ಪವಿತ್ರಾ ಗೌಡ ಸೇರಿ ಮೂವರು ಆರೋಪಿಗಳಿಗೆ ಮನೆ ಊಟ; ಸೆಷನ್ಸ್ ಕೋರ್ಟ್ ಆದೇಶ ರದ್ದುಪಡಿಸಿದ ಹೈಕೋರ್ಟ್‌

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ, ನಾಗರಾಜ್‌ ಮತ್ತು ಲಕ್ಷ್ಮಣ್‌ಗೆ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದ ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಇದೇ ವೇಳೆ, ​ಮಾನವ ಘನತೆಯ ರಕ್ಷಣೆಯು ಕಾರಾಗೃಹದ ಬಾಗಿಲುಗಳ ಬಳಿ ಕೊನೆಗೊಳ್ಳುವುದಿಲ್ಲ. ಕಾನೂನಿನ ಅನ್ವಯ ಕೈದಿಗಳು ಸ್ವಾತಂತ್ರ್ಯದಿಂದ ವಂಚಿತರಾಗಿದ್ದರೂ, ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿರುವ ನ್ಯಾಯಾಲಯ, ಕೈದಿಗಳಿಗೆ ಆಹಾರ ಒದಗಿಸುವ ವಿಚಾರವಾಗಿ ಸರ್ಕಾರಕ್ಕೆ ಕೆಲ‌ ನಿರ್ದೇಶನಗಳನ್ನು ನೀಡಿದೆ.

ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಜನವರಿ 12ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಪ್ರಕರಣದ ತನಿಖಾಧಿಕಾರಿಗಳಾದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?
ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ನೀಡಲು ನಿಷೇಧವಿಲ್ಲ. ಆದರೆ, ಜೈಲು ನಿಯಮಗಳು ಮತ್ತು ಪ್ರಕ್ರಿಯೆ ಅನುಸಾರ ಮನೆ ಊಟ ಪೂರೈಸಬಹುದಾಗಿದ್ದು, ಇದಕ್ಕೆ ವೈದ್ಯಕೀಯ ವರದಿ ಅತ್ಯಗತ್ಯ. ಕೇವಲ ಮನವಿ ಆಧರಿಸಿ ಆರೋಪಿಗಳು/ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ತರಿಸಿಕೊಳ್ಳಲು ಅನುಮತಿಸಲಾಗದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿದೆ.

ವೈದ್ಯಕೀಯ ಪರಿಶೀಲನೆ ಅಥವಾ ಶಿಫಾರಸು ಆಧರಿಸದೆಯೇ ಪ್ರತಿವಾದಿ ಆರೋಪಿಗಳಿಗೆ ಮನೆ ಊಟ ಪಡೆಯಲು ಅನುಮತಿಸಿರುವುದರಿಂದ ವಿಚಾರಣಾ ನ್ಯಾಯಾಲಯದ ಆದೇಶ ಉಳಿಯುವುದಿಲ್ಲ. ತಾರತಮ್ಯದಿಂದ ಕೂಡಿದ ಇಂಥ ವಿನಾಯಿತಿ ನೀಡುವುದರಿಂದ ಜೈಲು ನಿರ್ವಹಣೆಯಲ್ಲಿ ಗೊಂದಲಕ್ಕೆ ನಾಂದಿಯಾಗಲಿದ್ದು, ಇತರ ಕೈದಿಗಳೂ ಇದೇ ರೀತಿಯ ವಿನಾಯಿತಿಗೆ ಅರ್ಹರಾಗುತ್ತಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಜೈಲಿನಲ್ಲಿ ವಿತರಿಸಲಾಗುವ ಊಟದ ಲಭ್ಯತೆ ಮತ್ತು ಗುಣಮಟ್ಟವು ಕಾಳಜಿಯ ವಿಚಾರವಾಗಿದ್ದು, ಪ್ರತಿನಿತ್ಯ ನಾಲ್ಕು ಊಟಕ್ಕೆ 125 ರೂಪಾಯಿ ನಿಗದಿಪಡಿಸಿರುವುದು ಪೌಷ್ಠಿಕಾಂಶಯುಕ್ತ ಆಹಾರದ ಬಗೆಗಿನ ಮಹತ್ವದ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿದೆ. ಕೈದಿಗಳ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕಾಣುವಂತೆ ಕೈದಿಗಳ ಆಹಾರದ ಪಟ್ಟಿಯನ್ನು ಡಿಜಿಟಲ್‌ ರೂಪದಲ್ಲಿ ಪ್ರಕಟಿಸಬೇಕು. ಆಹಾರದ ಬಗ್ಗೆ ಅಹವಾಲು/ದೂರು ದಾಖಲಿಸಲು ವ್ಯವಸ್ಥೆ ಇಲ್ಲದಿದ್ದರೆ ಅದನ್ನು ಜಾರಿಗೊಳಿಸಬೇಕು. ಕೈದಿಗಳಿಗೆ ತಯಾರಿಸುವ ಆಹಾರದ ಗುಣಮಟ್ಟದ ಕುರಿತು ಮೇಲಿಂದ ಮೇಲೆ ನಿಗದಿತ ವೈದ್ಯಾಧಿಕಾರಿಯು ದಾಖಲೆ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ನ್ಯಾಯಾಲಯದ ಈ ನಿರ್ದೇಶನಗಳ ಅನುಪಾಲನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಬೇಕು. ಇನ್ನು ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಲಾಗಿದ್ದರೂ, ಪ್ರತಿವಾದಿಗಳು ಪೂರಕ ವೈದ್ಯಕೀಯ ದಾಖಲೆಗಳೊಂದಿಗೆ ಜೈಲು ನಿಯಮಗಳ ಅನ್ವಯ ಮನೆ ಊಟ ಪೂರೈಕೆಗೆ ಮನವಿ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದೇ ವೇಳೆ, ಪವಿತ್ರಾ ಗೌಡ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದೂ ನ್ಯಾಯಪೀಠ ತಿಳಿಸಿದೆ.

Related Articles

Comments (0)

Leave a Comment