ಮ್ಯಾಜಿಸ್ಟ್ರೇಟ್ ಮುಂದೆ ಹಾಜರಿಗೆ 25 ನಿಮಿಷ ವಿಳಂಬ; ಕೊಲೆ ಆರೋಪಿಯ ಜಾಮೀನು ಮನವಿ ನಿರಾಕರಿಸಿದ ಹೈಕೋರ್ಟ್

ಬೆಂಗಳೂರು: ಬಂಧನಕ್ಕೊಳಪಟ್ಟು 24 ಗಂಟೆಗಳು ಕಳೆದ ಬಳಿಕ 25 ನಿಮಿಷಗಳಷ್ಟು ತಡವಾಗಿ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸುವ ಮೂಲಕ ಪೊಲೀಸರು ಕಾನೂನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ಕೋರಿ ಕೊಲೆ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಶಿವಮೊಗ್ಗದ ಎಸ್‌. ಶಿವರಾಜ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರನ ಮನವಿಯನ್ನು ತಳ್ಳಿಹಾಕಿದ್ದು, ಕೆಲ ಸಂದರ್ಭಗಳಲ್ಲಿ ಕಡ್ಡಾಯ ಸಮಯದೊಳಗೆ ಆರೋಪಿಯನ್ನು ಹಾಜರುಪಡಿಸದೇ ಇರುವುದು ವಿಚಾರಣೆಯನ್ನೇನೂ ಹಾಳು ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಆರೋಪಿಯ ಪರ ವಕೀಲರು, ಅರ್ಜಿದಾರರನ್ನು ಪೊಲೀಸರು ಮ್ಯಾಜಿಸ್ಟ್ರೇಟ್‌ ಮನೆಗೆ ನಿಗದಿತ ಸಮಯಕ್ಕಿಂತ‌ 25 ನಿಮಿಷಗಳಷ್ಟು ತಡ ಮಾಡಿ ಕರೆದೊಯ್ದು ಹಾಜರುಪಡಿಸಿದ್ದಾರೆ. ಇದು ಬಂಧಿಸಲಾದ ವ್ಯಕ್ತಿಯನ್ನು ಇಪ್ಪತ್ತನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿಡಬಾರದು ಎಂಬ ಸಾಂವಿಧಾನಿಕವಾದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಆದ್ದರಿಂದ, ಅರ್ಜಿದಾರರನ್ನು ನಿಯಮಿತ ಜಾಮೀನಿನ (Regular Bail) ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿದ್ದರು.

ಅರ್ಜಿದಾರನ ಮನವಿಯನ್ನು ಆಕ್ಷೇಪಿಸಿದ್ದ ರಾಜ್ಯ ಹೆಚ್ಚುವರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಪ್ರಯಾಣದ ವಿಳಂಬ ಹೊರತುಪಡಿಸಿ ಅರ್ಜಿದಾರರನ್ನು ಕಾನೂನುಬಾಹಿರವಾಗಿ ಬಂಧನದಲ್ಲಿ ಇರಿಸಿಕೊಂಡಿಲ್ಲ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಪ್ರಾಸಿಕ್ಯೂಷನ್‌ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ಪೊಲೀಸರು ಆರೋಪಿಯನ್ನು ಪಂಚನಾಮೆ ಪ್ರಕ್ರಿಯೆ ಪೂರೈಸಿದ ನಂತರ ಮ್ಯಾಜಿಸ್ಟ್ರೇಟ್‌ ಮನೆಗೆ ಕರೆದೊಯ್ಯುವಾಗ ಆಗುವ ಪ್ರಯಾಣದ ಸಮಯದಲ್ಲಿ ಒಂದಷ್ಟು ಏರುಪೇರಾದರೂ ಅದನ್ನು ಮಾನ್ಯ ಮಾಡಬಹುದು. ಬಾಂಬೆ, ಮಧ್ಯಪ್ರದೇಶ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ತೀರ್ಪುಗಳು ಈ ಅಂಶವನ್ನು ಈಗಾಗಲೇ ಸ್ಪಷ್ಟಪಡಿಸಿವೆ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು?
ಪ್ರಕರಣದ ದಾಖಲೆಗಳ ಪ್ರಕಾರ, ಚಿಕ್ಕಮಗಳೂರಿನ ಎನ್‌.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಮಲ ಎಂಬುವರು ತಮ್ಮ ಪತಿಯನ್ನು ಕೊಲೆ ಮಾಡಲು ಆರೋಪಿ ಶಿವರಾಜ್‌ಗೆ ಸುಪಾರಿ ನೀಡಿದ್ದರು. ಇದರ ಅನುಸಾರ ಆರೋಪಿಯು ಕಮಲ ಅವರ ಪತಿ ಸುದರ್ಶನ್‌ ಅವರನ್ನು 2025 ಮೇ 23ರ ರಾತ್ರಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ. ಬಳಿಕ ಶಿವಮೊಗ್ಗದ ಕಾಚಿನಕಟ್ಟೆ ಬಸ್‌ ನಿಲ್ದಾಣದಲ್ಲಿ 2025ರ ಮೇ 25ರಂದು ಸಂಜೆ 5 ಗಂಟೆಗೆ ಆರೋಪಿಯನ್ನು ಬಂಧಿಸಲಾಗಿತ್ತು. ಪಂಚನಾಮೆ ಪ್ರಕ್ರಿಯೆ ನಡೆಸಿದ ನಂತರ ಮರುದಿನ ಸಂಜೆ 5.25ಕ್ಕೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು.

ಅರ್ಜಿದಾರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿ ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಮಧ್ಯೆ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಚಿಕ್ಕಮಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ಆರೋಪಿ 25 ನಿಮಿಷಗಳ ವಿಳಂಬ ಕಾರಣ ಮುಂದಿಟ್ಟುಕೊಂಡು ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

Related Articles

Comments (0)

Leave a Comment