ಸ್ಮಾರ್ಟ್‌ ಮೀಟರ್‌ ಟೆಂಡರ್‌ ಅಕ್ರಮ; ಸಚಿವ ಕೆ.ಜೆ. ಜಾರ್ಜ್, ಬೆಸ್ಕಾಂ ಅಧಿಕಾರಿಗಳ ವಿರುದ್ಧದ ಖಾಸಗಿ ದೂರು ರದ್ದು

ಬೆಂಗಳೂರು: ರಾಜ್ಯದಲ್ಲಿ ಸ್ಮಾರ್ಟ್ ವಿದ್ಯುತ್ ಮೀಟರ್‌ಗಳ ಖರೀದಿ ಮತ್ತು ಅಳವಡಿಕೆ ಟೆಂಡರ್‌ನಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಬಿಜೆಪಿ ನಾಯಕರು ದಾಖಲಿಸಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

ಇದರಿಂದ, ಸಾವಿರಾರು ಕೋಟಿ ರೂ. ಅಕ್ರಮದ ಆರೋಪ ಹೊರಿಸಿ ಖಾಸಗಿ ದೂರು ದಾಖಲಿಸಿದ್ದ ಬಿಜೆಪಿ ಮುಖಂಡರಾದ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಎಸ್‌.ಆರ್‌. ವಿಶ್ವನಾಥ್ ಮತ್ತು ಧೀರಜ್‌ ಮುನಿರಾಜು ಅವರಿಗೆ ಹಿನ್ನಡೆಯಾಗಿದೆ.

ಬಿಜೆಪಿ ಮುಖಂಡರು ದಾಖಲಿಸಿದ್ದ ಖಾಸಗಿ ದೂರು ರದ್ದು ಕೋರಿ ಹಾಗೂ ಆ ದೂರು ದಾಖಲಿಸಿಕೊಂಡು, ಟೆಂಡರ್ ಅಕ್ರಮಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಸಚಿವ ಕೆ.ಜೆ ಜಾರ್ಜ್‌ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ, ತಾಂತ್ರಿಕ ವಿಭಾಗದ ನಿರ್ದೇಶಕ ಎಚ್‌.ಜೆ. ರಮೇಶ್‌ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಗಳ ಕುರಿತು ನವೆಂಬರ್ 5ರಂದು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿತು. ಕ್ರಿಮಿನಲ್‌ ಅರ್ಜಿಗಳನ್ನು ಪುರಸ್ಕರಿಸಲಾಗಿದ್ದು, ಖಾಸಗಿ ದೂರಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಖಾಸಗಿ ದೂರಿನಲ್ಲಿ 3ನೇ ಆರೋಪಿಯಾಗಿರುವ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಅವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣ ಕೈಬಿಡಲಾಗಿದೆ ಎಂದು ನ್ಯಾಯಾಲಯ ಆದೇಶಿಸಿತು.

