ಕರ್ತವ್ಯ ಲೋಪವೆಸಗಿದ ಆರೋಪ; ಎಸ್‌ಐ, ಹೆಡ್ ಕಾನ್‌ಸ್ಟೆಬಲ್ ವಿರುದ್ಧದ ಇಲಾಖಾ ತನಿಖೆ ಶಿಫಾರಸಿಗೆ ಹೈಕೋರ್ಟ್ ತಡೆ
- by Jagan Ramesh
- January 27, 2026
- 18 Views
ಬೆಂಗಳೂರು: ಬುದ್ಧಿಮಾಂದ್ಯ ಯುವಕನ ಕಿಡ್ನಿ ಮಾರಾಟ ಹಾಗೂ ನಿಗೂಢ ಸಾವು ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಸಬ್‌ಇನ್‌ಸ್ಪೆಕ್ಟರ್ ಹಾಗೂ ಮುಖ್ಯ ಪೇದೆಯ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ದಂಡ ವಸೂಲಿ ಮಾಡುವಂತೆ ಶಿಫಾರಸು ಮಾಡಿ ರಾಜ್ಯ ಮಾನವ ಹಕ್ಕುಗಳ ಆಯೋಗ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಮಾನವ ಹಕ್ಕು ಆಯೋಗ 2022ರ ಡಿಸೆಂಬರ್ 5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಆಗಿರುವ ವಿ. ಸಂತೋಷ್ ಹಾಗೂ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿರುವ ಕೆ.ಎಸ್. ಗೋಪಾಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಇದೇ ಪ್ರಕರಣದಲ್ಲಿ ಇತರ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧದ ಪ್ರಕರಣಕ್ಕೆ ಮತ್ತೊಂದು ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ. ಆದ್ದರಿಂದ, ಈ ಪ್ರಕರಣದಲ್ಲೂ ಮಧ್ಯಂತರ ತಡೆ ನೀಡಲಾಗುತ್ತದೆ ಎಂದು ತಿಳಿಸಿತು. ಜತೆಗೆ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಮಾನವ ಹಕ್ಕುಗಳ ಆಯೋಗ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ದೂರುದಾರ ಶಿವಾನಂದ ಬಿ. ಬಾವೂರು ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿತು.
ಪ್ರಕರಣವೇನು?
ಯಾದಗಿರಿ ಜಿಲ್ಲೆ ಮೂಲದ 29 ವರ್ಷದ ಬುದ್ದಿಮಾಂದ್ಯ ಯುವಕ ಶಂಕರಪ್ಪ ಎಂಬಾತನ ಕಿಡ್ನಿ ಮಾರಾಟ ಹಾಗೂ ಸಾವಿಗೆ ಸಂಬಂಧಿಸಿದಂತೆ 2020ರಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು 6 ತಿಂಗಳ ವಿಳಂಬ ಮಾಡಿರುವುದು ಹಾಗೂ ಸೂಕ್ತ ತನಿಖೆ ನಡೆಸದೆ ಕರ್ತವ್ಯಲೋಪ ಎಸಗಿರುವುದು ಮಾನವ ಹಕ್ಕುಗಳ ಆಯೋಗದ ತನಿಖೆಯಲ್ಲಿ ದೃಢಪಟ್ಟಿತ್ತು. ಇದರಿಂದ, ಎಸ್‌ಐ ವಿ. ಸಂತೋಷ್, ಮುಖ್ಯಪೇದೆ ಕೆ.ಎಸ್. ಗೋಪಾಲ್ ಸೇರಿ ಐವರು ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಮತ್ತು ಸಬ್ ಇನ್‌ಸ್ಪೆಕ್ಟರ್ ಅವರಿಂದ 1.50 ಲಕ್ಷ ರೂ., ಮುಖ್ಯಪೇದೆಯಿಂದ 1 ಲಕ್ಷ ರೂ. ದಂಡ ವಸೂಲಿ ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆಯೋಗ ಶಿಫಾರಸು ಮಾಡಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
Related Articles
Thank you for your comment. It is awaiting moderation.


Comments (0)