ಆರ್‌ಸಿ‌ಬಿ ಮಾರುಕಟ್ಟೆ ಮುಖ್ಯಸ್ಥ ನಿಖಿಲ್ ಸೋಸಲೆ ಮತ್ತಿತರ ಆರೋಪಿಗಳ ಮಧ್ಯಂತರ ಮನವಿಯ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತಮ್ಮನ್ನು ಕೂಡಲೇ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಆರ್‌ಸಿಬಿ ಮಾರುಕಟ್ಟೆ ವಿಭಾಗದ ನಿಖಿಲ್ ಸೋಸಲೆ ಸೇರಿ ನಾಲ್ವರು ಆರೋಪಿಗಳ ಮಧ್ಯಂತರ ಮನವಿ ಕುರಿತ ಆದೇಶವನ್ನು ಹೈಕೋರ್ಟ್ ಗುರುವಾರ ಮಧ್ಯಾಹ್ನ 2.30ಕ್ಕೆ ಪ್ರಕಟಿಸಲಿದೆ.

ಪ್ರಕರಣ ಸಂಬಂಧ ಕಬ್ಬನ್‌‌ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಆರ್‌ಸಿಬಿ ಮಾರುಕಟ್ಟೆ ವಿಭಾಗದ ನಿಖಿಲ್‌ ಸೋಸಲೆ, ಡಿಎನ್‌ಎ ಎಂಟರ್ಟೇನ್ಮೆಂಟ್‌ ನೆಟ್ವರ್ಕ್ಸ್‌ನ ನಿರ್ದೇಶಕ ಸುನೀಲ್‌ ಮ್ಯಾಥ್ಯೂ, ಮ್ಯಾನೇಜರ್‌ ಕಿರಣ್‌ ಕುಮಾರ್‌ ಮತ್ತು ಶಮಂತ್‌ ಮಾವಿನಕೆರೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಜತೆಗೆ, ತಮ್ಮ ಬಂಧನ ಕಾನೂನು ಬಾಹಿರವಾಗಿದ್ದು, ಕೂಡಲೇ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಿದ್ದಾರೆ.

ಅರ್ಜಿ ಕುರಿತು ಬುಧವಾರ ಸುದೀರ್ಘ ಎರಡೂವರೆ ತಾಸು ವಾದ ಆಲಿಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪಿಗಳ ಮಧ್ಯಂತರ ಮನವಿ ಕುರಿತ ವಿಚಾರಣೆ ಪೂರ್ಣಗೊಳಿಸಿತಲ್ಲದೆ, ಗುರುವಾರ ಮಧ್ಯಾಹ್ನ 2.30ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿತು.

ಆರ್‌ಸಿಬಿ/ಡಿಎನ್‌ಎ ಕಡೆಗೇ ಬೆರಳು ತೋರಿದ ಸರ್ಕಾರ:
ಇದಕ್ಕೂ ಮುನ್ನ ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿ, ಮೇ 29ರಂದೇ ಆರ್‌ಸಿಬಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ, ಜೂನ್ 3ರಂದು ಫೈನಲ್‌ ಪಂದ್ಯ ಆರಂಭವಾಗುವ ಒಂದು ಗಂಟೆ ಮೊದಲು ಆರ್‌ಸಿಬಿ ತಂಡ ಪ್ರಶಸ್ತಿ ಗೆದ್ದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಲಾಗುವುದು ಎಂದು ಆರ್‌ಸಿಬಿ ಹಾಗೂ ಡಿಎನ್‌ಎ ಸಂಸ್ಥೆಗಳು ಮಾಹಿತಿ ನೀಡಿವೆ. ಆದರೆ, ಅನುಮತಿ ಕೇಳಿರಲಿಲ್ಲ. ಸಂಪೂರ್ಣ ಕಾರ್ಯಕ್ರಮವೇ ಕಾನೂನುಬಾಹಿರ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಲ್ಲದೆ, ಜೂನ್ 4ರಂದು ಬೆಳಗ್ಗೆ 7.01ಕ್ಕೆ ಆರ್‌ಸಿಬಿ ಖಾತೆಯಿಂದ ಟ್ವೀಟ್ ಮಾಡಿ, ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯ ಯಾತ್ರೆ (Victory Parade) ನಡೆಲಾಗುವುದು ಎಂದು ಎಲ್ಲ ಅಭಿಮಾನಿಗಳಿಗೆ ಕರೆ ನೀಡಲಾಗಿದೆ. ನಿಯಮಗಳ ಪ್ರಕಾರ ಇಂತಹ ಕಾರ್ಯಕ್ರಮ ನಡೆಸಲು ಏಳು ದಿನ ಮುಂಚಿತವಾಗಿ ಅನುಮತಿ ಕೋರಬೇಕು. ಜೂನ್ 4ರಂದು ಕಾರ್ಯಕ್ರಮಕ್ಕೆ ಉಚಿತ ಪಾಸ್‌ ನೀಡಲಾಗುವುದು. ಅದನ್ನು ಡೌನ್ ಲೋಡ್ ಮಾಡುವಂತೆ ಬೆಳಗ್ಗೆ 8.55ಕ್ಕೆ ತಿಳಿಸಿದೆ. ಟಿಕೆಟ್ ಹಂಚಿಕೆ, ಗೇಟ್ ನಿರ್ವಹಣೆ ಎಲ್ಲ ಜವಾಬ್ದಾರಿ ಅವರದೇ ಆಗಿತ್ತು. ಆರ್‌ಸಿಬಿಯ ಟ್ವೀಟ್ ಗಳಿಂದ ಚಿನ್ನಸ್ವಾಮಿ ಗೇಟ್‌ಗಳ ಬಳಿ ಜನದಟ್ಟಣೆ ಉಂಟಾಗಿತ್ತು. 21 ಗೇಟ್‌ಗಳಲ್ಲಿ ಸೂಕ್ತ ರೀತಿಯ ನಿರ್ವಹಣೆ ಮಾಡದ ಕಾರಣ ಕಾಲ್ತುಳಿತ ಉಂಟಾಗಿ ಸಾವು-ನೋವು ಸಂಭವಿಸಿದೆ ಎಂದು ವಿವರಿಸಿದರು.

ಅಕ್ರಮ‌ ಬಂಧನವಲ್ಲ:
ಆರೋಪಿಗಳನ್ನು ಊಟ ಮಾಡುವಾಗ ಅಥವಾ ಮಲಗುವಾಗ ಬಂಧಿಸಿಲ್ಲ. ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಪಲಾಯನಗೈಯ್ಯಲು ಯತ್ನಿಸಿದಾಗ ಬಂಧಿಸಲಾಗಿದೆ. ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ನಿಖಿಲ್‌ ಸೋಸಲೆ ಅವರು ಜೂನ್‌ 5ರ ರಾತ್ರಿ 10.56ಕ್ಕೆ ವಿಮಾನದ ಟಿಕೆಟ್‌ ಕಾಯ್ದಿರಿಸಿದ್ದಾರೆ. ಬೆಳಗಿನ ಜಾವ 4.30ಕ್ಕೆ ವಿಮಾನ ನಿಲ್ದಾಣದಲ್ಲಿದ್ದಾಗ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಸ್ತುವಾರಿ ಡಿಸಿಪಿ ಅಕ್ಷಯ್‌ ಮಚೀಂದ್ರ ಸೂಚನೆ ಮೇರೆಗೆ ಸಿಸಿಬಿ ಪೊಲೀಸರು ಸೋಸಲೆಯನ್ನು ವಶಕ್ಕೆ ಪಡೆದು ಕಬ್ಬನ್‌‌ಪಾರ್ಕ್‌ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯ ಉಸ್ತುವಾರಿ ಇನ್‌ಸ್ಪೆಕ್ಟರ್‌ ರವಿ ಅವರು ಸೋಸಲೆಯನ್ನು ಬಂಧಿಸಿದ್ದಾರೆಯೇ ವಿನಃ ಸಿಸಿಬಿ ಅಧಿಕಾರಿಗಳಲ್ಲ. ಆದರೆ, ಈಗ ತನಿಖೆಯಲ್ಲಿ ದೋಷ ಹುಡುಕಲಾಗುತ್ತಿದೆ ಎಂದು ಆರೋಪಿಗಳ ಬಂಧನವನ್ನು ಸಮರ್ಥಿಸಿಕೊಂಡರು.

ಬಂಧಿತರೆಲ್ಲರಿಗೂ 10 ಗಂಟೆಯ ಒಳಗೆ ಬಂಧನ ಸೂಚನೆ, ಕಾರಣ, ಆಧಾರ ಸೇರಿ ಎಲ್ಲ ದಾಖಲೆಗಳನ್ನು ಒದಗಿಸುವ ಮೂಲಕ ಡಿ.ಕೆ. ಬಸು ಪ್ರಕರಣದಲ್ಲಿನ ನಿರ್ದೇಶನಗಳನ್ನು ಪಾಲಿಸಲಾಗಿದೆ. ಕಾಲ್ತುಳಿತ ಪ್ರಕರಣದ ತನಿಖೆಯನ್ನು ಜೂನ್ 5ರಂದು ಸಿಐಡಿಗೆ ವರ್ಗಾಯಿಸಲಾಗಿದೆ. ಆದರೆ, ಸಿಐಡಿ ತನಿಖೆ ಜವಾಬ್ದಾರಿ ತೆಗೆದುಕೊಂಡಿರುವುದು ಜೂನ್‌ 6ರಂದು. ಈ ನಡುವೆ, ಕಬ್ಬನ್‌‌ಪಾರ್ಕ್‌ ಪೊಲೀಸರು ಕಾನೂನಿನ ಅನ್ವಯ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧನದಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಆದ್ದರಿಂದ, ಆರೋಪಿಗಳನ್ನು ಬಿಡುಗಡೆ ಮಾಡಬಾರದು ಎಂದು ಕೋರಿದರು.

