- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 6
ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿ ಎತ್ತಿ ಹಿಡಿದ ಹೈಕೋರ್ಟ್ ಪೂರ್ಣಪೀಠ
- by LegalSamachar
- April 3, 2026
- 20 Views
ಬೆಂಗಳೂರು: ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿಯನ್ನು ಎತ್ತಿಹಿಡಿದಿರುವ ಹೈಕೋರ್ಟ್ ಪೂರ್ಣಪೀಠ, ಭವಿಷ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳ ಬಡ್ತಿಗೆ ನಾಲ್ಕು ಅಂಶಗಳ ರೋಸ್ಟರ್ ಅನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಸೇವಾ ಹಿರಿತನದ ಪಟ್ಟಿಯನ್ನು ಹೊಸದಾಗಿ ಮಾಡುವಂತೆ ನಿರ್ದೇಶಿಸಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹಾಗೂ ಬಡ್ತಿ ಪಡೆದ ನ್ಯಾಯಾಧೀಶರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಸುನೀಲ್ ದತ್ ಯಾದವ್, ಲಲಿತಾ ಕನ್ನೆಗಂಟಿ ಹಾಗೂ ವಿಜಯಕುಮಾರ್ ಎ. ಪಾಟೀಲ ಅವರಿದ್ದ ಪೂರ್ಣಪೀಠ ಈ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಉಲ್ಲೇಖಿಸಿರುವ ನ್ಯಾಯಾಲಯ, ಅರ್ಜಿದಾರರಿಗೆ ಯಾವುದೇ ರೀತಿಯ ಪರಿಹಾರ ನಿರಾಕರಿಸಲಾಗಿದ್ದರೂ ಕಾನೂನು ಚೌಕಟ್ಟಿನಲ್ಲಿ ಅವರಿಗೆ ಭವಿಷ್ಯದಲ್ಲಿ ಅನುಕೂಲ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಲಾಗುವುದು. ಹೈಕೋರ್ಟ್ ಮತ್ತು ರಾಜ್ಯ ಸರ್ಕಾರ ‘4 ಅಂಶಗಳ ರೋಸ್ಟರ್’ ಅನ್ನು ಅಳವಡಿಸಿಕೊಳ್ಳಬೇಕು ಎಂದು ಅದೇಶಿಸಿರುವ ನ್ಯಾಯಪೀಠ, ಈ ವಿಚಾರದಲ್ಲಿ ಹಲವು ನಿರ್ದೇಶನಗಳನ್ನೂ ನೀಡಿದೆ.
ಪೂರ್ಣಪೀಠದ ನಿರ್ದೇಶನಗಳು:
• ಹೈಕೋರ್ಟ್ ಎಲ್ಲ ಅಗತ್ಯ ವಿವರಗಳೊಂದಿಗೆ ನಿಗದಿತ ಸಮಯದೊಳಗೆ ನ್ಯಾಯಾಂಗ ಅಧಿಕಾರಿಗಳ ವೃಂದ ಬಲವನ್ನು ಅಧಿಕೃತವಾಗಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಬೇಕು. ಆ ವೃಂದ ಬಲದ ಅಧಿಸೂಚನೆ ಆಧರಿಸಿ ‘4 ಅಂಶಗಳ ರೋಸ್ಟರ್’ ಅನ್ನು ಜಾರಿಗೊಳಿಸಬೇಕು.
• 4 ಅಂಶಗಳ ರೋಸ್ಟರ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಒಂದು ತಿಂಗಳೊಳಗೆ ವೃಂದ ಬಲದ ಅಧಿಸೂಚನೆ ಹೊರಡಿಸಬೇಕು. ಬಡ್ತಿ ಕೋಟಾದಲ್ಲಿ ಬದಲಾವಣೆಯಾಗಿ ಶೇ.50 ಬಡ್ತಿ, ಶೇ.25 ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಶೇ.25 ನೇರವಾಗಿ ನೇಮಕಗೊಂಡ ಜಿಲ್ಲಾನ್ಯಾಯಾಧೀಶರ ಕೋಟಾ ಪರಿಗಣಿಸಿ ಹೊಸ ಕೋಟಾ ಪದ್ಧತಿಯನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಬೇಕು.
