ಚುನಾವಣೆ ಟಿಕೆಟ್ ಆಮಿಷವೊಡ್ಡಿ 2 ಕೋಟಿ ರೂ. ಪಡೆದು ವಂಚಿಸಿದ ಆರೋಪ; ಗೋಪಾಲ ಜೋಶಿ ಸೇರಿ ಮೂವರ ವಿರುದ್ಧದ ಪ್ರಕರಣ ರದ್ದು
- by Jagan Ramesh
- March 13, 2026
- 9 Views
ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಮಾಜಿ ಶಾಸಕ ದೇವಾನಂದ ಚವ್ಹಾಣ್ ಅವರಿಂದ 2 ಕೋಟಿ ರೂ. ಪಡೆದು ವಂಚಿಸಿದ ಆರೋಪದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಮತ್ತಿತರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ವಿಜಯಪುರದ ಮಾಜಿ ಶಾಸಕ ದೇವಾನಂದ ಚವ್ಹಾಣ್ ಪತ್ನಿ ಸುನೀತಾ ಚವ್ಹಾಣ್ ನೀಡಿದ ದೂರು ಆಧರಿಸಿ ದಾಖಲಾಗಿರುವ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಆರೋಪಿಗಳಾದ ಗೋಪಾಲ್ ಜೋಶಿ, ಪತ್ನಿ ವಿಜಯಲಕ್ಷ್ಮೀ ಜೋಶಿ ಹಾಗೂ ಪುತ್ರ ಅಜಯ್ ಜೋಶಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದ ವಿಚಾರಣೆಯನ್ನು ಮಾರ್ಚ್ 3ರಂದು ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು. ತೀರ್ಪಿನ ಸಾರಾಂಶವನ್ನು ಮುಕ್ತ ನ್ಯಾಯಾಲಯದಲ್ಲಿ ಓದಿದ ನ್ಯಾಯಮೂರ್ತಿಗಳು, ಅರ್ಜಿ ಪುರಸ್ಕರಿಸಲಾಗಿದೆ. ಅರ್ಜಿದಾರರ ವಿರುದ್ಧದ ಅಪರಾಧ ಪ್ರಕರಣವನ್ನು ವಜಾಗೊಳಿಸಲಾಗಿದೆ. ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವು ಹಾಲಿ ಪ್ರಕರಣಕ್ಕೆ ಮಾತ್ರ ಸಂಬಂಧಿಸಿದ್ದು, ಉಭಯ ಪಕ್ಷಕಾರರ ನಡುವೆ ಬಾಕಿ ಇರುವ ಪ್ರಕರಣಗಳ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣದ ಹಿನ್ನೆಲೆ:
ಗೋಪಾಲ ಜೋಶಿ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ದೇವಾನಂದ ಚವ್ಹಾಣ್ ಅವರಿಂದ 2 ಕೋಟಿ ರೂ. ಪಡೆದು ವಂಚನೆ ಎಸಗಿದ್ದಾರೆಂದು ಆರೋಪಿಸಿ ದೇವಾನಂದ ಪತ್ನಿ ಸುನೀತಾ ಚವ್ಹಾಣ್ ನೀಡಿದ್ದ ದೂರು ಆಧರಿಸಿ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೇವಾನಂದ್ ಚವ್ಹಾಣ್ ಅವರು ಗೋಪಾಲ ಜೋಶಿ ಅವರನ್ನು ಹುಬ್ಬಳ್ಳಿಯ ನಿವಾಸದಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಗೋಪಾಲ ಜೋಶಿ ಅವರು, ಕೇಂದ್ರದಲ್ಲಿ ನನ್ನ ಸಹೋದರ ಪ್ರಲ್ಹಾದ್ ಜೋಶಿ ವರ್ಚಸ್ಸು ಚೆನ್ನಾಗಿದ್ದು, ವಿಜಯಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿದ್ದರಲ್ಲದೆ, 5 ಕೋಟಿ ರೂ. ಸಿದ್ಧವಿರಿಸಿಕೊಳ್ಳುವಂತೆ ಸೂಚಿಸಿದ್ದರು. ಬಳಿಕ ಗೋಪಾಲ ಜೋಶಿ ಸೂಚಿಸಿದ್ದ ವಿಜಯ ಲಕ್ಷ್ಮಿ ಜೋಶಿ ಅವರ ಬ್ಯಾಂಕ್ ಖಾತೆಗೆ 1.25 ಕೋಟಿ ರೂ. ಹಾಗೂ ಮನೆಗೆ 75 ಲಕ್ಷ ರೂ. ತಲುಪಿಸಲಾಗಿತ್ತು. ಜತೆಗೆ, 5 ಕೋಟಿ ರೂ. ಮೌಲ್ಯ ನಮೂದಿಸಿದ್ದ ಚೆಕ್ ಸಹ ಪಡೆದುಕೊಂಡಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿತ್ತು.
ಟಿಕೆಟ್ ವಿಚಾರವಾಗಿ ಅಮಿತ್ ಶಾ ಅವರ ಆಪ್ತ ಸಹಾಯಕರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದ ಗೋಪಾಲ ಜೋಶಿ, ಆ ಬಳಿಕ ಟಿಕೆಟ್ ಕೊಡಿಸದೇ ವಂಚಿಸಿದ್ದಾರೆ. ಅದಾದ ಮೇಲೆ ಬಸವೇಶ್ವರನಗರದ ವಿಜಯಲಕ್ಷ್ಮಿ ಜೋಶಿ ಅವರ ಮನೆಗೆ ಕರೆಸಿಕೊಂಡು ಚೆಕ್ ವಾಪಸ್ ನೀಡಿದ್ದರು. 25 ಲಕ್ಷ ರೂ. ಹಿಂದಿರುಗಿಸುವಂತೆ ಕೇಳಿದಾಗ 200 ಕೋಟಿ ಮೊತ್ತದ ಯೋಜನೆಗಳ ಬಿಲ್ ತೋರಿಸಿ 1.75 ಕೋಟಿ ರೂ. ನೀಡಿದರೆ 20 ದಿನಗಳಲ್ಲಿ ಸಂಪೂರ್ಣ ಹಣವನ್ನು ಹಿಂದಿರುಗಿಸುವುದಾಗಿ ಹೇಳಿದ್ದರು. ಇದನ್ನು ನಂಬಿ ಹಂತ ಹಂತವಾಗಿ 1.75 ಕೋಟಿ ರೂ. ನೀಡಿದ್ದೆ ಎಂದು ದೇವಾನಂದ ಚವ್ಹಾಣ್ ಪತ್ನಿ ಸುನೀತಾ ಚವ್ಹಾಣ್ ದೂರಿನಲ್ಲಿ ಆರೋಪಿಸಿದ್ದನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿತ್ತು.
ಈ ಸಂಬಂಧ ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ಗಳಾದ 126(2) (ಅಕ್ರಮವಾಗಿ ನಿರ್ಬಂಧಿಸುವುದು), 115(2) (ಗಾಯಗೊಳಿಸುವುದು), 118(1) (ಅಪಾಯಕಾರಿ ಆಯುಧ ಅಥವಾ ಅಂಥ ವಿಧಾನಗಳಿಂದ ತೀವ್ರವಾಗಿ ಗಾಯಗೊಳಿಸುವುದು), 316(2) (ನಂಬಿಕೆ ದ್ರೋಹ), 318(4) (ವಂಚನೆ), 61 (ಅಪರಾಧಿಕ ಒಳಸಂಚು) ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
Related Articles
Thank you for your comment. It is awaiting moderation.


Comments (0)