- ಟ್ರಯಲ್ ಕೋರ್ಟ್
- ಹೈಕೋರ್ಟ್
- Like this post: 0
ಪವಿತ್ರಾ ಗೌಡ ಸೇರಿ ಮೂವರು ಆರೋಪಿಗಳಿಗೆ ಮನೆ ಊಟ; ಸೆಷನ್ಸ್ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
- by Jagan Ramesh
- January 20, 2026
- 7 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ಗೆ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಸೂಚಿಸಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜನವರಿ 12ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಪ್ರಕರಣದ ತನಿಖಾಧಿಕಾರಿಗಳಾದ ನಗರದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು. ಜತೆಗೆ, ಪ್ರತಿವಾದಿಗಳಾದ ಪವಿತ್ರಾಗೌಡ, ನಾಗರಾಜ್ ಮತ್ತು ಲಕ್ಷ್ಮಣ್ಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಆದೇಶದಲ್ಲೇನಿದೆ?
ವಿಶೇಷ ಸರ್ಕಾರಿ ಅಭಿಯೋಜಕರು, ಪ್ರಕರಣದ ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಬಾರದು ಎಂದು ಸುಪ್ರಿಂಕೋರ್ಟ್ ಆದೇಶಿಸಿದೆ. ಆದೇಶ ಉಲ್ಲಂಘನೆಯಾದರೆ ಅಧಿಕಾರಿಗಳು ಕ್ರಮ ಎದುರಿಸಬೇಕಾಗುತ್ತದೆ. ಇನ್ನೂ ವಿಶೇಷ ಸಂದರ್ಭದಲ್ಲಿ ಮಾತ್ರ ಮನೆ ಊಟಕ್ಕೆ ಅವಕಾಶವಿದೆ. ಕಾನೂನು ಮುಂದೆ ಎಲ್ಲರೂ ಒಂದೇ. ಒಬ್ಬೊಬ್ಬರಿಗೆ ಒಂದು ರೀತಿಯ ಸೌಲಭ್ಯ ಕಲ್ಪಿಸುವುದು ಕಾನೂನುಬಾಹಿರವಾಗುತ್ತದೆ. ಜೈಲು ಕೈಪಿಡಿಯ ನಿಯಮಗಳನ್ನು ಉಪೇಕ್ಷಿಸಿ ಮೂವರು ಆರೋಪಿಗಳಿಗೆ ಮನೆ ಊಟ ಒದಗಿಸಲು ಸೆಷನ್ಸ್ ನ್ಯಾಯಾಲಯ ಆದೇಶಿಸಿರುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದಾರೆ. ಈ ವಾದ ಪರಿಗಣಿಸಿ ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಎಸ್ಪಿಪಿ ವಾದವೇನು?
ಇದಕ್ಕೂ ಮುನ್ನ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಬಿ.ಎನ್. ಜಗದೀಶ್ ವಾದ ಮಂಡಿಸಿ, ಪ್ರಕರಣದ ಆರೋಪಿಗಳಿಗೆ ಯಾವುದೇ ವಿಶೇಷ ಸೌಲಭ್ಯ ನೀಡಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ, ಪವಿತ್ರಾ ಗೌಡ ಸೇರಿ ಮೂವರು ಆರೊಪಿಗಳಿಗೆ ವಾರಕೊಮ್ಮೆ ಮನೆ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಜೈಲು ಅಧಿಕಾರಿಗಳಿಗೆ ಸೆಷನ್ಸ್ ನ್ಯಾಯಾಲಯ ನಿರ್ದೇಶಿಸಿದೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾದರೆ ಅಧಿಕಾರಿಗಳು ಕ್ರಮ ಎದುರಿಸಬೇಕಾಗುತ್ತದೆ. ಇನ್ನು ಜೈಲು ಆಹಾರ ಗುಣಮಟ್ಟದ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಎಫ್ಎಸ್ಎಸ್ಎಐ) ಪ್ರಾಧಿಕಾರ ನಾಲ್ಕು ಸ್ಟಾರ್ನ ಸರ್ಟಿಫಿಕೇಟ್ ನೀಡಿದೆ. ವೈದ್ಯರು ಸೂಚಿಸಿದರೆ ಮಾತ್ರ ಮನೆ ಊಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆದ್ದರಿಂದ, ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.
Related Articles
Thank you for your comment. It is awaiting moderation.


Comments (0)