• ಹಾಲಿ ಪ್ರತ್ಯೇಕ ಸೇವಾಹಿರಿತನ ನಿಯಮಗಳು ಜಾರಿಯಲ್ಲಿಲ್ಲದ ಕಾರಣ, ಹೈಕೋರ್ಟ್ ಜತೆ ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರ ಹೊಸ ಸೇವಾ ಹಿರಿತನ ನಿಯಮ ರೂಪಿಸಬೇಕು. ಹೈಕೋರ್ಟ್ ಜಿಲ್ಲಾ ನ್ಯಾಯಾಧೀಶರ ಹಿರಿತನ ಮತ್ತು ವೃಂದವನ್ನು ನಿಯಂತ್ರಿಸುವ ಕಾನೂನು ಚೌಕಟ್ಟನ್ನು ರೂಪಿಸಲು ಕ್ರಮಗಳನ್ನು ಕೈಗೊಳ್ಳಬೇಕು.
ಪ್ರಕರಣವೇನು?
ಹೈಕೋರ್ಟ್ 2016ರಲ್ಲಿ ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನ ಪಟ್ಟಿ ಪ್ರಕಟಿಸಿತ್ತು. ಅದರಲ್ಲಿ 2015ರಲ್ಲಿ ಎರಡು ಬಾರಿ ಪದೋನ್ನತಿ ನೀಡಲಾದ ಅಧಿಕಾರಿಗಳನ್ನು ಸೇವಾ ಹಿರಿತನ ಪಟ್ಟಿಯಲ್ಲಿ ನೇರ ನೇಮಕಾತಿ ಆಗಿರುವ ನ್ಯಾಯಾಧೀಶರಿಗಿಂತ ಮೇಲೆ ಇಡಲಾಗಿತ್ತು. ಇದನ್ನು ನೇರ ನೇಮಕಾತಿಯಾಗಿದ್ದ ನ್ಯಾಯಾಧೀಶರು ಪ್ರಶ್ನಿಸಿದ್ದರು.
ಆ ಅರ್ಜಿ ಆಲಿಸಿದ್ದ ಏಕಸದಸ್ಯ ನ್ಯಾಯಪೀಠ, ಸೇವಾ ಹಿರಿತನ ಪಟ್ಟಿಯನ್ನು ಹೊಸದಾಗಿ ಮಾಡುವಂತೆ ಆದೇಶ ನೀಡಿತ್ತು. ಆ ಆದೇಶ ಪ್ರಶ್ನಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಬಡ್ತಿ ಪಡೆದು ಜಿಲ್ಲಾ ನ್ಯಾಯಾಧೀಶರು ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಭಿನ್ನ ತೀರ್ಪು ನೀಡಿತ್ತು.
ನ್ಯಾಯಮೂರ್ತಿ ಅನು ಶಿವರಾಮನ್ ಅವರು ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಗೊಳಿಸಬೇಕೆಂದು ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ರಾಜೇಶ್ ರೈ ಅವರು ಏಕಸದಸ್ಯ ನ್ಯಾಯಪೀಠದ ಆದೇಶದಂತೆ ಹೊಸದಾಗಿ ಸೇವಾ ಹಿರಿತನ ಪಟ್ಟಿ ಮಾಡಬೇಕೆಂದು ತೀರ್ಪು ನೀಡಿದ್ದರು. ಭಿನ್ನ ತೀರ್ಪು ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮೇಲ್ಮನವಿಗಳ ಇತ್ಯರ್ಥಕ್ಕೆ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠವನ್ನು ರಚನೆ ಮಾಡಿದ್ದರು. ಇದೀಗ ಮೇಲ್ಮನವಿಯ ಸಮಗ್ರ ವಿಚಾರಣೆ ನಡೆಸಿರುವ ಪೂರ್ಣಪೀಠ 142 ಪುಟಗಳ ತೀರ್ಪು ಪ್ರಕಟಿಸಿದ್ದು, ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಅನೂರ್ಜಿತಗೊಳಿಸಿದೆ.
Related Articles
Thank you for your comment. It is awaiting moderation.



Comments (0)