ಮುಡಾ ಹಗರಣ; ಜಿ.ಟಿ. ದಿನೇಶ್ ಕುಮಾರ್ ವಿರುದ್ಧದ ಜನಪ್ರತಿನಿಧಿಗಳ ನ್ಯಾಯಾಲಯದ ವಿಚಾರಣೆ ಇಡಿ ಕೋರ್ಟ್‌ಗೆ ವರ್ಗಾಯಿಸಿದ ಹೈಕೋರ್ಟ್
- by Jagan Ramesh
- March 26, 2026
- 3 Views
ಬೆಂಗಳೂರು: ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ (ಪಿಎಂಎಲ್) ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ವಿಚಾರಣೆಯನ್ನು ಪಿಎಂಎಲ್ ಕಾಯ್ದೆ ಅಡಿ ಸ್ಥಾಪಿತವಾಗಿರುವ ಇಡಿ ವಿಶೇಷ ನ್ಯಾಯಾಲಯ ನಡೆಸಬೇಕೆ ಹೊರತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವಲ್ಲ ಎಂದು ಆಕ್ಷೇಪಿಸಿ ದಿನೇಶ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಗುರುವಾರ ಇತ್ಯರ್ಥಪಡಿಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು.
ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ. ಸದ್ಯ ಈ ಪ್ರಕರಣದಲ್ಲಿ ಜನಪ್ರತಿನಿಧಿಗಳು ಇಲ್ಲ. ಅರ್ಜಿದಾರರೂ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರು ಜನಪ್ರತಿನಿಧಿಯಲ್ಲ. ಅವರ ವಿರುದ್ಧ ಇಡಿ ತನಿಖೆ ನಡೆಸಿದೆ. ಆದ್ದರಿಂದ, ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುವುದಕ್ಕಿಂತ ಇಡಿ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಪ್ರಕರಣವನ್ನು ವರ್ಗಾಯಿಸಿ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಪ್ರಕರಣವೇನು?
ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ ಜಿ.ಟಿ. ದಿನೇಶ್ ಕುಮಾರ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಅನರ್ಹರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಪಿಎಂಎಲ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ 2025ರ ಸೆಪ್ಟೆಂಬರ್ 17ರಂದು ದಿನೇಶ್ ಅವರನ್ನು ಬಂಧಿಸಿತ್ತು.
ಆನಂತರ, ಅಕ್ಟೋಬರ್ 5ರಂದು ದಿನೇಶ್ ಕುಮಾರ್‌ಗೆ ಸೇರಿದ ಸುಮಾರು 40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಬಳಿಕ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ಧ 2025ರ ನವೆಂಬರ್ 19ರಂದು ಆರೋಪಪಟ್ಟಿ ಸಹ ಸಲ್ಲಿಸಲಾಗಿತ್ತು. ಆಯುಕ್ತರಾಗಿದ್ದ ಸಮಯದಲ್ಲಿ ಅನರ್ಹರಿಗೆ ಒಟ್ಟು 450 ಕೋಟಿಗೂ ಅಧಿಕ ಬೆಲೆ ಬಾಳುವ 283 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
Related Articles
Thank you for your comment. It is awaiting moderation.


Comments (0)