ಭೋವಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ; 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸಿಐಡಿಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 80 ಕೋಟಿ ರೂ. ಅನುದಾನ ದುರ್ಬಳಕೆ ಪ್ರಕರಣ ಕುರಿತು 3 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣ ಸಂಬಂಧ 2022ರಲ್ಲಿ ದೊಡ್ಡಬಳ್ಳಾಪುರ ಟೌನ್‌ ಠಾಣೆ, ಬೆಂಗಳೂರಿನ ಜಯನಗರದ ಸಿದ್ದಾಪುರ ಠಾಣೆ ಸೇರಿ ವಿವಿಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಡಾ.ಬಿ.ಕೆ. ನಾಗರಾಜಪ್ಪ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸಿಐಡಿಗೆ ಈ ನಿರ್ದೇಶನ ನೀಡಿದೆ.

ದೊಡ್ಡವರ ತಲೆ ಉಳಿಸಲು ಕಳಪೆ ತನಿಖೆ ಬೇಡ:
ಭೋವಿ ಅಭಿವೃದ್ಧಿ ನಿಗಮವನ್ನು ನಿರ್ದಿಷ್ಟ ಉದ್ದೇಶಕ್ಕೆ ಸ್ಥಾಪಿಸಲಾಗಿದೆ. ಬಡ ಜನರನ್ನು ಫಲಾನುಭವಿಗಳಾಗಿ ಗುರುತಿಸಲಾಗಿತ್ತು. ಆ ಬಡ ಜನರು ಪಡೆಯಬೇಕಿದ್ದ ಸರ್ಕಾರದ ಅನುದಾನ ಹಣವನ್ನೂ ನುಂಗಿ ಹಾಕಿದರೆ ಏನು ಹೇಳುವುದು? ಸರ್ಕಾರ ಸಹ ಇಂಥ ಅವ್ಯವಹಾರ ಪ್ರಕರಣದಲ್ಲಿ ಅಪೂರ್ಣ ತನಿಖೆ ನಡೆಸುತ್ತದೆ. ಏಕೆ ಈ ರೀತಿಯ ತನಿಖೆ ನಡೆಸಲಾಗುತ್ತಿದೆ ಎಂಬುದು ಅರ್ಥವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು, ಈ ಪ್ರಕರಣದಲ್ಲಿ 80 ಕೋಟಿ ರೂ. ಹಣ ದುರ್ಬಳಕೆಯಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಸಮರ್ಪಕ ತನಿಖೆ ನಡೆಸಬೇಕು. ದೊಡ್ಡ ತಲೆಗಳು ಉರುಳುತ್ತವೆ ಎಂಬ ಕಾರಣಕ್ಕೆ ಕಳಪೆ ತನಿಖೆ ನಡೆಸಬಾರದು ಎಂದು ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೈಕೋರ್ಟ್ ಆದೇಶದಲ್ಲೇನಿದೆ?
ಭೋವಿ ಸಮುದಾಯದ ಜನರಿಗೆ ನಿಗಮದ ವತಿಯಿಂದ ಬಿಡುಗಡೆ ಮಾಡಲು ಉದ್ದೇಶಿಸಿದ್ದ 80 ಕೋಟಿ ರೂ. ಅನುದಾನ ದುರ್ಬಳಕೆ ಹಾಗೂ ವಂಚಿಸಿರುವ ಆರೋಪ ಅರ್ಜಿದಾರರ ಮೇಲಿದೆ. ಸಿಐಡಿ ತನಿಖೆ ಅಂತಿಮ ಹಂತದಲ್ಲಿದೆ. ಆರೋಪಿಯಾಗಿರುವ ಡಾ.ಬಿ.ಕೆ. ನಾಗರಾಜಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಆ ನಂತರವೇ ತನಿಖೆ ಪೂರ್ಣಗೊಳ್ಳಲಿದೆ. ತನಿಖೆ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಹಾಗೂ ಕಾನೂನು ಪ್ರಕಾರ ತನಿಖೆ ನಡೆಸಿ ಕ್ರಮ ಜರುಗಿಸುವ ಮುಕ್ತ ಅವಕಾಶ ತನಿಖಾಧಿಕಾರಿಗಳಿಗೆ ಇರುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ತನಿಖೆ ಪೂರ್ಣಗೊಳಿಸಲು ಸಿಐಡಿ ಪೊಲೀಸರು ಮೂರು ತಿಂಗಳ ಕಾಲಾವಕಾಶ ಕೋರಿದ್ದಾರೆ. ಅಂತಿಮ ಹಂತದಲ್ಲಿರುವ ತನಿಖೆ ಪೂರ್ಣಗೊಳ್ಳುವ ಅಗತ್ಯವಿದೆ. ಮೂರು ತಿಂಗಳ ಕಾಲಾವಕಾಶ ನೀಡಿದರೆ, ತನಿಖೆ ಪೂರ್ಣಗೊಳ್ಳಲಿದೆ ಮತ್ತು ತನಿಖಾಧಿಕಾರಿಗಳು ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಆದ್ದರಿಂದ, ಸಿಐಡಿ ತನಿಖೆಗೆ ಅನುಮತಿಸುವುದು ಸೂಕ್ತ ಎಂದು ತಿಳಿಸಿರುವ ನ್ಯಾಯಪೀಠ, ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಹಣ ದುರ್ಬಳಕೆಯಾಗಿರುವ ಕಾರಣ ತನಿಖಾಧಿಕಾರಿಗಳು ತನಿಖೆ ಪೂರ್ಣಗೊಳಿಸಿ, ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.

ಇದೇ ವೇಳೆ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಈ ಹಿಂದೆ ಹೈಕೋರ್ಟ್‌ ಮಧ್ಯಂತರ ರಕ್ಷಣಾ ಆದೇಶ ಹೊರಡಿಸಿತ್ತು. ಆದ್ದರಿಂದ, ಅರ್ಜಿದಾರರು ಸಂಬಂಧಪಟ್ಟ ನ್ಯಾಯಾಲಯದಿಂದ ಜಾಮೀನು ಪಡೆಯುವವರೆಗೆ ಮಧ್ಯಂತರ ರಕ್ಷಣಾ ಆದೇಶವನ್ನು ಗರಿಷ್ಠ 10 ದಿನಗಳ ಕಾಲ ಮುಂದುವರಿಸಲಾಗುತ್ತಿದೆ. ಆದರೆ, ಹೈಕೋರ್ಟ್‌ ಮಧ್ಯಂತರ ರಕ್ಷಣಾ ಆದೇಶ ಹೊರಡಿಸಿದೆ ಎಂದ ಮಾತ್ರಕ್ಕೆ ಆ ಆದೇಶಕ್ಕೆ ಸಂಬಂಧಪಟ್ಟ ನ್ಯಾಯಾಲಯ ಬದ್ಧವಾಗಿರಬೇಕು ಎಂದರ್ಥವಲ್ಲ. ಅರ್ಜಿದಾರರು ವಿಚಾರಣಾ ನ್ಯಾಯಾಲಯದಿಂದ ಸೂಕ್ತ ಆದೇಶ ಪಡೆದುಕೊಳ್ಳಲು ಅವಕಾಶ ಕಲ್ಪಿಸುವುದಕ್ಕೆ ಮಾತ್ರ ಹೈಕೋರ್ಟ್ ಆದೇಶ ಸೀಮಿತವಾಗಿರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

Related Articles

Comments (0)

Leave a Comment