ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ಉಚಿತ ಪಾಸ್‌; ಏಕಸದಸ್ಯ ಪೀಠದ ಆದೇಶಕ್ಕೆ ತಡೆ‌‌ ನೀಡಿದ ವಿಭಾಗೀಯ ಪೀಠ

ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ಸೋಮನಹಳ್ಳಿ ಟೋಲ್‌ ಪ್ಲಾಜಾದಲ್ಲಿ ಸ್ಥಳೀಯ ವಾಹನ ಸವಾರರಿಗೆ ಒಂದು ತಿಂಗಳ ಒಳಗೆ ಉಚಿತ ಪಾಸ್‌ಗಳನ್ನು ವಿತರಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನಿರ್ದೇಶಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ತಡೆ ನೀಡಿದೆ.

ಸೋಮನಹಳ್ಳಿ, ನೆಲಗುಲಿ ಮತ್ತು ಕಗ್ಗಲಿಪುರ ಗ್ರಾಮಸ್ಥರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿ, ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎನ್‌ಎಚ್ಎಐ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಇದಕ್ಕೂ ಮುನ್ನ ಎನ್‌ಎಚ್ಎಐ ಪರ ವಕೀಲರು ವಾದ ಮಂಡಿಸಿ, ಟೋಲ್‌ ಪ್ಲಾಜಾದಲ್ಲಿ ದ್ವಿಚಕ್ರ ವಾಹನಗಳು ಮತ್ತು ಟ್ರಾಕ್ಟರ್‌ಗಳನ್ನು ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಬಿಡಲಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೆ ಪ್ರತಿ ತಿಂಗಳಿಗೆ 340 ರೂ. ಗಳ ಪಾಸ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಆದರೆ, ಟೋಲ್‌ ಪ್ಲಾಜಾದಲ್ಲಿ ಸಂಚರಿಸುವ ಸ್ಥಳೀಯ ನಿವಾಸಿಗಳ ವಾಹನಗಳಿಗೆ ಉಚಿತವಾಗಿ ಪಾಸ್‌ ನೀಡಬೇಕು ಎಂದು ಏಕಸದಸ್ಯ ಪೀಠ ಆದೇಶಿಸಿದ್ದು, ಈ ಆದೇಶ ಸುಪ್ರೀಂಕೋರ್ಟ್‌ ತೀರ್ಪಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.

ವಾದ ಆಲಿಸಿದ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿತಲ್ಲದೆ, ಪ್ರತಿವಾದಿಗಳಾದ ಸೋಮನಹಳ್ಳಿ, ನೆಲಗುಲಿ ಮತ್ತು ಕಗ್ಗಲೀಪುರ ಗ್ರಾಮಸ್ಥರಿಗೆ (ರಿಟ್ ಅರ್ಜಿದಾರರು) ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಏಪ್ರಿಲ್‌ 23ಕ್ಕೆ ಮುಂದೂಡಿತು.

Related Articles

Comments (0)

Leave a Comment