ಪ್ರತಿಭಟನೆ ವೇಳೆ ರೈಲು ಸೇವೆಗೆ ಅಡ್ಡಿಪಡಿಸಿದ ಆರೋಪ; ಕಾಂಗ್ರೆಸ್ ಮುಖಂಡ ನಲಪಾಡ್ ವಿರುದ್ಧದ ಪ್ರಕರಣ ರದ್ದು
- by Jagan Ramesh
- March 4, 2026
- 7 Views
ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ವೇಳೆ ನಗರದ ವೈಟ್‌ಫೀಲ್ಡ್ ರೈಲು ನಿಲ್ದಾಣದಲ್ಲಿ ರೈಲುಗಳನ್ನು ತಡೆದು, ಸೇವೆಗೆ ಅಡ್ಡಿ ಪಡಿಸಿದ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ಸಂಬಂಧ ನಗರದ 41ನೇ ಎಸಿಎಂಎಂ ನ್ಯಾಯಾಲಯದಲ್ಲಿನ ನ್ಯಾಯಾಂಗ ಪ್ರಕ್ರಿಯೆ ರದ್ದುಕೋರಿ ನಲಪಾಡ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅರ್ಜಿದಾರರ ವಿರುದ್ಧದ ಆರೋಪಗಳು ರೈಲ್ವೆ ಕಾಯ್ದೆಯ ಸೆಕ್ಷನ್ 154 ಅಥವಾ 174 ಅಡಿಯಲ್ಲಿ ಬರುವುದಿಲ್ಲ. ಈ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣದ ವಿಚಾರಣೆಗೆ ಅಗತ್ಯವಾಗಿರುವ ಸಾಕ್ಷ್ಯಾಧಾರಗಳಿಲ್ಲ. ಅಪರಾಧಿಕ ಅಂಶಗಳ ಅನುಪಸ್ಥಿತಿ ಹಿನ್ನೆಲೆಯಲ್ಲಿ ಹಾಗೂ ಕಾಗ್ನೈಜೆನ್ಸ್ ತೆಗದುಕೊಂಡಿರುವ ಆದೇಶದಲ್ಲಿ ಯಾವುದೇ ವಿವೇಚನೆ ಬಳಸದಿರುವುದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣವೇನು?
2022ರ ಜುಲೈ 27ರಂದು ಕಾಂಗ್ರೆಸ್ ಪಕ್ಷದ ಸದಸ್ಯರು ವೈಟ್‌ಫೀಲ್ಡ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3ರಲ್ಲಿ ಕೇಂದ್ರ ಸರ್ಕಾರದ ಕೆಲವು ಯೋಜನೆಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರೈಲಿನ ಮುಂದೆ ಕುಳಿತುಕೊಂಡ ಪರಿಣಾಮ 39 ನಿಮಿಷಗಳ ಕಾಲ ರೈಲು ಸೇವೆಗೆ ಅಡ್ಡಿಯುಂಟಾಗಿತ್ತು. ಈ ಸಂಬಂಧ ವೈಟ್‌ಫೀಲ್ಡ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ರೈಲ್ವೆ ರಕ್ಷಣಾ ಪಡೆಗೆ ದೂರು ದಾಖಲಿಸಿದ್ದರು.
ಇದನ್ನು ಆಧರಿಸಿ ಅರ್ಜಿದಾರರ ವಿರುದ್ಧ ರೈಲ್ವೆ ಪೊಲೀಸರು, ರೈಲ್ವೆ ಕಾಯ್ದೆ ಸೆಕ್ಷನ್ 145(ಸಿ) (ರೈಲು ಅಥವಾ ರೈಲ್ವೆ ಆಡಳಿತದಿಂದ ಒದಗಿಸಿರುವ ಸೌಲಭ್ಯಕ್ಕೆ ಅಡ್ಡಿ ಪಡಿಸುವುದಕ್ಕೆ 6 ತಿಂಗಳ ಕಾಲ ಶಿಕ್ಷೆ), 147 (ಅತಿಕ್ರಮಿಸುವುದು ಹಾಗೂ ಅತಿಕ್ರಮಣ ತೆರವಿಗೆ ನಿರಾಕರಣೆ), 154 (ದುಡುಕು ಹಾಗೂ ನಿರ್ಲಕ್ಷ್ಯದಿಂದ ರೈಲು ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ), 174(ಎ) (ರೈಲು ಪ್ರಯಾಣಕ್ಕೆ ಅಡ್ಡಿಪಡಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ, ಪ್ರಕರಣದ ಕಾಗ್ನೈಜೆನ್ಸ್ ತೆಗೆದುಕೊಂಡಿತ್ತಲ್ಲದೆ, ನಲಪಾಡ್ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಿತ್ತು. ಇದರಿಂದ, ನಲಪಾಡ್ ಹೈಕೋರ್ಟ್ ಮೆಟ್ಟಲೇರಿದ್ದರು.
ಅರ್ಜಿ ವಿಚಾರಣೆ ವೇಳೆ ನಲಪಾಡ್ ಪರ ವಕೀಲ ಸ್ಪರ್ಶ್ ಶೆಟ್ಟಿ ವಾದ ಮಂಡಿಸಿ, ಅರ್ಜಿದಾರರು ಹಾಗೂ ಮತ್ತಿತರರು ವೈಟ್‌ಫೀಲ್ಡ್ ರೈಲ್ವೆ ಹಳಿಯ ಮೇಲೆ ಕುಳಿತು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ, ರೈಲು ಸೇವೆಗೆ 39 ನಿಮಿಷಗಳ ಕಾಲ ವಿಳಂಬವಾಗಿದೆ. ಆದರೆ, ಯಾವುದೇ ಪ್ರಯಾಣಿಕರ ಸುರಕ್ಷತೆ ಮತ್ತು ರೈಲ್ವೆ ಉಪಕರಣಗಳಿಗೆ ಹಾನಿಯಾಗಿಲ್ಲ. ಅರ್ಜಿದಾರರ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಪ್ರಕರಣ ಸಂಬಂಧ ವಿವೇಚನೆ ಬಳಸದೆಯೇ ಕಾಗ್ನೈಜೆನ್ಸ್ ತೆಗೆದುಕೊಳ್ಳಲಾಗಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ, ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.
Related Articles
Thank you for your comment. It is awaiting moderation.


Comments (0)