ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ವಿಡಿಯೋ ಚಿತ್ರೀಕರಿಸಿದ ಆರೋಪ; ಶಿಕ್ಷಕನ ವಿರುದ್ಧದ ಪೋಕ್ಸೋ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ
- by Jagan Ramesh
- September 6, 2024
- 225 Views
ಬೆಂಗಳೂರು: ಸರ್ಕಾರಿ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ವೇಳೆ ಫೋಟೋ ಹಾಗೂ ವಿಡಿಯೊ ಚಿತ್ರೀಕರಿಸಿದ ಆರೋಪದಲ್ಲಿ ಶಾಲೆಯ ಚಿತ್ರಕಲೆ ಶಿಕ್ಷಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಅಡಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಎಫ್ಐಆರ್ ರದ್ದು ಕೋರಿ ಮಾಲೂರು ತಾಲೂಕಿನ ಟೇಕಲ್ ಹೊಬಳಿಯ ಚಿಕ್ಕಯಲವನಹಳ್ಳಿ ಗ್ರಾಮದ ಶಿಕ್ಷಕ ಮುನಿಯಪ್ಪ (46) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪಿ ಎಗಿಸದ್ದಾನೆ ಎನ್ನಲಾದ ಕೃತ್ಯ ನಿಜಕ್ಕೂ ಅಸಭ್ಯ ಹಾಗೂ ಭಯಾನಕವಾಗಿದೆ ಎಂದು ಆಘಾತ ವ್ಯಕ್ತಪಡಿಸಿದೆ.
ಐದು ಮೊಬೈಲ್, ನೂರಾರು ವಿಡಿಯೊ:
ಪೋಕ್ಸೋ ಕಾಯ್ದೆಯ ಸೆಕ್ಷನ್ 11ರ ಪ್ರಕಾರ ಮಕ್ಕಳ ದೇಹ ಅಥವಾ ದೇಹದ ಯಾವುದೇ ಭಾಗವನ್ನು ಅಸಭ್ಯ ರೀತಿಯಲ್ಲಿ ತೋರಿಸುವುದು ಲೈಂಗಿಕ ಕಿರುಕುಳವಾಗುತ್ತದೆ. ಈ ಕೃತ್ಯವು ಪೋಕ್ಸೋ ಕಾಯ್ದೆಯ ಸೆಕ್ಷನ್ 12ರ ಅಡಿ ಶಿಕ್ಷಾರ್ಹವಾಗಿದೆ. ಪ್ರಕರಣದ ತನಿಖಾ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ದಾಖಲೆಗಳಿಂದ ಅರ್ಜಿದಾರ ಶಿಕ್ಷಕ 5 ಮೊಬೈಲ್ ಪೋನ್ ಹೊಂದಿದ್ದು, ಪ್ರತಿ ಮೊಬೈಲ್ನಲ್ಲೂ ಸುಮಾರು ಸಾವಿರ ಫೋಟೋ ಹಾಗೂ ನೂರಾರು ವಿಡಿಯೊಗಳಿವೆ ಎಂದು ತಿಳಿದುಬಂದಿದೆ. ಈ ವಿಚಾರ ನಿಜಕ್ಕೂ ಆಘಾತ ಮೂಡಿಸಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.
