ಮಾಧ್ಯಮಗಳ ವಿರುದ್ಧ‌ ಕ್ರಮಕ್ಕೆ ನಿರ್ದೇಶನ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯ ಹೊರಡಿಸಿರುವ ನಿರ್ಬಂಧಕಾದೇಶ ಉಲ್ಲಂಘಿಸುತ್ತಿರುವ ಮಾಧ್ಯಮಗಳ (ಚಾನಲ್) ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.

ನಟ ದರ್ಶನ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ಗುರುವಾರ (ಏಪ್ರಿಲ್ 9) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು.

ಅರ್ಜಿ ವಿಚಾರಣೆ ವೇಳೆ ಮಾಧ್ಯಮಗಳ ನಡವಳಿಕೆಯನ್ನು ಮೌಖಿಕವಾಗಿ ಖಂಡಿಸಿದ ನ್ಯಾಯಪೀಠ, ಪ್ರಕರಣದ ಟ್ರಯಲ್ (ವಿಚಾರಣೆ) ನಡೆಯುತ್ತಿದೆ. ಅವರು (ಮಾಧ್ಯಮಗಳು) ಅದನ್ನು ಮರುಸೃಷ್ಟಿಸುತ್ತಿರುವ ರೀತಿ ನೋಡಿ, ಪ್ರಕರಣ ವಿಚಾರಣಾ ಹಂತದಲ್ಲಿರುವಾಗ ಮಾಧ್ಯಮಗಳ ಇಂತಹ ವರ್ತನೆಯು ನ್ಯಾಯದಾನದ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಇದಕ್ಕೂ ಮುನ್ನ ದರ್ಶನ್ ಪರ ವಕೀಲರು ವಾದ ಮಂಡಿಸಿ, ಮಾಧ್ಯಮಗಳು ಪ್ರಕರಣ‌ ಕುರಿತು ಸುದೀರ್ಘವಾದ ದೈನಂದಿನ ಚರ್ಚೆಗಳನ್ನು ನಡೆಸುತ್ತವೆ. ನಿವೃತ್ತ ಪೊಲೀಸ್ ಅಧಿಕಾರಿಗಳು, ಹಿರಿಯ ವಕೀಲರನ್ನು ಚರ್ಚೆಗೆ ಕರೆಸಿ ಮಾಧ್ಯಮಗಳು ಅವರದ್ದೇ ಆದ ತನಿಖಾ ನಿರೂಪಣೆ ರೂಪಿಸುತ್ತಿವೆ ಎಂದು. ಟ್ರಯಲ್ ಸಂದರ್ಭದಲ್ಲಿ ಸಂತ್ರಸ್ತನ ಸಂಬಂಧಿಕರೊಬ್ಬರು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ 4 ಗಂಟೆಗಳ ಕಾಲ ವಿಶ್ಲೇಷಣೆ ನಡೆಸಲಾಯಿತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಕೇಂದ್ರ‌ದ ವಾದವೇನು?
ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅರವಿಂದ್ ಕಾಮತ್ ಅವರು, ದರ್ಶನ್ ಅವರ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಗೌಪ್ಯ ಮಾಹಿತಿಯನ್ನು ಪ್ರಕಟಿಸುವುದು, ಮುದ್ರಿಸುವುದು ಅಥವಾ ಪ್ರಸಾರ ಮಾಡುವುದರ ಮೇಲೆ ನಿರ್ಬಂಧ ಹೇರುವ ಕುರಿತು ಸಂಬಂಧಪಟ್ಟ ಸಚಿವಾಲಯ ಈಗಾಗಲೇ ಮಾಧ್ಯಮಗಳಿಗೆ ಸೂಚಿಸಿದೆ ಎಂದು ತಿಳಿಸಿದರಲ್ಲದೆ, ಮಾಧ್ಯಮಗಳ ಯಾವುದೇ ಕಾರ್ಯವು ನ್ಯಾಯದಾನ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ನ್ಯಾಯಾಲಯ ಭಾವಿಸಿದರೆ, ಅಗತ್ಯ ನಿರ್ದೇಶನಗಳನ್ನು ನೀಡಬಹುದು ಹಾಗೂ ಅದನ್ನು ಸರ್ಕಾರ ಪಾಲಿಸುತ್ತದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ತೆಗೆದುಹಾಕಲು ಯೂಟ್ಯೂಬ್ ಮತ್ತು ಮೆಟಾ ಸಂಸ್ಥೆಗೆ ಸೂಚಿಸಲು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಬಹುದು. ಒಂದು ವೇಳೆ ತೆಗೆದು ಹಾಕದಿದ್ದರೆ ಐಟಿ ಕಾಯ್ದೆಯ ಸೆಕ್ಷನ್ 79(3) ಅಡಿಯಲ್ಲಿನ ರಕ್ಷಣೆಯನ್ನು ಆ ಸಂಸ್ಥೆಗಳು ಕಳೆದುಕೊಳ್ಳುತ್ತವೆ ಎಂದು ಎಎಸ್‌ಜಿ ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

