ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ; ಶಕುಂತಲಾ ನಟರಾಜ್‌ ವಿರುದ್ಧದ ಪ್ರಕರಣಕ್ಕೆ ತಡೆ

ಬೆಂಗಳೂರು/ಕಲಬುರಗಿ: ಯಾದಗಿರಿ ಜಿಲ್ಲಾ ಕ್ರೀಡಾಂಗಣದ ದುರವಸ್ಥೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ ಆರೋಪ ಸಂಬಂಧ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್‌ ಹಾಗೂ ಪಕ್ಷದ ಅಧಿಕೃತ ಸಾಮಾಜಿಕ ಮಾಧ್ಯಮ ಸಂಚಾಲಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಶಕುಂತಲಾ ನಟರಾಜ್‌ ಹಾಗೂ ಬಿಜೆಪಿ ಸಾಮಾಜಿಕ ಮಾಧ್ಯಮ ಸಂಚಾಲಕ ಪ್ರಶಾಂತ್ ಮಾಕನೂರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಬುಧವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಎಫ್‌ಐಆರ್‌ ಮತ್ತು ಅದಕ್ಕೆ ಸಂಬಂಧಿಸಿದಂತೆ ಕಲಬುರಗಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಬಾಕಿ ಇರುವ ನ್ಯಾಯಿಕ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿತಲ್ಲದೆ, ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆ ಪೊಲೀಸರಿಗೆ ನೋಟಿಸ್ ಹಾಗೂ ದೂರುದಾರ ಜಗದೇವ್ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜನವರಿ 28ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಶಕುಂತಲಾ ನಟರಾಜ್ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್‌ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ರಾಜಕೀಯ ದ್ವೇಷದಿಂದ ಈ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಅವಮಾನಿಸಲಾಗಿದೆ ಎಂಬ ಆರೋಪವಿದ್ದು, ಅವರು ದೂರು ದಾಖಲಿಸಿಲ್ಲ. ಬದಲಿಗೆ, ಆಡಳಿತಾರೂಢ ಪಕ್ಷದ ಪದಾಧಿಕಾರಿ ಮುಖಾಂತರ ಈ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರಿದರು.

Related Articles

Comments (0)

Leave a Comment