ಆದೇಶ ಅಪ್ಲೋಡ್ ಮಾಡಲು ಯಾವ ವ್ಯವಸ್ಥೆ ಇದೆ?; ಎನ್‌ಸಿಎಲ್‌ಟಿ ರಿಜಿಸ್ಟ್ರಾರ್‌ರಿಂದ ಮಾಹಿತಿ ಕೇಳಿದ ಹೈಕೋರ್ಟ್

ಬೆಂಗಳೂರು: ನಗರದಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ತನ್ನ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ಕಾಲಮಿತಿಯಲ್ಲಿ ಅಪ್‌ಲೋಡ್‌ ಮಾಡುವ ವ್ಯವಸ್ಥೆ ಹೊಂದಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಮಂಡಳಿಯ ರಿಜಿಸ್ಟ್ರಾರ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.

ಕಂಪನಿ ವ್ಯಾಜ್ಯವೊಂದರಲ್ಲಿ ಎನ್‌ಸಿಎಲ್‌‌ಟಿ ಕಳೆದ ಜುಲೈ 29ರಂದೇ ಆದೇಶ ನೀಡಿದ್ದರೂ ಈವರೆಗೂ ಅದರ ಅಧಿಕೃತ ಪ್ರತಿಯನ್ನು ನೀಡಿಲ್ಲ. ಆದ್ದರಿಂದ, ಈ ಸಂಬಂಧ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಫೀನಿಕ್ಸ್‌ ಆರ್ಕ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ವ್ಯಾಜ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಮಂಡಳಿ ಕಳೆದ ಜುಲೈ 29ರಂದು ಮೌಖಿಕವಾಗಿ ತೀರ್ಪು ಪ್ರಕಟಿಸಿದೆ. ಆದರೆ, ಅದರ ದೃಢೀಕೃತ ಪ್ರತಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪ್ರಕರಣದ ಬಗ್ಗೆ ನಾವು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ (ಎನ್‌ಸಿಎಲ್‌‌ಎಟಿ) ಮುಂದೆಯೂ ಮೇಲ್ಮನವಿ ಸಲ್ಲಿಸಿದ್ದೇವೆ. ಅದೂ ಸಹ ಆದಷ್ಟು ಬೇಗ ಪ್ರಮಾಣೀಕೃತ ಪ್ರತಿ ಬಿಡುಗಡೆಗೆ ಆದೇಶಿಸಿದೆ. ಆದರೆ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಎನ್‌ಸಿಎಲ್‌ಟಿ ಪರ ವಕೀಲರು, ರಿಜಿಸ್ಟ್ರಾರ್‌ ನೀಡಿರುವ ಮಾಹಿತಿಯಂತೆ ಆದಷ್ಟು ಶೀಘ್ರ ಅದೇಶದ ಪ್ರತಿಯನ್ನು ಅಪ್‌ಲೋಡ್‌ ಮಾಡಲಾಗುವುದು ಎಂದರು.

ಇದನ್ನು ಆಲಿಸಿದ ನ್ಯಾಯಪೀಠ, ಹೈಕೋರ್ಟ್‌ ನೀಡುವ ಆದೇಶಗಳಲ್ಲಿ ದಿನಾಂಕ ಮತ್ತು ಸಮಯದ ಮುದ್ರೆ (ಸ್ಟಾಂಪ್‌) ಇರುತ್ತದೆ, ಅದೇ ಮಾದರಿಯನ್ನು ಎನ್‌ಸಿಎಲ್‌ಟಿ ಕೂಡ ಅನುಸರಿಸಬಹುದಲ್ಲವೇ ಎಂದು ಮೌಖಿಕವಾಗಿ ಕೇಳಿತಲ್ಲದೆ, ನ್ಯಾಯಮಂಡಳಿಗಳು ಮಾಡುವ ಆದೇಶಗಳನ್ನು ಗರಿಷ್ಠ ಒಂದು ವಾರದಲ್ಲಿ ಅಪ್‌ಲೋಡ್‌ ಮಾಡಬೇಕು. ಹೈಕೋರ್ಟ್‌ನಲ್ಲಿ ಸದ್ಯ ಅನುಸರಿಸುತ್ತಿರುವ ವ್ಯವಸ್ಥೆಯನ್ನೇ ಅಲ್ಲೂ ಪಾಲಿಸಬೇಕಾಗುತ್ತದೆ. ಆದ್ದರಿಂದ, ಸದ್ಯ ಅಲ್ಲಿ ಯಾವ ವ್ಯವಸ್ಥೆ ಜಾರಿಯಲ್ಲಿದೆ ಎಂಬ ಬಗ್ಗೆ ನ್ಯಾಯಮಂಡಳಿಯ ರಿಜಿಸ್ಟ್ರಾರ್‌ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿ ಅರ್ಜಿ ವಿಚಾರಣೆ ಮುಂದೂಡಿತು.

 

Related Articles

Comments (0)

Leave a Comment