ಒಬ್ಬ ಚಿತ್ರಕಲೆ ಶಿಕ್ಷಕ ಇಷ್ಟು ಮೊಬೈಲ್ಗಳನ್ನು ಏಕೆ ಹೊಂದಿದ್ದರು? ಅವುಗಳಲ್ಲಿರುವ ವಿಡಿಯೊ ಹಾಗೂ ಚಿತ್ರಗಳು ಯಾವುವು? ಎಂಬುದರ ಸತ್ಯಾಂಶ ಪೂರ್ಣಪ್ರಮಾಣದ ತನಿಖೆ ಹಾಗೂ ವಿಚಾರಣೆಯಿಂದ ಬಹಿರಂಗವಾಗಬೇಕಿದೆ. ಅರ್ಜಿದಾರನ ಕೃತ್ಯ ಭಯಾನಕತೆಗಿಂತ ಹೆಚ್ಚಿನ ಛಾಯೆ ಹೊಂದಿದೆ. ಒಬ್ಬ ಶಿಕ್ಷಕನಾಗಿ ಈ ರೀತಿಯ ವಿಡಿಯೊ ಚಿತ್ರೀಕರಿಸುವುದು ನಿಜಕ್ಕೂ ಅಸಭ್ಯತನವೆನಿಸಿಕೊಳ್ಳಲಿದ್ದು, ಇಂತಹ ಕೃತ್ಯಗಳು ಕ್ಷಮಾರ್ಹವಲ್ಲ. ಅರ್ಜಿದಾರ ಪೂರ್ಣಪ್ರಮಾಣದ ವಿಚಾರಣೆ ಎದುರಿಸಿ ಆರೋಪಮುಕ್ತನಾಗಿ ಬರಬಹುದು. ಅದನ್ನು ಬಿಟ್ಟು ಈ ಹಂತದಲ್ಲೇ ಪ್ರಕರಣ ರದ್ದುಪಡಿಸಿದರೆ ಶಿಕ್ಷಕನ ಅಕ್ರಮ ಚುಟವಟಿಕೆಯನ್ನು ಉತ್ತೇಜಿಸಿದಂತಾಗುತ್ತದೆ ಎಂದಿರುವ ಹೈಕೋರ್ಟ್, ಆರೋಪಿಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣವೇನು?
ಮಾಲೂರು ತಾಲೂಕಿನ ವಸತಿ ಶಾಲೆಯೊಂದರಲ್ಲಿ ಮುನಿಯಪ್ಪ ಚಿತ್ರಕಲೆ ಶಿಕ್ಷಕರಾಗಿದ್ದಾರೆ. ಶಾಲೆಯ ಬಾಲಕಿಯರು ಬಟ್ಟೆ ಬದಲಿಸುವ ಸಮಯದಲ್ಲಿ ಫೋಟೋ ಹಾಗೂ ವಿಡಿಯೊ ತೆಗೆದ ಆರೋಪದ ಬಗ್ಗೆ ಮುನಿಯಪ್ಪ ವಿರುದ್ಧ 2023ರ ಡಿಸೆಂಬರ್ 15ರಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ನಿಯಂತ್ರಣ ಕೊಠಡಿ ಮೂಲಕ ದೂರು ಸ್ವೀಕರಿಸಿದ್ದರು. ಡಿಸೆಂಬರ್ 17ರಂದು ಅರ್ಜಿದಾರರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದರಿಂದ, ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದಂತೆ ಕೋಲಾರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (ಪೋಕ್ಸೋ ವಿಶೇಷ ಕೋರ್ಟ್) ವಿಚಾರಣೆ ರದ್ದು ಕೋರಿ ಮುನಿಯಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಾದ-ಪ್ರತಿವಾದ:
ವಿಚಾರಣೆ ವೇಳೆ ವಾದ ಮಂಡಿಸಿದ್ದ ಮುನಿಯಪ್ಪ ಪರ ವಕೀಲರು, ಎಫ್ಐಆರ್ ದಾಖಲಾಗುವ ಮುನ್ನ ಅರ್ಜಿದಾರರು ಯಾವುದೇ ತಪ್ಪು ಎಸಗಿರಲಿಲ್ಲ. 2023ರ ಡಿಸೆಂಬರ್ 15ರಂದು ನಿಯಂತ್ರಣ ಕೊಠಡಿ ಮೂಲಕ ದೂರು ಸ್ವೀಕರಿಸಿದ ನಂತರ ಜಂಟಿ ನಿರ್ದೇಶಕರು ಅರ್ಜಿದಾರನ ಮೊಬೈಲ್ ಫೋನ್ ಜಪ್ತಿ ಮಾಡಿದ್ದರು. ನಂತರ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಾಗುವ ಮುನ್ನವೇ ತನಿಖೆ ಆರಂಭವಾಗಿದ್ದು, ಇದು ಕಾನೂನಿನ ಉಲ್ಲಂಘನೆಯಾಗಿದೆ. ಅರ್ಜಿದಾರರನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ವಿಚಾರಣೆ ನಡೆಸಿದ್ದಾರೆ. ಆತನ ಕೃತ್ಯದ ಕುರಿತು ಹಲವು ಟಿವಿ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದು, ಅವು ಯಾವುವು ಎಂಬುದಾಗಿ ದೂರಿನಲ್ಲಿ ಹೆಸರಿಸಿಲ್ಲ. ಮೊಬೈಲ್ ಫೋನ್ ಒಂದು ಎಲೆಕ್ಟ್ರಾನಿಕ್ ಪುರಾವೆಯಾಗಿದ್ದು, ಅದರಲ್ಲಿರುವ ಅಂಶಗಳನ್ನು ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಸೆಕ್ಷನ್ 65ಬಿ ಅಡಿ ನಿರ್ದಿಷ್ಟ ಎಲೆಕ್ಟ್ರಾನಿಕ್ ಪುರಾವೆ ಎಂದು ಪರಿಗಣಿಸಲು ಅನುಸರಿಸಿರುವ ನಿಯಮಗಳ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಆಕ್ಷೇಪಿಸಿದ್ದರು.
ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ವಸತಿ ಶಾಲೆಯಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳು ಬಟ್ಟೆ ಬದಲಿಸುವಾಗ ಅರ್ಜಿದಾರ ವಿಡಿಯೋ ಹಾಗೂ ಫೋಟೋಗಳನ್ನು ತೆಗೆದಿದ್ದಾರೆ. ಅವುಗಳನ್ನು ಹೇಗೆ ತೆಗೆದರು, ಏಕೆ ಸಂಗ್ರಹಿಸಿಟ್ಟಿದ್ದಾರೆ ಎನ್ನುವುದು ಸಾಕ್ಷ್ಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಅರ್ಜಿದಾರನ ಬಳಿ ಇರುವ ಮೊಬೈಲ್ ಪೋನ್ನಲ್ಲಿ ಸಾಕಷ್ಟು ಡೇಟಾಗಳಿವೆ. ಆದರೆ, ಫೋನ್ ಅನ್ಲಾಕ್ ಮಾಡದೆ ಅರ್ಜಿದಾರರು ತನಿಖೆಗೆ ಸಹಕರಿಸುತ್ತಿಲ್ಲ. ಇತರ ಮೊಬೈಲ್ಗಳೂ ಲಾಕ್ ಆಗಿವೆ. ಮೊಬೈಲ್ನ ಮೆಮೋರಿ ಕಾರ್ಡ್ನಲ್ಲಿರುವ ಚಿತ್ರಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ಅವು ಅರ್ಜಿದಾರನ ಮೇಲಿನ ಆರೋಪಗಳನ್ನು ದೃಢಪಡಿಸುತ್ತವೆ. ಈ ಕೃತ್ಯ ಪೋಕ್ಸೋ ಕಾಯ್ದೆಯ ಸೆಕ್ಷನ್ 12ರ ಅಡಿ (ಮಕ್ಕಳಿಗೆ ಲೈಂಗಿಕ ಕಿರುಕುಳ) ಅಪರಾಧವಾಗಿದೆ. ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಿದ್ಧವಾಗಿದ್ದು, ಯಾವುದೇ ಸಂದರ್ಭದಲ್ಲೂ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬಹುದು. ಆದ್ದರಿಂದ, ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
Related Articles
Thank you for your comment. It is awaiting moderation.
Comments (0)