ಸಿಎಂ, ಡಿಸಿಎಂ ಸೇರಿ 51 ಜನರ ವಜಾ ಕೋರಿದ್ದ ಅರ್ಜಿ ತಿರಸ್ಕೃತ; ಅರ್ಜಿದಾರರಿಗೆ ದಂಡದ ಎಚ್ಚರಿಕೆ ನೀಡಿದ ಹೈಕೋರ್ಟ್
- by Jagan Ramesh
- February 2, 2026
- 9 Views
ಬೆಂಗಳೂರು: ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿರುವ ಆಧಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ 51 ಜನರನ್ನು ಅವರ ಹುದ್ದೆಗಳಿಂದ ವಜಾಗೊಳಿಸಿ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನೇಲೋಗಿಯ ‘ಭ್ರಷ್ಟಾಚಾರ ವಿರೋಧ ಪಕ್ಷ’ದ ರಾಷ್ಟ್ರೀಯ ಅಧ್ಯಕ್ಷ ಕಲ್ಲಾಲಿಂಗ ಈ. ಹೂಗಾರ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಅರ್ಜಿಯು ವಿಚಾರಣಾ ಅರ್ಹತೆ (ಮೆರಿಟ್) ಹೊಂದಿಲ್ಲದಿರುವ ಕಾರಣ ವಜಾಗೊಳಿಸಲಾಗುತ್ತಿದೆ. ಅರ್ಜಿದಾರರಿಗೆ 10 ಲಕ್ಷ ರೂ. ದಂಡ ವಿಧಿಸಬೇಕಿತ್ತು. ಆದರೆ, ಅರ್ಜಿದಾರರು ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ)ನಿಂದ ವಜಾಗೊಂಡ ನೌಕರರಾಗಿದ್ದಾರೆ. ಆದ ಕಾರಣ ದಂಡ ವಿಧಿಸದೇ ಸುಮ್ಮನೇ ಬಿಡುತ್ತಿರುವುದಾಗಿ ಹೇಳಿತು.
ಅರ್ಜಿದಾರರ ಮನವಿ:
ಚುನಾವಣಾ ಆಯೋಗವನ್ನು ದುರುಪಯೋಗಪಡಿಸುಕೊಳ್ಳುವ ಮೂಲಕ ಸಂವಿಧಾನ ಅವಮಾನಿಸಿರುವ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್ ಸಿಂಗ್, ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಕೆಪಿಟಿಸಿಎಲ್ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೂ ಸೇರಿ ಒಟ್ಟು 51 ಜನರನ್ನು ಅವರ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಬೇಕು. ಅವರ ವಿರುದ್ಧ ಸಿಬಿಐ, ಎನ್ಐಎ, ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಯಿಂದ ತುರ್ತು ತನಿಖೆಗೆ ನಿರ್ದೇಶಿಸಬೇಕು. ಇವರು ಪಡೆಯುತ್ತಿರುವ ಸಂಬಳ, ಪಿಂಚಣಿ ಇತ್ಯಾದಿಗಳನ್ನು ಕ್ರಿಮಿನಲ್ ಅಪರಾಧ ಕೃತ್ಯವೆಂದು ಪರಿಗಣಿಸಿ, ಕಾನೂನು ಕ್ರಮಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
Related Articles
Thank you for your comment. It is awaiting moderation.


Comments (0)