ಡ್ರೋನ್ ಪರೀಕ್ಷಾರ್ಥ ಹಾರಾಟದ ವೇಳೆ ಅತಿಕ್ರಮ ಪ್ರವೇಶ ಆರೋಪ; ಸಂಸ್ಥೆ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಭಾರತೀಯ ಸೇನೆಗೆ ಡ್ರೋನ್‌ ಪೂರೈಸುವ ಸಂಸ್ಥೆಯೊಂದರ ಡ್ರೋನ್‌ನ ಪರೀಕ್ಷಾರ್ಥ ಹಾರಾಟದ ವೇಳೆ ಕಾಂಪೌಂಡ್‌ ದಾಟಿ ಬೇರೆಡೆಗೆ ಇಳಿದು ಅತಿಕ್ರಮ ಪ್ರವೇಶಿಸಿದ ಆರೋಪದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿದ್ದ ಪ್ರಕರಣಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಎಫ್‌ಐಆರ್‌ ಪ್ರಶ್ನಿಸಿ ‘ನ್ಯೂ ಸ್ಪೇಸ್‌ ರಿಸರ್ಚ್‌ ಆ್ಯಂಡ್‌ ಟೆಕ್ನಾಲಜೀಸ್‌ ಪ್ರೈ. ಲಿ.’ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿತಲ್ಲದೆ, ಅರ್ಜಿದಾರ ಸಂಸ್ಥೆಗೆ ಎಫ್‌ಐಆರ್‌ ಪ್ರತಿಯನ್ನೂ ನೀಡದೇ ಸತಾಯಿಸಿ, ಕಿರುಕುಳ ನೀಡಲಾಗಿದೆ ಎಂಬ ಆರೋಪದ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ ಸಾದಿಕ್‌ ಪಾಷಾ ಅವರು ಪ್ರಮಾಣಪತ್ರದ ಮೂಲಕ ವಿವರಣೆ ನೀಡಬೇಕು. ಇಲ್ಲವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಫೆಬ್ರವರಿ 13ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಂಗದ್‌ ಕಾಮತ್‌, ಅರ್ಜಿದಾರ ಸಂಸ್ಥೆ ಭಾರತೀಯ ಸೇನೆಗೆ ಡ್ರೋನ್‌ ಪೂರೈಸುತ್ತದೆ. ಜನವರಿ 29ರಂದು ಸಂಸ್ಥೆ ಡ್ರೋನ್‌ ಮಾದರಿ ಪರೀಕ್ಷಿಸುವಾಗ ಕಾಂಪೌಂಡ್‌ ದಾಟಿ ಬೇರೆಡೆಗೆ ಇಳಿದು ಅತಿಕ್ರಮ ಪ್ರವೇಶ ಮಾಡಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಿಎನ್‌ಎಸ್‌ ಕಾಯ್ದೆ 125 ಮತ್ತು 329(3) ಅಡಿ ಸ್ವಯಂ ಪ್ರೇರಿತವಾಗಿ ದಾಖಲಿಸಿದ್ದಾರೆ. ಆ ಮೂಲಕ ಅರ್ಜಿದಾರರು ನ್ಯಾಯುಯುತವಾಗಿ ತಾವು ಗುತ್ತಿಗೆ ಪಡೆದಿರುವ ಜಾಗದಲ್ಲಿ ಡ್ರೋನ್‌ ನಿಯಮಗಳು 2021 ಅನುಸಾರ ಸಂಶೋಧನಾ ಚಟುವಟಿಕೆ ಮತ್ತು ಡ್ರೋನ್‌ಗಳ ಪರೀಕ್ಷಾರ್ಥ ಹಾರಾಟ ನಡೆಸಲು ಅಡ್ಡಿಪಡಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಮುಂದುವರಿದು, ಡ್ರೋನ್‌ ಅತಿಕ್ರಿಮ ಪ್ರವೇಶ ಮಾಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಇನ್‌ಸ್ಪೆಕ್ಟರ್‌ ಠಾಣೆಗೆ ಕರೆಸಿದ್ದಾರೆ. ಜತೆಗೆ, ಎಫ್‌ಐಆರ್‌ ಪ್ರತಿಯನ್ನೂ ನೀಡದೇ ಸತಾಯಿಸಿದ್ದಾರೆ. 6 ಗಂಟೆಗಳ ಕಾಲ ಸಂಸ್ಥೆಯ ಅಧಿಕಾರಿಗಳನ್ನು ಪೊಲೀಸರು ಠಾಣೆಯಲ್ಲಿಯೇ ಕೂರಿಸಿಕೊಂಡಿದ್ದರು. ಪ್ರಕರಣದಲ್ಲಿ ಅಗತ್ಯವಿಲ್ಲದಿದ್ದರೂ ಕಂಪನಿಯ ಲಾಭ, ವ್ಯವಹಾರದ ವಿವರಗಳನ್ನು ಇನ್‌ಸ್ಪೆಕ್ಟರ್‌ ಕೇಳಿದ್ದಾರೆ. ಡ್ರೋನ್‌ ಪರೀಕ್ಷಾರ್ಥ ಹಾರಾಟಕ್ಕೆ ಡಿಜಿಸಿಎನಿಂದ ಅನುಮತಿ ಪಡೆದಿವುದನ್ನು ತೋರಿಸಿದರೂ ಸಹ ಪೊಲೀಸರು ಕಿರುಕುಳ ನೀಡಿದ್ದಾರೆ. ಆದ್ದರಿಂದ, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಬೇಕು ಹಾಗೂ ಇನ್‌ಸ್ಪೆಕ್ಟರ್ ಅವರಿಂದ ವಿವರಣೆ ಪಡೆಯಬೇಕು ಎಂದು ಕೋರಿದರು.

 

Related Articles

Comments (0)

Leave a Comment