ಡಿ. ರೂಪಾ ಹೂಡಿರುವ ಮಾನಹಾನಿ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್; ರೋಹಿಣಿ ಸಿಂಧೂರಿಗೆ ಹಿನ್ನಡೆ
- by Jagan Ramesh
- February 21, 2026
- 14 Views
ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣದ ಸಂಜ್ಞೇ (ಕಾಗ್ನೈಜೆನ್ಸ್) ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಡಿ. ರೂಪಾ ಹೂಡಿರುವ ಮಾನಹಾನಿ ಪ್ರಕರಣದ ಸಂಬಂಧ ಜನವರಿ 13ರಂದು ಮ್ಯಾಜಿಸ್ಪ್ರೇಟ್ ನ್ಯಾಯಾಲಯ ಸಂಜ್ಞೇ (ಕಾಗ್ನೈಜೆನ್ಸ್) ಪರಿಗಣಿಸಿರುವುದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ಪ್ರಕಟಿಸಿದೆ.
ಇದರಿಂದಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ನಡುವಿನ ವ್ಯಾಜ್ಯಕ್ಕೆ ಹೊಸ ತಿರುವು ಸಿಕ್ಕಿದ್ದು, ಕಾನೂನು ಹೋರಾಟದಲ್ಲಿ ರೂಪಾ ಸದ್ಯಕ್ಕೆ ಮೇಲುಗೈ ಸಾಧಿಸಿದಂತಾಗಿದೆ. ಜತೆಗೆ, ಡಿ.ರೂಪಾ ಹೂಡಿರುವ ಪ್ರಕರಣದ ವಿಚಾರಣೆ 7ನೇ ಎಸಿಎಂಎಂ ನ್ಯಾಯಾಲಯದಲ್ಲಿ ಮುಂದುವರಿಯಲಿದೆ. ಹೈಕೋರ್ಟ್ನ ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣವೇನು?
ಜವಾಬ್ದಾರಿಯುತ ಸ್ಥಾನದಲ್ಲಿರುವ ಐಪಿಎಸ್ ಅಧಿಕಾರಿ ರೂಪಾ ನನ್ನ ವಿರುದ್ಧ ವೈಯಕ್ತಿಕ ಹಗೆ ಸಾಧಿಸಲು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರೂಪಾಗೆ ಇದೊಂದು ಅಭ್ಯಾಸವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಎಲ್ಲ ಹುದ್ದೆಗಳಲ್ಲಿ ಇದೇ ರೀತಿಯ ಆಧಾರರಹಿತ ಆರೋಪ ಮಾಡುವ ಮೂಲಕ ಮಾಧ್ಯಮಗಳ ಗಮನ ಸೆಳೆಯಲು ಹಾಗೂ ತಾನು ದ್ವೇಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕ ಹಗೆ ಸಾಧಿಸಲು ಕೀಳುಮಟ್ಟದ ಪ್ರವೃತ್ತಿ ರೂಪಾ ಪ್ರದರ್ಶಿಸುತ್ತಿದ್ದಾರೆ. ಸದಾ ಸುದ್ದಿಯಲ್ಲಿರಬೇಕೆಂದು ಬಯಸುವ ರೂಪಾ, ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಅದಕ್ಕೆ ಬೇಕಾದ ಪೋಸ್ಟ್ ಹಾಕುವ ಮೂಲಕ ಸುದ್ದಿಯ ಕೇಂದ್ರ ಬಿಂದುವಾಗಲು ಯತ್ನಿಸುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ 2023ರ ಫೆಬ್ರವರಿ 19ರಂದು ಮಾಧ್ಯಮ ಪ್ರಕಟಣೆ ನೀಡಿದ್ದರು.
