ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಕೆ ಕುರಿತ ಮೇಲ್ಮನವಿ; ನ.20ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- by Jagan Ramesh
- September 18, 2024
- 78 Views
ಬೆಂಗಳೂರು: ಅತಿಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್ಎಸ್ಆರ್ಪಿ) ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್ಗಳು ಮಾತ್ರ ಅಳವಡಿಸಬೇಕು ಎಂದು ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಲು ಕೋರಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 20ಕ್ಕೆ ಮುಂದೂಡಿದೆ.
ಸಾರಿಗೆ ಇಲಾಖೆ 2023ರ ಆಗಸ್ಟ್ 17ರಂದು ಹೊರಡಿಸಿರುವ ಅಧಿಸೂಚನೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಕ್ರಮ ಪ್ರಶ್ನಿಸಿ ಗುಜರಾತ್ನ ಸೂರತ್ ಮೂಲದ ಬಿಎನ್ಡಿ ಎನರ್ಜಿ ಪ್ರೈವೇಟ್ ಲಿಮಿಟೆಡ್, ಭಾರತದಲ್ಲಿ ಫಲಕ ಉತ್ಪಾದಕರ ನೋಂದಣೆ ಸಂಸ್ಥೆ, ಭಾರತೀಯ ಅತಿಸುರಕ್ಷಿತ ನೋಂದಣಿ ಫಲಕ ಉತ್ಪಾದಕರ ಕಂಪನಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು.
ಈ ಮೇಲ್ಮನವಿಯು ಬುಧವಾರ ಹಿರಿಯ ನ್ಯಾಯಮೂರ್ತಿ ಕೆ.ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿದ್ದವು.
ವಿಚಾರಣೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆ ಪರ ವಕೀಲರು ಮೇಲ್ಮನವಿಯ ವಿಚಾರಣೆಯನ್ನು ನವೆಂಬರ್ಗೆ ಮುಂದೂಡುವಂತೆ ಕೋರಿದರು. ಅದನ್ನು ಪರಿಗಣಿಸಿದ ವಿಭಾಗೀಯ ಪೀಠವು ವಿಚಾರಣೆಯನ್ನು ನ.20ಕ್ಕೆ ಮುಂದೂಡಿತು.
ಪ್ರಕರಣವೇನು?
ವಾಹನಗಳ ತಯಾರಿಕೆಯಲ್ಲಿ ಬಳಸಲಾಗುವ ಮೂಲ ಸಾಧನಗಳ ಉತ್ಪಾದಕರು ಅನುಮತಿಸಿರುವ ಪರವಾನಗಿ ಹೊಂದಿರುವ ಅತಿಸುರಕ್ಷಿತ ನೋಂದಣಿ ಫಲಕ ಉತ್ಪಾದಕರು ಮಾತ್ರ ಎಸ್ಎಸ್ಆರ್ಪಿ ಗಳನ್ನು ಹಳೆಯ ವಾಹನಗಳಿಗೆ ಪೂರೈಸಬೇಕು. ಈ ಫಲಕಗಳನ್ನು ವಾಹನ ಉತ್ಪಾದಕರು ಅನುಮತಿಸಿರುವ ಡೀಲರ್ಗಳು ಮಾತ್ರ ಅಳವಡಿಸಬೇಕು. ಹಳೆಯ ವಾಹನಗಳ ಮಾಲೀಕರು ಅಧಿಸೂಚನೆ ಹೊರಡಿಸಿರುವ ಮೂರು ತಿಂಗಳ ಒಳಗಾಗಿ ಎಚ್ಎಸ್ಆರ್ಪಿ ಅಳವಡಿಸಬೇಕು ಎಂದು 2023ರ ಆಗಸ್ಟ್ 8ರಂದು ರಾಜ್ಯ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಗುಜರಾತ್ನ ಸೂರತ್ ಮೂಲದ ಬಿಎನ್ಡಿ ಎನರ್ಜಿ ಪ್ರೈವೇಟ್ ಲಿಮಿಟೆಡ್ ಮತ್ತಿತರ ಕಂಪನಿಗಳು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ ಸಾರಿಗೆ ಇಲಾಖೆ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕೆಂಬ ಕಂಪನಿಗಳ ಮನವಿಯನ್ನು ಏಕಸದಸ್ಯ ನ್ಯಾಯಪೀಠ ತಳ್ಳಿಹಾಕಿತ್ತು. ಇದರಿಂದ, ಕಂಪನಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿವೆ.
Related Articles
Thank you for your comment. It is awaiting moderation.
Comments (0)