ಹೈಕೋರ್ಟ್ ಆದೇಶದಲ್ಲೇನಿದೆ?
ಟೆಂಡರ್‌ ಪ್ರಕ್ರಿಯೆಲ್ಲಿ ಭಾಗವಹಿಸಲು ಹಲವಾರು ಜನ ಅರ್ಹರಾಗಿದ್ದರು. ಯಾರನ್ನು ಸಹ ಕಾನೂನುಬಾಹಿರವಾಗಿ ಅನರ್ಹಗೊಳಿಸಲಾಗಿದೆ ಎಂದು ಹೇಳಲಾಗಿಲ್ಲ. ಗುತ್ತಿಗೆಗೆ ಮೂವರು ಬಿಡ್ಡರ್‌ಗಳಿದ್ದರು. ಟೆಂಡರ್‌ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡಲಾಗಿದೆ. ಈ ವಿಷಯದಲ್ಲಿ ಯಶಸ್ವಿ ಬಿಡ್‌ದಾರರಿಗೆ ಯಾವುದೇ ನೆರವು/ಕೃಪೆ ತೋರಿಸಲಾಗಿಲ್ಲ. ಹೀಗಿದ್ದರೂ, ಎಲ್ಲ ಅರ್ಹ ವ್ಯಕ್ತಿಗಳು ಬಿಡ್ ಆಹ್ವಾನಿಸಿದಾಗ ಮತ್ತು ಭಾಗವಹಿಸಿದ ವ್ಯಕ್ತಿಗಳಲ್ಲಿ ಯಶಸ್ವಿ ಬಿಡ್ದಾರರ ಪರವಾಗಿ ಟೆಂಡರ್ ನೀಡಲಾಗಿದೆ. ಇದರಿಂದ, ಗುತ್ತಿಗೆ ನೀಡಿದ ಆರೋಪಿಗಳ ಮೇಲೆ ಯಾವುದೇ ಅಪರಾಧವನ್ನು ಹೊರಿಸಲಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಟೆಂಡರ್ ದಾಖಲೆಯ ನಿಯಮಗಳು ಮತ್ತು ಷರತ್ತುಗಳನ್ನು ಅಂತಿಮಗೊಳಿಸಿದ ನಂತರ, ಯಶಸ್ವಿ ಬಿಡ್‌ದಾರರಿಗೆ ಗುತ್ತಿಗೆ ನೀಡಿದ ನಂತರ ಯಶಸ್ವಿ ಬಿಡ್‌ದಾರರಿಗೆ ಅನುಕೂಲವಾಗುವಂತೆ ಟೆಂಡರ್ ದಾಖಲೆಯ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸಲಾಗಿದೆ ಅಥವಾ ಉಲ್ಲಂಘಿಸಲಾಗಿದೆ ಎಂದು ದೂರುದಾರರು ಹೇಳುತ್ತಿದ್ದಾರೆ. ಒಂದೊಮ್ಮೆ ಯಶಸ್ವಿ ಬಿಡ್‌ದಾರರೊಂದಿಗೆ ಬೆಸ್ಕಾಂಗೆ ಹೆಚ್ಚು ಅನುಕೂಲಕರವಾಗುವ ರೀತಿಯಲ್ಲಿ ನಿಯಮಗಳಿಗೆ ನಡೆದುಕೊಂಡಿದೆ ಎಂದಾದರೆ, ಆ ಕುರಿತು ಕೆಟಿಪಿಪಿ ಕಾಯ್ದೆಯ ಉಲ್ಲಂಘನೆ ಎಂದು ಪ್ರಶ್ನಿಸಬಹುದು. ಅದನ್ನು ಹೊರತುಪಡಿಸಿ ಆರೋಪಿಯ ಮೇಲೆ ಯಾವುದೇ ಅಪರಾಧ ಹೊರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಯಶಸ್ವಿ ಬಿಡ್‌ದಾರರಿಗೆ ಟೆಂಡರ್ ನೀಡಿದ ನಂತರ, ಕೆಲವೊಂದು ಮಾತುಕತೆಗಳನ್ನು ನಡೆಸಲಾಗಿದೆ. ಅದು ಬಿಟ್ಟು ಯಶಸ್ವಿ ಬಿಡ್‌ದಾರರಿಗೆ ಯಾವುದೇ ಹೆಚ್ಚುವರಿ ಪ್ರಯೋಜನವನ್ನು ನೀಡಲಾಗಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಅಥವಾ ವ್ಯವಹಾರ ವಹಿವಾಟಿನ ಸ್ವಾಭಾವಿಕ ಪರಿಣಾಮವಾಗಿ ಬದಲಾವಣೆಗಳು ನಡೆದಿರುತ್ತವೆ. ಅದಕ್ಕಾಗಿ ಆರೋಪಿಗಳಿಗೆ ಯಾವುದೇ ಅಪರಾಧವನ್ನು ಆರೋಪಿಸಲು ಸಾಧ್ಯವಿಲ್ಲ. ವಿಚಾರಣಾ ನ್ಯಾಯಾಲಯವು ಗುತ್ತಿಗೆಯಲ್ಲಿನ ಆರೋಪಗಳ ಬಗ್ಗೆ ವಿವೇಚನೆ ಬಳಸದೆ, ಲೋಕಾಯುಕ್ತದಿಂದ ವರದಿಯನ್ನು ಕೇಳಿರುವುದು ಸಂಪೂರ್ಣ ತಪ್ಪು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಪ್ರಕರಣವೇನು?
ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ ಕಾನೂನುಬಾಹಿರವಾಗಿದೆ ಮತ್ತು ಈ ಟೆಂಡರ್‌ ನೀಡಿಕೆಯಿಂದ ಅಂದಾಜು 16 ಸಾವಿರ ಕೋಟಿ ರೂ. ಮೊತ್ತದ ದುರ್ಲಾಭ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರಾದ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಎಸ್‌.ಆರ್‌. ವಿಶ್ವನಾಥ್ ಮತ್ತು ಧೀರಜ್‌ ಮುನಿರಾಜು ಅವರು ವಿಚಾರಣಾಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಸ್ಮಾರ್ಟ್‌ ಮೀಟರ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 26ರಂದು ಟೆಂಡರ್‌ ಕರೆಯಲಾಗಿತ್ತು. ಬಿಡ್‌ದಾರರಾದ ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಎಂಬ ಶೆಲ್‌ ಕಂಪನಿಗೆ ಟೆಂಡರ್‌ ನೀಡಲಾಗಿದೆ ಎಂದು ಖಾಸಗಿ ದೂರಿನಲ್ಲಿ ಆರೋಪಿಸಲಾಗಿದ್ದು, ಈ ಟೆಂಡರ್‌ ಅನ್ನು ರಾಜ್ಯದಲ್ಲಿ ವಿವಿಧ ಭಾಗಗಳ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಪ್ರತ್ಯೇಕ ಟೆಂಡರ್‌ ಕರೆಯದೆ ಬೆಸ್ಕಾಂ ಕಂಪನಿ ಮೂಲಕವೇ ನೇರವಾಗಿ ಟೆಂಡರ್‌ ನೀಡಲಾಗಿದೆ. ಇದರಿಂದ, ಅಂದಾಜು 16 ಸಾವಿರ ಕೋಟಿ ರೂ. ಮೊತ್ತವನ್ನು ಪಡೆಯುವ ಅಕ್ರಮ ನಡೆದಿದೆ. ಕಾನೂನು ಬಾಹಿರವಾದ ಈ ಪ್ರಕ್ರಿಯೆ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅಧಿನಿಯಮ-2000 ಹಾಗೂ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿತ್ತು.

ಇಂಧನ ಸಚಿವ ಕೆ.ಜೆ. ಜಾರ್ಜ್‌, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಎಚ್‌.ಜೆ. ರಮೇಶ್‌ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಇದನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ, ಖಾಸಗಿ ದೂರು ದಾಖಲಿಸಿಕೊಂಡು, ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ವರದಿ ನೀಡಲು ಆದೇಶಿಸಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Articles

Comments (0)

Leave a Comment