ಉನ್ನತ ಸ್ಥಾನದಲ್ಲಿರುವ ರೂಪಾ ಒಳ್ಳೆಯ ಕೆಲಸಗಳತ್ತ ಗಮನಹರಿಸುವುದನ್ನು ಬಿಟ್ಟು, ಇನ್ನೊಬ್ಬರನ್ನ ಗುರಿಯಾಗಿಸಿಕೊಂಡು ಅವರ ತೇಜೋವಧೆ ಮಾಡುವುದೇ ಅವರ ಪ್ರಾಥಮಿಕ ಕೆಲಸವೆಂದು ತೋರುತ್ತದೆ. ಅದರಲ್ಲೂ ನನ್ನ ವಿರುದ್ಧ ಯಾವುದೋ ವೈಯಕ್ತಿಕ ಹಗೆ ಇಟ್ಟುಕೊಂಡು ಸುಳ್ಳು, ವೈಯಕ್ತಿಕ ನಿಂದನೆ ಅಭಿಯಾನ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಹಾಗೂ ವಾಟ್ಸ್ಆ್ಯಪ್ ಸ್ಟೇಟಸ್ ಸ್ಕ್ರೀನ್ ಶಾಟ್ಗಳ ಮೂಲಕ ಸಂಗ್ರಹಿಸಿರುವ ಫೋಟೊಗಳನ್ನು ನನ್ನ ತೇಜೋವಧೆ ಮಾಡಲು ರೂಪಾ ಬಳಸಿದ್ದಾರೆ. ಈ ಫೋಟೊಗಳನ್ನು ಕೆಲ ಅಧಿಕಾರಿಗಳಿಗೆ ಕಳುಹಿಸಿದ್ದೇನೆನ್ನುವ ಸುಳ್ಳು ಆರೋಪ ಮಾಡಿದ್ದಾರೆ. ಆದ್ದರಿಂದ, ಆ ಅಧಿಕಾರಿಗಳ ಹೆಸರು ಬಹಿರಂಗಪಡಿಸಬೇಕು ಎಂದು ರೂಪಾ ಅವರನ್ನು ಆಗ್ರಹಿಸುತ್ತೇನೆ ಎಂದು ಸಿಂಧೂರಿ ವಿವರಿಸಿದ್ದರು.
ಜತೆಗೆ, ರೂಪಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡಿದ್ದೇನೆ. ಅಲ್ಲದೇ, ಐಪಿಸಿ ವಿವಿಧ ಸೆಕ್ಷನ್ಗಳ ಅನ್ವಯ ರೂಪಾ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆಂದು ಹೇಳಿದ್ದರು.
ಇದರಿಂದ ರೂಪಾ ಅವರು, ಸಿಂಧೂರಿ ಹೇಳಿಕೆಯನ್ನು 1.8 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಅವರ ಅವಹೇಳನಕಾರಿ ಹೇಳಿಕೆ ನಂತರ ನನ್ನನ್ನು ವರ್ಗಾವಣೆ ಮಾಡಲಾಗಿದ್ದು, 6 ತಿಂಗಳವರೆಗೆ ಸಂಬಳ ನೀಡದೇ ಹುದ್ದೆ ಇಲ್ಲದೇ ವರ್ಗಾಯಿಸಿದ್ದರು. ಅವರ ಹೇಳಿಕೆಯಿಂದ ನನ್ನ ತಂಗಿ, ಪತಿ, ಮಕ್ಕಳಿಗೂ ಮಾನಸಿಕ ಯಾತನೆಯಾಗಿದೆ ಎಂದು ಆಕ್ಷೇಪಿಸಿ ನಗರದ 7ನೇ ಎಸಿಎಂಎಂ ಕೋರ್ಟ್ನಲ್ಲಿ ಮಾನಹಾನಿ ಪ್ರಕರಣ ಹೂಡಿದ್ದು, ಸ್ವಯಂ ಹೇಳಿಕೆಯನ್ನೂ ದಾಖಲಿಸಿದ್ದರು. ಅದರ ಆಧಾರದಲ್ಲಿ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ಪ್ರಕರಣದ ಸಂಜ್ಞೇ ಪರಿಗಣಿಸಿ, ಸಿಂಧೂರಿಗೆ ನೋಟಿಸ್ ನೀಡಿತ್ತು.
Related Articles
Thank you for your comment. It is awaiting moderation.


Comments (0)