ಸಹೋದರಿಯ ಮೇಲೆ ನಾಯಿ ಛೂ ಬಿಟ್ಟ ಆರೋಪ; ತನಿಖಾ ದಾಖಲೆ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್ ಸೂಚನೆ
- by Jagan Ramesh
- September 17, 2024
- 28 Views
ಬೆಂಗಳೂರು: ಆಸ್ತಿ ವಿಚಾರದಲ್ಲಿ ವಾಗ್ವಾದ ನಡೆದ ವೇಳೆ ಸಹೋದರಿಯ ಮೇಲೆ ನಾಯಿ ಛೂ ಬಿಟ್ಟು ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಸಹೋದರ ಮತ್ತು ಆತನ ಪತ್ನಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ದಾಖಲೆಗಳನ್ನು ಸಲ್ಲಿಸುವಂತೆ ಹಲಸೂರು ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಅಕ್ರಮ ಪ್ರತಿಬಂಧಕ ಹಾಗೂ ಪ್ರಾಣ ಬೆದರಿಕೆ ಆರೋಪ ಸಂಬಂಧ ಬೆಂಗಳೂರು ಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಹಲಸೂರು ನಿವಾಸಿಗಳಾದ ಪುರುಷೋತ್ತಮ್ ಮತ್ತು ಅವರ ಪತ್ನಿ ಭಾಗ್ಯ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪೊಲೀಸರಿಗೆ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ನಾಯಿಯನ್ನೇಕೆ ಛೂ ಬಿಟ್ಟರು?
ಅರ್ಜಿದಾರರ ಪರ ವಕೀಲರು ವಿಚಾರಣೆಗೆ ಹಾಜರಾಗುತ್ತಿದ್ದಂತೆಯೇ ನ್ಯಾಯಮೂರ್ತಿಗಳು, ನಿಮ್ಮ ಕಕ್ಷಿದಾರರು ದೂರುದಾರರ ಮೇಲೆಕೆ ನಾಯಿಯನ್ನು ಛೂ ಬಿಟ್ಟರು? ನಿಮ್ಮ ಸಮಸ್ಯೆ ಏನು? ಎಂದು ಪ್ರಶ್ನಿಸಿದರು.
ಅರ್ಜಿದಾರರ ಪರ ವಕೀಲರು, ಅದೊಂದು ಸಾಕು ನಾಯಿಯಾಗಿದ್ದು, ಅದನ್ನು ಕಟ್ಟಿ ಹಾಕಲಾಗಿತ್ತು ಎಂದರು. ಆಗ ನ್ಯಾಯಮೂರ್ತಿಗಳು, ಸಾಕು ನಾಯಿಯೇ? ಸಾಕಿದ ನಾಯಿ ಕಚ್ಚುವುದಿಲ್ಲವೇ? ಕಟ್ಟಿರುವ ನಾಯಿಯನ್ನು ದೂರುದಾರರ ಮೇಲೆ ಯಾರು ಬಿಟ್ಟರು ಎಂದು ಪ್ರಶ್ನಿಸಿದರಲ್ಲದೆ, ಸಮಸ್ಯೆ ಇರುವುದು ದೂರುದಾರರನ್ನು ಅಕ್ರಮವಾಗಿ ಪ್ರತಿಬಂಧಿಸಿರುವ ವಿಚಾರದಲ್ಲಿ. ನಾಯಿಯನ್ನು ಛೂ ಬಿಟ್ಟು ದೂರುದಾರರನ್ನು ಎಲ್ಲಿಗೂ ಚಲಿಸಲು ಬಿಟ್ಟಿಲ್ಲ ಎನ್ನುವುದೇ ಪ್ರಕರಣವಾಗಿದೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಮೇಲೆ ಸುಳ್ಳು ದೂರು ದಾಖಲಿಸಲಾಗಿದೆ ಎಂದರು. ಆಗ ನ್ಯಾಯಮೂರ್ತಿಗಳು, ನಾಯಿ ಸುಳ್ಳೇ ಅಥವಾ ದೂರು ಸುಳ್ಳೇ ಎಂದು ಮರು ಪ್ರಶ್ನೆ ಎಸೆದರು. ಅದಕ್ಕೆ ವಕೀಲರು, ದೂರುದಾರರು ಮೊದಲನೇ ಅರ್ಜಿದಾರರ ಸಹೋದರಿಯಾಗಿದ್ದಾರೆ ಎಂದು ಸಮಜಾಯಿಸಿ ನೀಡಿದರು.