ಮುಂದುವರಿದು, ತಪ್ಪಿತಸ್ಥ ಮಾಧ್ಯಮಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ದರ್ಶನ್ ಅವರಿಗೆ ಯಾವುದೇ ಅಡ್ಡಿಯಿಲ್ಲ. ಟಿವಿ ಚಾನಲ್‌ಗಳಿಗಾಗಿ ನಮ್ಮಲ್ಲಿ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯ್ದೆ ಇದೆ. ಇದು ಅತ್ಯಂತ ಬಲವಾದ ಪರಿಹಾರವಾಗಿದೆ. ಆದರೆ, ಅರ್ಜಿದಾರರು ಅದನ್ನು ಬಳಸುತ್ತಿಲ್ಲ. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯ್ದೆಯಲ್ಲಿ ಮೂರು ಹಂತದ ವ್ಯವಸ್ಥೆ ಇದೆ. ಮೊದಲು ಉಲ್ಲಂಘನೆಗಾಗಿ ಆಯಾ ಚಾನಲ್‌ಗೆ ದೂರು ನೀಡಬೇಕು. ಎರಡನೆಯದಾಗಿ, ಸ್ವಯಂ-ನಿಯಂತ್ರಕ ಸಂಸ್ಥೆ ಇದೆ, ಮೂರನೇ ಹಂತದಲ್ಲಿ ಅಂತರ-ಇಲಾಖೆ ಸಮಿತಿ ಇದೆ. ಆದರೆ, ಅರ್ಜಿದಾರರು ಈ ಯಾವುದೇ ಶಾಸನಬದ್ಧ ಕಾರ್ಯವಿಧಾನಗಳನ್ನು ಬಳಸಿಕೊಂಡಿಲ್ಲ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತು.

ದರ್ಶನ್ ಅರ್ಜಿಯಲ್ಲೇ‌ನಿದೆ?
ಸುದ್ದಿವಾಹಿನಿಗಳು ಗ್ರಾಫಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅನಿಮೇಷನ್‌ಗಳನ್ನು ಬಳಸಿಕೊಂಡು ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಅಪರಾಧದ ದೃಶ್ಯವನ್ನು ಮರುಸೃಷ್ಟಿಸುತ್ತಿವೆ. ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ದಾಖಲಿಸಿದ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಚರ್ಚೆಗಳನ್ನು ನಡೆಸುತ್ತಿವೆ. ಇದು 2024ರಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಸಿಟಿ ಸಿವಿಲ್ ನ್ಯಾಯಾಲಯ ಹೊರಡಿಸಿರುವ ಪ್ರತಿಬಂಧಕಾದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಸುದ್ದಿವಾಹಿನಿಗಳು ಉದ್ದೇಶಪೂರ್ವಕವಾಗಿ ವಿಚಾರಣೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡುತ್ತಿವೆ. ಇದು ಸಂವಿಧಾನದ ಪರಿಚ್ಛೇದ 14 ಹಾಗೂ 21ರ ಅಡಿಯಲ್ಲಿ ಖಾತ್ರಿಪಡಿಸಲಾದ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ, ಈ ಸಂಬಂಧ 2026ರ ಜನವರಿ 16ರಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೀಡಿದ ದೂರು ಪರಿಗಣಿಸಬೇಕು ಹಾಗೂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ನಟ ದರ್ಶನ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Related Articles

Comments (0)

Leave a Comment