ಸಿ.ಟಿ. ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ; ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ
- by Jagan Ramesh
- December 20, 2024
- 7 Views
ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಿಂದನಾತ್ಮಕ ಪದ ಬಳಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮಧ್ಯಂತರ ಆದೇಶ ಹೊರಡಿಸಿರುವ ಹೈಕೋರ್ಟ್, ತನಿಖಾಧಿಕಾರಿ ಸೂಚಿಸಿದಾಗ ತನಿಖೆಗೆ ಹಾಜರಾಗಬೇಕು ಎಂದು ರವಿ ಅವರಿಗೆ ಷರತ್ತು ವಿಧಿಸಿದೆ.
ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ತಮ್ಮನ್ನು ಅಕ್ರಮವಾಗಿ ಬಂಧಿಸಿ, ಕಾನೂನುಬಾಹಿರವಾಗಿ ನಡೆದುಕೊಂಡಿರುವುದರಿಂದ ತಕ್ಷಣ ಬಿಡುಗಡೆಗೆ ಆದೇಶಿಸಬೇಕು ಎಂದು ಕೋರಿ ಸಿ. ಟಿ. ರವಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜೆ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ರಾಜ್ಯದ ಜನತೆಯ ದೃಷ್ಟಿಯಿಂದ ಆರೋಪಿತ ಕೃತ್ಯವು ಅತ್ಯಂತ ದುರದೃಷ್ಟಕರವಾಗಿದೆ. ಆದರೆ, ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 41ಎ (ಪೂರ್ವ ನೋಟಿಸ್ ನೀಡುವುದು) ಅಡಿ ಪೊಲೀಸರು ಪ್ರಕ್ರಿಯೆ ಪಾಲಿಸಬೇಕಿತ್ತು. ಅರ್ಜಿದಾರರು ವಿಧಾನ ಪರಿಷತ್ ಸದಸ್ಯರಾಗಿದ್ದು, ಅವರು ತನಿಖೆಗೆ ಲಭ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಬೆಳಗಾವಿಯ ಸುವರ್ಣ ಸೌಧದ ವಿಧಾನ ಪರಿಷತ್‌ನಲ್ಲಿ ನಡೆದಿರುವ ಘಟನೆಯ ಬಗ್ಗೆ ಸಭಾಪತಿಗಳು ಏನನ್ನೂ ಉಲ್ಲೇಖಿಸಿಲ್ಲ. ಅರ್ಜಿದಾರರು ತಕ್ಷಣ ಬಿಡುಗಡೆ ಸಂಬಂಧಿಸಿದ ಮಧ್ಯಂತರ ಮನವಿಗೆ ಅರ್ಹರಾಗಿದ್ದಾರೆ. ಆದ್ದರಿಂದ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆದೇಶಿಸಿತು.
ಇದಕ್ಕೂ ಮುನ್ನ ರವಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ಅರ್ಜಿದಾರರನ್ನು ಬೆಳಗಾವಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಪೊಲೀಸ್ ನೋಟಿಸ್ ನೀಡುವ ಅಥವಾ ಅವರ ಬಂಧನಕ್ಕೆ ಆಧಾರ ಒದಗಿಸಿಲ್ಲ ಎಂದು ಆಕ್ಷೇಪಿಸಿದರಲ್ಲದೆ, ಇದು ಸುಪ್ರೀಂಕೋರ್ಟ್ ತೀರ್ಪುಗಳಿಗೆ ವಿರುದ್ಧವಾಗಿದೆ. ಅರ್ಜಿದಾರರನ್ನು ಬಂಧಿಸಿದ ನಂತರ ಪೊಲೀಸರು ಅವರನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಎಸ್. ಎ. ಬೆಳ್ಳಿಯಪ್ಪ, ಅರ್ಜಿದಾರ ಸಿ.ಟಿ. ರವಿ ಅವರನ್ನು ಟ್ರಾನ್ಸಿಟ್ ರಿಮ್ಯಾಂಡ್ ಮೇಲೆ ಬೆಂಗಳೂರಿಗೆ ಕರೆತರಲಾಗುತ್ತಿದೆ. ಜಾಮೀನು ಕೋರಿ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು. ಬಂಧನ ಅಕ್ರಮ ಎನ್ನುವುದಾದರೆ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಿ. ಪೊಲೀಸರ ಜತೆ ರವಿ ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅವರ ವರ್ತನೆ ಗಮನಿಸಿದರೆ ತಾವೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಭಾವಿಸಿದಂತಿದೆ ಎಂದು ಆಕ್ಷೇಪಿಸಿದರು.
ವಶಕ್ಕೆ ಪಡೆದ ರೀತಿ ಸರಿಯೇ?
ಈ ಮಧ್ಯೆ ನ್ಯಾಯಪೀಠ ಸರ್ಕಾರದ ಪರ ವಕೀಲರನ್ನು ಕುರಿತು, ಅರ್ಜಿದಾರರನ್ನು ವಶಕ್ಕೆ ಪಡೆದಿರುವ ರೀತಿಯ ಬಗ್ಗೆ ಏನು ಹೇಳುತ್ತೀರಿ? ಗಂಭೀರ ಅಪರಾಧ ಪ್ರಕರಣಗಳಲ್ಲೂ ಪೊಲೀಸರು ವರ್ಷಾಗಟ್ಟಲೆ ಬಂಧಿಸುವುದಿಲ್ಲ. ವ್ಯಕ್ತಿಯ ಸ್ವಾತಂತ್ರ್ಯ ಹರಣವಾದಾಗ ಅದನ್ನು ರಕ್ಷಿಸುವುದು ಹೈಕೋರ್ಟ್ ಕರ್ತವ್ಯ. ರವಿ ಅವರನ್ನು ವಶಕ್ಕೆ ಪಡೆದಿರುವ ರೀತಿ, ಅವರು ಗಾಯಗೊಂಡಿರುವ ರೀತಿಗೆ ಏನು ಉತ್ತರಿಸುತ್ತೀರಿ. ದೂರುದಾರರು ಮತ್ತು ಅರ್ಜಿದಾರರು ಇಬ್ಬರೂ ಜನಪ್ರತಿನಿಧಿಗಳು. ದುರದೃಷ್ಟಕರ ಬೆಳವಣಿಗೆ ಎಂದರೆ ಅವರಿಬ್ಬರೂ ನಮ್ಮ ನಾಯಕರು ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿತಲ್ಲದೆ, ಅಂತಿಮವಾಗಿ ಸಿ.ಟಿ. ರವಿ ಬಿಡುಗಡೆಗೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)