ಕಾಲು ಕಳೆದುಕೊಂಡಿದ್ದ ತರಕಾರಿ ವ್ಯಾಪಾರಿಗೆ ಹೈಕೋರ್ಟ್ ನೆರವಿನ ಹಸ್ತ; ಅಪಘಾತ ಪರಿಹಾರದ ಮೊತ್ತ ಹೆಚ್ಚಳ
- by Jagan Ramesh
- October 7, 2025
- 469 Views
ಬೆಂಗಳೂರು: ರಸ್ತೆ ಅಪಘಾತದಲ್ಲಿ ಎಡಗಾಲನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೀಡಾಗಿದ್ದ ತರಕಾರಿ ವ್ಯಾಪಾರಿಯೊಬ್ಬರ ನೆರವಿಗೆ ಧಾವಿಸಿರುವ ಹೈಕೋರ್ಟ್, ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (ಎಂಎಸಿಟಿ) ನೀಡಿದ್ದ 5,98,300 ರೂ. ಪರಿಹಾರದ ಮೊತ್ತವನ್ನು 11,40,795 ರೂ. ಗಳಿಗೆ ಹೆಚ್ಚಳ ಮಾಡಿದೆ.
ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೋರಿ ಆನೇಕಲ್ ತಾಲೂಕಿನ ದೊಮ್ಮಸಂದ್ರದ ನಿವಾಸಿ ಮುನಿಯಪ್ಪ (62) ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಚಿಲ್ಲಕೂರು ಸುಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಒಂದು ಕಾಲನ್ನು ಕಳೆದುಕೊಂಡಿರುವ ತರಕಾರಿ ಮಾರಾಟ ಮಾಡುವ ವ್ಯಕ್ತಿಗೆ ಭವಿಷ್ಯದಲ್ಲಿ ಉದ್ಯೋಗ ಮುಂದುವರಿಸುವುದು ಹಾಗೂ ಹಣ ಸಂಪಾದನೆ ಮಾಡುವುದು ಬಹಳ ಕಷ್ಟಕರವಾಗಿರುತ್ತದೆ. ಅಂಗವೈಕಲ್ಯವನ್ನು ನಿರ್ಣಯಿಸುವಾಗ ಆತನ ಉದ್ಯೋಗ ಹಾಗೂ ಪ್ರತಿದಿನ ಆತ ನಿರ್ವಹಿಸಬೇಕಾದ ಕೆಲಸಗಳ ಸ್ವರೂಪವನ್ನೂ ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಒಂದು ಕಾಲಿನಲ್ಲಿ ತರಕಾರಿ ವ್ಯಾಪಾರ ಸುಲಭವಲ್ಲ:
ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ರಸ್ತೆ ಅಪಘಾತದ ಪರಿಣಾಮ ಮೇಲ್ಮನವಿದಾರರ ಎಡಗಾಲನ್ನು ಮೊಣಕಾಲಿನಿಂದ ಕೆಳಗೆ ಕತ್ತರಿಸಲಾಗಿದೆ. ನ್ಯಾಯಮಂಡಳಿಯು ಇಡೀ ದೇಹಕ್ಕೆ ಸಂಬಂಧಿಸಿದಂತೆ ಅಂಗವೈಕಲ್ಯವನ್ನು ಶೇ. 25 ಎಂದು ಪರಿಗಣಿಸಿದೆ. ಆದರೆ, ತರಕಾರಿ ವ್ಯಾಪಾರಿಗಳು ತರಕಾರಿಗಳನ್ನು ಬೆಳೆಯುವ ಹಳ್ಳಿಗಳಿಗೆ ಅಥವಾ ಆ ನಿರ್ದಿಷ್ಟ ಪ್ರದೇಶದ ಸಗಟು ಮಾರುಕಟ್ಟೆಗಳಿಗೆ ತೆರಳಿ ತರಕಾರಿಗಳನ್ನು ತರಬೇಕು. ಅವುಗಳನ್ನು ವಿಂಗಡಿಸಿದ ನಂತರ ಮಾರಾಟ ಸ್ಥಳಕ್ಕೆ ಸಾಗಿಸಬೇಕು. ದಿನವಿಡೀ ನಿಂತು ಅಥವಾ ಕುಳಿತು ತರಕಾರಿ ಮಾರಾಟ ಮಾಡಬೇಕು. ಗ್ರಾಹಕರಿಗೆ ತರಕಾರಿಗಳನ್ನು ಅಳೆದುಕೊಡಬೇಕು, ಅವರಿಂದ ಹಣ ಸಂಗ್ರಹಿಸಬೇಕು. ದಿನದ ಕೊನೆಯಲ್ಲಿ ಉಳಿದ ಎಲ್ಲ ತರಕಾರಿಗಳನ್ನು ಮತ್ತೆ ಚೀಲದಲ್ಲಿ ತುಂಬಿ ಮರುದಿನದ ವ್ಯಾಪಾರಕ್ಕಾಗಿ ಅವುಗಳನ್ನು ಸಂರಕ್ಷಿಸಬೇಕು. ಇಷ್ಟೆಲ್ಲ ಕೆಲಸಗಳನ್ನು ಕೇವಲ ಒಂದು ಕಾಲಿನ ಸಹಾಯದಿಂದ ಮಾಡಲು ಕಷ್ಟಕರವಾಗಿರುತ್ತದೆ. ಆದ್ದರಿಂದ, ಮೇಲ್ಮನವಿದಾರರ ದೇಹದ ಅಂಗವೈಕಲ್ಯವನ್ನು ಶೇ. 40 ಎಂದು ಪರಿಗಣಿಸುವುದು ಸೂಕ್ತವೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಪಘಾತದಿಂದಾಗಿ ಮೇಲ್ಮನವಿದಾರರು ಒಂದು ಕಾಲನ್ನು ಕಳೆದುಕೊಂಡಿದ್ದಾರೆ. ಗಾಯ ವಾಸಿಯಾಗಲು, ಒಂದೇ ಕಾಲಿನೊಂದಿಗೆ ನಡೆದಾಡುವ ತರಬೇತಿ ಪಡೆಯಲು, ತಮ್ಮ ಸಾಮಾನ್ಯ ಕೆಲಸಗಳಿಗೆ ಹಾಜರಾಗಲು ಹಾಗೂ ಉದ್ಯೋಗ ಮುಂದುವರಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿದಾಗ ಮೇಲ್ಮನವಿದಾರರು ಕನಿಷ್ಠ 8 ತಿಂಗಳ ಅವಧಿಗೆ ಉದ್ಯೋಗದಲ್ಲಿ ಮುಂದುವರಿಯಲಾಗದೆ ಹಣ ಸಂಪಾದಿಸಲು ಸಾಧ್ಯವಾಗಿಲ್ಲ. ಈ ನಿಗದಿತ ಅವಧಿಯ ಗಳಿಕೆಯ ನಷ್ಟ 1,24,000 ರೂ. ಎಂದು ನ್ಯಾಯಾಲಯ ಅಂದಾಜಿಸಿದೆ.
