ಶೃಂಗೇರಿ ಕ್ಷೇತ್ರದ 279 ತಿರಸ್ಕೃತ ಅಂಚೆ ಮತ ಮರು ಪರಿಶೀಲಿಸಿ, ಫಲಿತಾಂಶ ಪ್ರಕಟಿಸಿ; ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ಆದೇಶ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಶೃಂಗೇರಿ ಕ್ಷೇತ್ರದಲ್ಲಿ ಚಲಾವಣೆಯಾಗಿರುವ 1,811 ಅಂಚೆ ಮತಗಳ ಪೈಕಿ ತಿರಸ್ಕೃತಗೊಂಡಿರುವ 279 ಅಂಚೆ ಮತಗಳನ್ನು ಮರು ಪರಿಶೀಲಿಸಿ, ಎಲ್ಲ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶಿಸಿದೆ.

ಇದೇ ವೇಳೆ, ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದು, ತೀರ್ಪು ಜಾರಿಗೆ ತಡೆ ನೀಡಬೇಕು ಎಂಬ ವಿಜೇತ ಅಭ್ಯರ್ಥಿ ಟಿ.ಡಿ. ರಾಜೇಗೌಡ ಪರ ವಕೀಲರ ಮನವಿ ಪರಿಗಣಿಸಿದ ನ್ಯಾಯಪೀಠ, ತೀರ್ಪಿಗೆ ಎರಡು ವಾರ ತಡೆಯಾಜ್ಞೆ ನೀಡಿದೆ.

ಶೃಂಗೇರಿ ಶಾಸಕರಾದ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ.ಎನ್‌. ಜೀವರಾಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ನ್ಯಾಯಪೀಠವು ಸೋಮವಾರ ಭಾಗಶಃ ಪುರಸ್ಕರಿಸಿದೆ.

ತಿರಸ್ಕೃತಗೊಂಡಿರುವ 279 ಅಂಚೆ ಮತಗಳನ್ನು ಚುನಾವಣಾಧಿಕಾರಿ ಪರಿಶೀಲಿಸಬೇಕು. ಮರು ಪರಿಶೀಲಿಸುವಾಗ ಚುನಾವಣಾ ಅಧಿಕಾರಿಗಳ ಕೈಪಿಡಿ 2023ರ ಮಾರ್ಗಸೂಚಿ 15.14.7 ಅನ್ನು ಅನೂಚನವಾಗಿ ಅನುಪಾಲಿಸಬೇಕು ಹಾಗೂ ಅಂಚೆ ಮತಗಳು ಸಮಸ್ಯಾತ್ಮಕವಾಗಿದೆಯೇ ಎಂಬುದನ್ನು ಪತ್ತೆ ಹಚ್ಚಬೇಕು. ಅಂಚೆ ಮತಗಳನ್ನು ಪರಿಶೀಲಿಸಿದ ಬಳಿಕ ಎಲ್ಲ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಅರ್ಜಿದಾರರು ಅಥವಾ ಪ್ರತಿವಾದಿಗಳು ಪಡೆದಿರುವ ಮತಗಳ ಫಲಿತಾಂಶ ಪ್ರಕಟಿಸಬೇಕು. ಈ ಪ್ರಕ್ರಿಯೆಯನ್ನು 2 ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ನ್ಯಾಯಾಲಯದ ಈ ಆದೇಶ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿ ಮತ್ತು ಶೃಂಗೇರಿಯ ಚುನಾವಣಾಧಿಕಾರಿಗೆ ಸ್ಪೀಡ್‌ ಪೋಸ್ಟ್ ಅಥವಾ ಇ-ಮೇಲ್‌ ಮೂಲಕ ಕಳುಹಿಸಿಕೊಡಬೇಕು ಎಂದು ರಿಜಿಸ್ಟ್ರಿಗೆ ನ್ಯಾಯಾಲಯ ಆದೇಶಿಸಿತು.

ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ರಾಜೇಗೌಡ ಪರ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ಅವರು, ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಆದ್ದರಿಂದ, ತೀರ್ಪಿಗೆ ಎರಡು-ಮೂರು ವಾರಗಳ ಕಾಲ ತಡೆ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ತೀರ್ಪು ಜಾರಿಗೆ ಎರಡು ವಾರಗಳ ಕಾಲ ತಡೆಯಾಜ್ಞೆ ನೀಡಿತು.

ಪ್ರಕರಣವೇನು?

2023ರ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 1,811 ಅಂಚೆ ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್‌ನ ರಾಜೇಗೌಡ ಅವರು 201 ಮತಗಳಿಂದ ವಿಜೇತರಾಗಿದ್ದರು. ರಾಜೇಗೌಡ ಆಯ್ಕೆ ಅಸಿಂಧು ಕೋರಿ ಪರಾಜಿತ ಅಭ್ಯರ್ಥಿ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.

 

Related Articles

Comments (0)

Leave a Comment