ಮಗಳನ್ನು ಅಳಿಯ ಅಪಹರಿಸಿದ್ದಾನೆಂದು ಅತ್ತೆ ದೂರು; ನ್ಯಾಯಾಂಗ ಬಂಧನದಲ್ಲಿದ್ದ ಅಳಿಯನ ಬಿಡುಗಡೆಗೆ ಹೈಕೋರ್ಟ್ ಆದೇಶ
- by Prashanth Basavapatna
- February 27, 2026
- 10 Views
ಬೆಂಗಳೂರು: ಮಗಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ ಅಳಿಯನ ವಿರುದ್ಧ ಅತ್ತೆ ದಾಖಲಿಸಿದ್ದ ಅಪಹರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅಳಿಯ ಮತ್ತು ಆತನ ಸ್ನೇಹಿತನನ್ನು ಕೂಡಲೇ ಬಿಡುಗಡೆ ಮಾಡಲು ಜೈಲು ಅಧಿಕಾರಿಗಳಿಗೆ ಆದೇಶಿಸಿರುವ ಹೈಕೋರ್ಟ್, ಕಾನೂನು ದುರ್ಬಳಕೆಗೆ ಈ ಪ್ರಕರಣ ಸ್ಪಷ್ಟ ಉದಾಹರಣೆ ಎಂದು ತೀಕ್ಷ್ಣವಾಗಿ ನುಡಿದಿದೆ.
ಪ್ರಕರಣದಲ್ಲಿ ತಮ್ಮನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಕೋಲಾರ ತಾಲೂಕಿನ ಬೆಳಮಾರನಹಳ್ಳಿ ನಿವಾಸಿ ಬಿ.ಎನ್. ಮುರಳಿ ಹಾಗೂ ಚರಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅರ್ಜಿದಾರರಲ್ಲೊಬ್ಬರಾದ ಮುರಳಿ ದೂರುದಾರೆಯ ಅಳಿಯನಾಗಿದ್ದಾನೆ. ಮಗಳನ್ನು ಅಳಿಯ ಅಪಹರಿಸಿದ್ದಾನೆ ಎಂದು ಆರೋಪಿಸಿ ಅತ್ತೆ ದೂರು ದಾಖಲಿಸಿದ್ದಾರೆ. ಆದರೆ, ಪರಸ್ಪರ ಒಪ್ಪಿಗೆ ಮೇಲೆ ಮುರಳಿ ಮತ್ತು ದೂರುದಾರೆಯ ಮಗಳು ಮದುವೆಯಾಗಿದ್ದಾರೆ. ಇದರಿಂದ, ಮಗಳು ಸ್ವಯಿಚ್ಛೆಯಿಂದ ಮನೆ ಬಿಟ್ಟು ಮುರಳಿ ಜತೆ ಹೋಗಿದ್ದಾರೆ. ಆಕೆಗೆ 18 ವರ್ಷ ಮೀರಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ತಪ್ಪಾಗಿ ಈ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಕಾನೂನು ದುರ್ಬಳಕೆಗೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಮುಂದುವರಿದು, ಇದು ಜಾಮೀನು ಪಡೆಯಬಹುದಾದ ಪ್ರಕರಣವಾಗಿದೆ. ಇಂತಹ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಲು ಸಾಧ್ಯವಿಲ್ಲ. ಆದ್ದರಿಂದ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಲಾಗಿದೆ ಎಂದಿರುವ ನ್ಯಾಯಾಲಯ, ಅರ್ಜಿದಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಪ್ರಕರಣವೇನು?