ಪ್ರಕರಣದಲ್ಲಿ ಮೇಲ್ಮನವಿದಾರರು ಅನುಭವಿಸಿರುವ ನೋವು ಮತ್ತು ಯಾತನೆ, ಶಾಶ್ವತ ದೈಹಿಕ ಅಂಗವೈಕಲ್ಯದಿಂದ ಉಂಟಾಗಿರುವ ಭವಿಷ್ಯದ ಸಂಪಾದನೆಯ ನಷ್ಟ, ವೈದ್ಯಕೀಯ ವೆಚ್ಚ, ಚೇತರಿಕೆಗೆ ತೆಗೆದುಕೊಂಡ 8 ತಿಂಗಳ ಅವಧಿಯ ಗಳಿಕೆ ನಷ್ಟ, ಭವಿಷ್ಯದ ವೈದ್ಯಕೀಯ ವೆಚ್ಚ ಇನ್ನಿತರ ಅಂಶಗಳನ್ನು ಪರಿಗಣಿಸಿದರೆ ಮೇಲ್ಮನವಿದಾರರು 11,40,795 ರೂ. ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನ್ಯಾಯಮಂಡಳಿ ಘೋಷಿಸಿದ್ದ 5,98,300 ಪರಿಹಾರವನ್ನು ಹೆಚ್ಚಳ ಮಾಡಿ ಆದೇಶಿಸಿದೆ. ಜತೆಗೆ, ಹೆಚ್ಚುವರಿ ಪರಿಹಾರದ ಮೊತ್ತವನ್ನು 8 ವಾರಗಳ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದೆ.
ಪ್ರಕರಣವೇನು?
ತರಕಾರಿ ವ್ಯಾಪಾರಿ ಮುನಿಯಪ್ಪ 2022ರ ಮೇ 25ರಂದು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ಮುನಿಯಪ್ಪ ಎಡಗಾಲನ್ನು ಮಂಡಿಯ ಕೆಳಭಾಗದಿಂದ ಕತ್ತರಿಸಲಾಗಿತ್ತು. ಕಾಲು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ 50 ಲಕ್ಷ ರೂ. ಪರಿಹಾರ ಕೋರಿ ಮುನಿಯಪ್ಪ ಬೆಂಗಳೂರಿನ ಎಂಎಸಿಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ 5,98,300 ರೂ. ಪರಿಹಾರ ನೀಡಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಮುನಿಯಪ್ಪ, ತರಕಾರಿ ವ್ಯಾಪಾರಿಯಾಗಿದ್ದ ನಾನು ದಿನಕ್ಕೆ 2 ಸಾವಿರ ರೂ. ಸಂಪಾದಿಸುತ್ತಿದ್ದೆ. ಎಡಗಾಲನ್ನು ಕಳೆದುಕೊಂಡಿರುವ ನಾನು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗಿದ್ದೇನೆ. ನನ್ನ ಉದ್ಯೋಗ ಹಾಗೂ ಸಂಪಾದನೆಯನ್ನು ಗಣನೆಗೆ ತೆಗೆದುಕೊಳ್ಳದೆಯೇ ನ್ಯಾಯಮಂಡಳಿಯು ಕಾಲ್ಪನಿಕ ಆದಾಯವನ್ನು ತಿಂಗಳಿಗೆ 15 ಸಾವಿರ ರೂ. ಎಂದು ಪರಿಗಣಿಸಿ, ಅಲ್ಪ ಮೊತ್ತವನ್ನು ಪರಿಹಾರವಾಗಿ ನೀಡಿದೆ. ನ್ಯಾಯಮಂಡಳಿ ಘೋಷಿಸಿರುವ ಪರಿಹಾರ ಸಮರ್ಥನೀಯವಲ್ಲ. ಆದ್ದರಿಂದ, ಪರಿಹಾರದ ಮೊತ್ತ ಹೆಚ್ಚಳ ಮಾಡಬೇಕೆಂದು ಕೋರಿದ್ದರು.
Related Articles
Thank you for your comment. It is awaiting moderation.


Comments (0)