ನಾಯಿ ಸುಮ್ಮನೇ ನಿಂತಿತ್ತು:
ಅದೆಲ್ಲವೂ ಸರಿ. ಮನೆಗೆ ಬಂದರೆ ನಾಯಿಯನ್ನು ಛೂ ಬಿಟ್ಟರೆ ಹೇಗೆ?ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಅರ್ಜಿದಾರರ ಪರ ವಕೀಲರು ಉತ್ತರಿಸಿ, ದೂರುದಾರರು ತಾಯಿಯನ್ನು ನೋಡಲು ಅರ್ಜಿದಾರರ ಮನೆಗೆ ಬಂದರು. ಈ ವೇಳೆ ಆಸ್ತಿ ವಿಚಾರವಾಗಿ ಚರ್ಚೆ ನಡೆದಿದೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ದೂರುದಾರರ ಹೇಳಿಕೆ ಹೊರತುಪಡಿಸಿ ತನಿಖೆಯಲ್ಲಿ ಮತ್ಯಾವುದೇ ದಾಖಲೆಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಿಲ್ಲ. ಅರ್ಜಿದಾರರ ಮೇಲಿನ ಆರೋಪಗಳೇ ಸುಳ್ಳು ಎಂದರು.
ಆಗ ನ್ಯಾಯಮೂರ್ತಿಗಳು ಆಸ್ತಿ ವಿವಾದವಿದ್ದರೆ, ಆ ಸಮಸ್ಯೆ ಬಗೆಹರಿಸಲು ನಾಯಿಗೆ ಏಕೆ ಹೇಳಿದಿರಿ ಎಂದು ಮತ್ತೊಂದು ಪ್ರಶ್ನೆ ಹಾಕಿದರು. ಅದೆಲ್ಲ ಸುಳ್ಳು. ನಾಯಿ ಸುಮ್ಮನೆ ನಿಂತಿತ್ತು ಎಂದು ನಾಯಿಯ ಮೇಲಿನ ಆರೋಪವನ್ನು ಅರ್ಜಿದಾರರ ಪರ ವಕೀಲರು ಅಲ್ಲಗಳೆದರು.
ನಾಯಿ ಛೂ ಬಿಟ್ಟು ಹೆದರಿಸಿದ್ದಾರೆ ಎನ್ನುವುದು ಆರೋಪ. ಈ ಪ್ರಕರಣದಲ್ಲಿ ಅಕ್ರಮ ಪ್ರತಿಬಂಧಿಸಿದ ಅಪರಾಧ ಸ್ಪಷ್ಟವಾಗಿ ಅನ್ವಯಿಸುತ್ತದೆ. ನಾಯಿಯನ್ನು ಮೈ ಮೇಲೆ ಬಿಟ್ಟರೆ ದೂರುದಾರರು ಚಲಿಸಲು ಹೇಗೆ ಸಾಧ್ಯವಾಗುತ್ತದೆ? ಎಂದು ಪ್ರಶ್ನಿಸುತ್ತಾ ಪ್ರಕರಣ ಕುರಿತು ಪೊಲೀಸರ ಪರ ಏನು ಹೇಳುತ್ತೀರಿ ಎಂದು ಸರ್ಕಾರಿ ವಕೀಲರನ್ನು ಕೇಳಿದರು.
ಸರ್ಕಾರಿ ವಕೀಲರು ಉತ್ತರಿಸಿ, ಗಾಯದ ಪ್ರಮಾಣ ಪತ್ರವನ್ನು ಪಡೆಯಲಾಗುತ್ತಿದೆ. ಅರ್ಜಿದಾರರ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 326 ಅಡಿಯಲ್ಲಿ ಆರೋಪವಿದೆ ಎಂದು ಹೇಳಿದರು. ಇದರಿಂದ ಮತ್ತಷ್ಟು ಅಚ್ಚರಿಗೊಂಡ ನ್ಯಾಯಮೂರ್ತಿಗಳು, ಏನು? ನಾಯಿಯಿಂದ ಗಾಯವಾಗಿದೆಯೇ? ಐಪಿಸಿ ಸೆಕ್ಷನ್ 326 ಅಡಿಯ ಪ್ರಕರಣ ಎಂದರೆ ಮಾರಕಾಸ್ತ್ರಗಳಿಂದ ಗಂಭೀರವಾಗಿ ಗಾಯಗೊಳಿಸಿರುವ ಅಪರಾಧ ಎಂದರ್ಥ. ನಾಯಿಯನ್ನು ಮೈ ಮೇಲೆ ಬಿಟ್ಟಿದ್ದಾರೆ ಎಂಬುದು ದೂರುದಾರ ಆರೋಪವಾಗಿದೆ ಎಂದರು.
ಆಗ ಸರ್ಕಾರದ ಪರ ವಕೀಲರು, ಪ್ರಕರಣದ ತನಿಖೆಯ ದಾಖಲೆಗಳನ್ನು ಸಲ್ಲಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ಸಮ್ಮತಿಸಿದ ನ್ಯಾಯಮೂರ್ತಿಗಳು, ಪ್ರಕರಣದ ತನಿಖಾ ದಾಖಲೆಗಳನ್ನು ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿ ವಿಚಾರಣೆ ಮುಂದೂಡಿದರು.
Related Articles
Thank you for your comment. It is awaiting moderation.
Comments (0)