ರಾಜಾಜಿನಗರ ನಿವಾಸಿಯಾದ ದೂರುದಾರ ಮಹಿಳೆ ತಮ್ಮ ಮಗಳನ್ನು ಅಳಿಯ ಮುರಳಿ ಮತ್ತು ಆತನ ಸ್ನೇಹಿತ ಚರಣ್ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ 2026ರ ಫೆಬ್ರವರಿ 13ರಂದು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಮುರಳಿ ಮತ್ತು ಚರಣ್ ಅವರನ್ನು ಬಂಧಿಸಿ ನಗರದ 32ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಫೆಬ್ರವರಿ 16ರಂದು ನ್ಯಾಯಾಲಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರು ದುರುದಾರೆಯ ಪುತ್ರಿಯನ್ನು ಅಪಹರಿಸಿಲ್ಲ. ದೂರುದಾರೆಯ ಪುತ್ರಿಯನ್ನು ಅರ್ಜಿದಾರ ಮುರಳಿ ಮದುವೆಯಾಗಿದ್ದಾರೆ. ಆಕೆಗೆ 21 ವರ್ಷವಾಗಿದೆ. ಗರ್ಭಪಾತವಾಗಿದ್ದರಿಂದ 2 ತಿಂಗಳು ತವರು ಮನೆಯಲ್ಲಿ ವಿಶ್ರಾಂತಿ ಪಡೆಯಲು ಮುರಳಿ ಪತ್ನಿಗೆ ಸೂಚಿಸಿದ್ದರು. ತವರು ಮನೆಯಲ್ಲಿದ್ದ ಪತ್ನಿಯೇ ಕರೆ ಮಾಡಿ ತನ್ನನ್ನು ಕರೆದೊಯ್ಯುವಂತೆ ತಿಳಿಸಿದ್ದರು. ಅದರಂತೆ ಮುರಳಿ ಫೆಬ್ರವರಿ 13ರಂದು ಬೆಳಗ್ಗೆ 11 ಗಂಟೆಗೆ ಸ್ನೇಹಿತನೊಂದಿಗೆ ದೂರುದಾರೆಯ ಮನೆಗೆ ಹೋಗಿ ಪತ್ನಿಯನ್ನು ಮನೆಗೆ ಕರೆತಂದಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಅತ್ತೆಯ ದೂರೇನು?
ಮಗಳ ಮದುವೆಯಾದ ಒಂದು ವರ್ಷದ ನಂತರ ಪೊಲೀಸರಿಗೆ ದೂರು ನೀಡಿದ್ದ ದೂರುದಾರೆ, ನನ್ನ ಮಗಳನ್ನು ಮದುವೆಯಾಗುತ್ತೇನೆ ಎಂದು ಮುರಳಿ ತಿಳಿಸಿದ್ದ. ಮಗಳು ಚಿಕ್ಕವಳಾಗಿದ್ದು, ಈಗಲೇ ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ್ದೆ. ಆಗ ಮಗಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ ಮುರಳಿ 2025ರ ಜನವರಿ 26ರಂದು ಮದುವೆಯಾಗಿದ್ದಾನೆ. ಮೂರು ತಿಂಗಳ ನಂತರ ಮಗಳು ನನಗೆ ಕರೆ ಮಾಡಿ, ಮುರಳಿ ನನಗೆ ಹೊಡೆದು ಹಿಂಸೆ ನೀಡುತ್ತಿದ್ದಾನೆ ಎಂದು ತಿಳಿಸಿದ್ದಳು. ಬಳಿಕ ಮಗಳು ನನ್ನ ಮನೆಗೆ ಬಂದು ನೆಲೆಸಿದ್ದಳು. ಆದರೆ, 2026ರ ಫೆಬ್ರವರಿ 13ರಂದು ಮುರಳಿ ಹಾಗೂ ಆತನ ಸ್ನೇಹಿತ ಚರಣ್, ನನ್ನ ಮನೆಗೆ ಬಂದು ಮಗಳನ್ನು ಅಪಹರಿಸಿ ಎಳೆದುಕೊಂಡು ಹೋಗಿದ್ದಾರೆ ದೂರಿನಲ್ಲಿ ಆರೋಪಿಸಿದ್ದರು.
Related Articles
Thank you for your comment. It is awaiting moderation.


Comments (0)