ಕೈದಿಗಳಿಗೆ ಮನೆ ಊಟ ಪೂರೈಕೆ; ಮಾರ್ಗಸೂಚಿ ರಚನೆಗೆ ಇದು ಸಕಾಲ – ಹೈಕೋರ್ಟ್

ಬೆಂಗಳೂರು: ಕೈದಿಗಳಿಗೆ ಮನೆ ಊಟ ಹಾಗೂ ಇತರ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತು ಮಾರ್ಗಸೂಚಿಗಳನ್ನು ರೂಪಿಸಲು ಕಾಲ ಕೂಡಿ ಬಂದಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ, ನಾಗರಾಜ್‌ ಮತ್ತು ಲಕ್ಷ್ಮಣ್‌ಗೆ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿದ್ದ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಆರೋಪಿಗಳಾದ ನಾಗರಾಜ್ ಹಾಗೂ ಲಕ್ಷ್ಮಣ್ ಪರ ವಕೀಲ ಎಸ್‌. ಸುನೀಲ್‌ ಕುಮಾರ್‌ ವಾದ ಮಂಡಿಸಿ, ದರ್ಶನ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಮಾಡಿರುವ ಆದೇಶ ತೋರಿಸುವ ಮೂಲಕ ಜೈಲು ಅಧಿಕಾರಿಗಳು ಅಕ್ಷರಶಃ ಇತರ ಆರೋಪಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ದರ್ಶನ್‌ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕಾಗಿ, ಅವರನ್ನು ಅಮಾನುಷವಾಗಿ ನಡೆಸಿಕೊಳ್ಳಬಾರದು ಎಂದು ವಿಚಾರಣಾ ನ್ಯಾಯಾಲಯ ಹೇಳಿದೆ. ಇದರಲ್ಲಿ ತಪ್ಪೇನಿದೆ ಎಂದರು.

ಆಗ ನ್ಯಾಯಪೀಠ, ಯಾವೆಲ್ಲ ಕೈದಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ಪ್ರಾಸಿಕ್ಯೂಷನ್‌ ಒದಗಿಸಬೇಕು. ಸುಪ್ರೀಂಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ ಯಾರಿಗೂ ವಿಶೇಷ ಸೌಲಭ್ಯ ಕಲ್ಪಿಸಲಾಗದು. ಜೈಲು ಕೈಪಿಡಿಯನ್ನು ಪಾಲಿಸಲೇಬೇಕು. ಆಹಾರ, ಬೆಡ್‌ ಅಥವಾ ಇನ್ನಾವುದೇ ವಿಚಾರವಿರಲಿ ಜೈಲಿನಲ್ಲಿ ಸೌಲಭ್ಯ ಕಲ್ಪಿಸುವುದಕ್ಕೆ ಕಾನೂನು ರೂಪಿಸೋಣ. ಕೊಡಲೇಬಾರದು ಎಂದು ಹೇಳುತ್ತಿಲ್ಲ. ವೈದ್ಯರ ಸರ್ಟಿಫಿಕೇಟ್‌ ಇರಬೇಕಾಗುತ್ತದೆ. ಮಾರ್ಗಸೂಚಿ ರೂಪಿಸಲು ಕಾಲ ಕೂಡಿ ಬಂದಿದೆ ಎಂದು ಮೌಖಿಕವಾಗಿ ಹೇಳಿತು.

ಕಾಮಾಕ್ಷಿಪಾಳ್ಯ ಪೊಲೀಸರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್‌ ವಾದ ಮಂಡಿಸಿ, ಸುಪ್ರೀಂಕೋರ್ಟ್‌ ತೀರ್ಪು ಮತ್ತು ಜೈಲು ಕೈಪಿಡಿಯ ಪ್ರಕಾರ ನಡೆಯಲೇಬೇಕು. ಮಾರ್ಗಸೂಚಿ ರೂಪಿಸುವ ಸಂಬಂಧ ನ್ಯಾಯಾಲಯಕ್ಕೆ ಎಲ್ಲ ದಾಖಲೆಗಳನ್ನು ಒದಗಿಸಲಾಗುವುದು ಎಂದರು.

ವಾದ ಆಲಿಸಿದ ನ್ಯಾಯಪೀಠ, ನಟ ದರ್ಶನ್ ತಮಗೆ ಮನೆ ಊಟಕ್ಕೆ ಅವಕಾಶ ನೀಡಬೇಕು ಎಂದು ಕೋರಿ 2024ರ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೇ ಮಾರ್ಗಸೂಚಿ ರೂಪಿಸಬೇಕಿತ್ತು. ಆಗ ದರ್ಶನ್ ಪರ ವಕೀಲರು ಅರ್ಜಿ ಹಿಂಪಡೆದಿದ್ದರು. ಈಗ, ಜೈಲು ಕೈಪಿಡಿ, ಅಂದಿನ ಅರ್ಜಿ ಸೇರಿ ಎಲ್ಲ ದಾಖಲೆಗಳನ್ನು ಸಲ್ಲಿಸಿದರೆ ಈ ವಿಚಾರದ ಕುರಿತು ಮಾರ್ಗಸೂಚಿ ರೂಪಿಸಲಾಗುವುದು ಎಂದು ತಿಳಿಸಿ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 2ಕ್ಕೆ ಮುಂದೂಡಿತು.

Related Articles

Comments (0)

Leave a Comment