ಡಾ. ಎಚ್.ಸಿ. ಸತ್ಯನ್‌ಗೆ ನಾಡೋಜ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್‌

ಬೆಂಗಳೂರು: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಪ್ರಭಾರ ಮುಖ್ಯ ಮಾಹಿತಿ ಆಯುಕ್ತರಾಗಿದ್ದು ಸದ್ಯ ನಿವೃತ್ತಿ ಹೊಂದಿರುವ ಡಾ.‌ ಎಚ್.ಸಿ‌. ಸತ್ಯನ್ ಅವರಿಗೆ ಹಂಪಿ‌ ಕನ್ನಡ ವಿಶ್ವವಿದ್ಯಾಲಯ ‘ನಾಡೋಜ’ ಪದವಿ ಪ್ರದಾ‌ನ ಮಾಡಿರುವುದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ ಸಂಸ್ಥೆಯ ಅಧ್ಯಕ್ಷ ಎಸ್. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಸತ್ಯನ್‌ ಅವರ ಮೇಲೆ ಭ್ರಷ್ಟಾಚಾರದ ಆರೋಪವಿದೆ ಎಂಬ ಅರ್ಜಿದಾರರ ಪರ ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಭ್ರಷ್ಟಾಚಾರ ಸಾಬೀತಾಗಿದೆಯಾ? ಇಲ್ಲವೆಂದಾದರೆ ಸುಮ್ಮನೆ ಆರೋಪ ಮಾಡಬೇಡಿ. ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಬೇಕಾಗುತ್ತದೆ. ನೀವು (ಅರ್ಜಿದಾರ) ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತು.

ಮುಂದುವರಿದು, ಯಾರಿಗೆ ಯಾವ ಪದವಿ ಕೊಡಬೇಕು ಎಂಬ ಬಗ್ಗೆ ನಿರ್ಧರಿಸಲು ವಿಶ್ವವಿದ್ಯಾಲಯ ಸ್ವತಂತ್ರವಾಗಿದೆ. ಇಂತಹ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಮೇಲಾಗಿ ಈ ಪ್ರಕರಣದಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳು, ಸಾಂವಿಧಾ‌ನಿಕ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ. ಇಂತಹ ಅರ್ಜಿಗಳ ಸಲ್ಲಿಕೆಯು ನ್ಯಾಯಾಲಯದ ಅತ್ಯಮೂಲ್ಯ ಸಮಯ ವ್ಯರ್ಥ ಮಾಡುವುದು ಬಿಟ್ಟರೆ ಮತ್ತೇನೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಅರ್ಜಿ ವಜಾಗೊಳಿಸಿತು.

ರಾಜ್ಯಪಾಲರು 2026ರ ಫೆಬ್ರವರಿ 24ರಂದು ಹಂಪಿ ‌ಕನ್ನಡ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಡಾ. ಎಚ್.ಸಿ. ಸತ್ಯನ್ ಅವರಿಗೆ ‘ನಾಡೋಜ’ ಪದವಿ ಪ್ರದಾ‌ನ ಮಾಡಿದ್ದರು.

Related Articles

Comments (0)

Leave a Comment