೇಳುತ್ತಿದ್ದೀರಿ. ಹಾಗಿದ್ದಾಗ ಹಣ ನಿಮ್ಮ ಜೇಬಿಗೆ ಬರುವುದಿಲ್ಲ, ಅದೇನಿದ್ದರೂ ಜನರಿಗೆ ಹೋಗಬೇಕು. ಅನುದಾನ ಕೊಡಿ ಎಂದು ಹೇಳಬಹುದೇ ಹೊರತು, ನ್ಯಾಯಾಲಯ ಆದೇಶ ಮಾಡಲು ಬರುವುದಿಲ್ಲ. ಜನರಿಗಾಗಿ ಅನುದಾನ ಕೇಳುತ್ತಿದ್ದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿಕೊಳ್ಳಬಹುದು ಎಂದು ಸೂಚಿಸಿದ ನ್ಯಾಯಪೀಠ, ರಿಟ್ ಅರ್ಜಿ ವಿಲೇವಾರಿ ಮಾಡಿತು.
Related Articles
Thank you for your comment. It is awaiting moderation.
Comments (0)