ಸಾಕ್ಷ್ಯ ನಾಶ, ಅಭಿಮಾನಿಗಳಿಗೆ ಉಚಿತ ಟಿಕೆಟ್‌ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದು, ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ, ಅಗ್ನಿಶಾಮಕ ದಳದ ವ್ಯವಸ್ಥೆ, ಬೆಳವಣಿಗೆಗಳ ಕುರಿತು ಜನರಿಗೆ ನಿರಂತರ ಮಾಹಿತಿ ಒದಗಿಸದಿರುವುದು ಸೇರಿ 12 ಕಾರಣಗಳ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಚಾರಕ್ಕಾಗಿ, ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಲು ಜನರ ಪ್ರಾಣಕ್ಕೆ ಕುತ್ತು ತಂದು, ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಲು ಆರೋಪಿಗಳು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ಈ ನಾಲ್ವರನ್ನೂ ಬಂಧಿಸಲಾಗಿದೆ ಎಂದು ವಿವರಿಸಿದರು.

ಸೋಸಲೆ ಪರ ವಕೀಲರ ಆಕ್ಷೇಪ:
ಸರ್ಕಾರದ ವಾದವನ್ನು ಆಕ್ಷೇಪಿಸಿದ ನಿಖಿಲ್ ಸೋಸಲೆ ಪರ ಹಿರಿಯ ವಕೀಲ ಸಂದೇಶ್ ಚೌಟ, ಸಿಎಂ ಸೂಚನೆ ಮೇರೆಗೆ ಅರ್ಜಿದಾರರನ್ನು ಬಂಧಿಸಿದ್ದಾರೆ. ಇದು ಕಾನೂನುಬಾಹಿರ. ಸಿಎಂ ಸೂಚಿಸಿಲ್ಲವೆಂದು ಅಡ್ವೊಕೆಟ್ ಜನರಲ್ ನಿರಾಕರಿಸಿಲ್ಲ. ಸೋಸಲೆ ಅವರನ್ನು ಬೆಳಗಿನ ಜಾವ 3.30ಕ್ಕೆ ವಶಕ್ಕೆ ಪಡೆಯಲಾಗಿದೆ. ಬಂಧಿಸುವಾಗಲೇ ಬಂಧನದ ಕಾರಣ ನೀಡಬೇಕು. ಮುಂಜಾನೆ 4.30ಕ್ಕೆ ಅಧಿಕೃತವಾಗಿ ಬಂಧಿಸಿದಾಗಲೂ ಕಾರಣ ನೀಡಿಲ್ಲ. ಬಂಧನದ ಮಾಹಿತಿ ನೀಡುವಾಗ ಹಾಗೂ ಅರೆಸ್ಟ್‌ ಮೆಮೋ ನೀಡುವಾಗ ಸಮಯ ಉಲ್ಲೇಖಿಸಿಲ್ಲ. ಆದ್ದರಿಂದ, ಬಂಧನವೇ ಕಾನೂನುಬಾಹಿರವೆಂದು ವಾದ ಮಂಡಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಅನುಮತಿ ಪಡೆದಿಲ್ಲ ಎಂದು ಆರೋಪಿಸಲಾಗುತ್ತಿದೆ. ಕಾರ್ಯಕ್ರಮದ ಬಗ್ಗೆ ಕೆಎಸ್‌ಸಿಎ ಮಾಹಿತಿ ನೀಡಿದಾಗ ಸರ್ಕಾರ ನಿರಾಕರಿಸಿಲ್ಲವೇಕೆ? ಪೊಲೀಸ್ ಆಯುಕ್ತರು, ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ, ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಕೈಬಿಟ್ಟಿದ್ದಾರೆ. ಆದರೆ, ಅವರಲ್ಲಿ ಯಾರನ್ನೂ ಪೊಲೀಸರು ಬಂಧಿಸಿಲ್ಲ. ಸಿಎಂ, ಡಿಸಿಎಂ ಕೂಡಾ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದಾರೆ. ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ಈ ವಾದವನ್ನು ಬಲವಾಗಿ ಆಕ್ಷೇಪಿಸಿದ ಅಡ್ವೋಕೇಟ್‌ ಜನರಲ್‌, ಸಿಎಂ ಹಾಗೂ ಡಿಸಿಎಂ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆ ಆಹ್ವಾನದ ಮೇರೆಗೆ ಅವರು ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು ಎಂದು ಸಮಜಾಯಿಷಿ ನೀಡಿದರು.

Related Articles

Comments (0)

Leave a Comment