ಪರಿಹಾರ ನಿರೀಕ್ಷಿಸದೆ ಒಂದು ಕಿಡ್ನಿ ದಾನಕ್ಕೆ ವೈದ್ಯೆಯ ನಿರ್ಧಾರ; ಅನುಮತಿ ನೀಡಿದ ಹೈಕೋರ್ಟ್

ಬೆಂಗಳೂರು: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆಯೇ ತಮ್ಮ ಒಂದು ಮೂತ್ರಪಿಂಡವನ್ನು (ಕಿಡ್ನಿ) ಅಗತ್ಯವಿರುವ ವ್ಯಕ್ತಿಗೆ ದಾನ ಮಾಡಲು ಅನುಮತಿ ಕೋರಿ ವೈದ್ಯೆಯೊಬ್ಬರು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ಹೈಕೋರ್ಟ್, ಅಗತ್ಯ ವೈದ್ಯಕೀಯ ತಪಾಸಣೆಯ ಬಳಿಕ ಕಿಡ್ನಿ ದಾನ ಮಾಡಲು ವೈದ್ಯೆಗೆ ಅನುಮತಿ ನೀಡಿದೆ.

ಕಿಡ್ನಿ ದಾನ ಮಾಡಲು ಅನುಮತಿ ನಿರಾಕರಿಸಿದ್ದ ನಗರದ ಖಾಸಗಿ ಆಸ್ಪತ್ರೆಯ ಅಂಗಾಂಗ ಕಸಿ ಸಮಿತಿಯ ಕ್ರಮ ಪ್ರಶ್ನಿಸಿ 58 ವರ್ಷದ ವೈದ್ಯೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?
ಪರಹಿತ ಚಿಂತನೆಯ ದೃಷ್ಟಿಯಿಂದ ಅಗತ್ಯವಿರುವ ವ್ಯಕ್ತಿಯೊಬ್ಬರಿಗೆ ಯಾವುದೇ ಪರಿಹಾರ ಪಡೆಯದೆ ತಮ್ಮ ಒಂದು ಮೂತ್ರಪಿಂಡ ನೀಡಲು ವ್ಯಕ್ತಿಯೊಬ್ಬರು ಮುಂದೆ ಬಂದಿರುವ ಅತ್ಯಂತ ವಿರಳ ಪ್ರಕರಣ ಇದಾಗಿದೆ. ಅರ್ಜಿದಾರೆಯು ವೃತ್ತಿಯಿಂದ ವೈದ್ಯೆಯಾಗಿದ್ದು, ವಯಸ್ಕರಾಗಿದ್ದಾರೆ. ಕಿಡ್ನಿ ದಾನ ಮಾಡುವುದರ ಬಗ್ಗೆ ಅವರಿಗೆ ಅರಿವಿದ್ದು, ತನ್ನ ಸ್ವ‌ಇಚ್ಛೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಿಡ್ನಿದಾನ ಮಾಡುವ ಅವರ ನಿರ್ಧಾರವನ್ನು ಪುರಸ್ಕರಿಸಲಾಗಿದೆ ಎಂದಿರುವ ನ್ಯಾಯಾಲಯ, ಆಸ್ಪತ್ರೆಯು ಅರ್ಜಿದಾರರ ಕಿಡ್ನಿ ಯಾವ ವ್ಯಕ್ತಿಗೆ ಹೊಂದಾಣಿಕೆಯಾಗುತ್ತದೆ ಎಂಬುದಕ್ಕೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳನ್ನು ನಡೆಸಿ, ಅದನ್ನು ಅನುಮೋದನೆಗಾಗಿ ಸಮಿತಿಯ ಮುಂದೆ ಇಡಬೇಕು. ಅದನ್ನು ಪರಿಗಣಿಸಿ, ಸಮಿತಿಯು ಒಂದು ವಾರದಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಕುಟುಂಬದವರಿಗೆ ಸಕ್ಕರೆ ಕಾಯಿಲೆ ಇರುವುದರಿಂದ ಆದಷ್ಟು ಬೇಗ ಕಿಡ್ನಿದಾನ ಮಾಡಬೇಕು ಎಂದು ಅರ್ಜಿದಾರ ವೈದ್ಯೆ ಕೋರಿದ್ದು, ಸಕ್ಕರೆ ಕಾಯಿಲೆ ಬಂದರೆ ಆರಂಭಿಕ ಹಂತದಲ್ಲೇ ಅದು ಕಿಡ್ನಿಗೆ ಹಾನಿ ಮಾಡುವುದರಿಂದ ದಾನ ಮಾಡಲಾಗದು ಎಂದೂ ಆಕೆ ಹೇಳಿಕೊಂಡಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ದಾಖಲಿಸಿದೆ.

ವಿಚಾರಣೆ ವೇಳೆ ವೈದ್ಯೆ ಪರವಾಗಿ ವಾದ ಮಂಡಿಸಿದ್ದ ವಕೀಲ ಶ್ರೀಪಾದ ವೆಂಕಟ ಜೋಗರಾವ್‌ ಅವರು, ಯಾವ ವ್ಯಕ್ತಿಗೆ ಕಿಡ್ನಿ ನೀಡಬೇಕು ಎಂಬುದನ್ನೂ ವೈದ್ಯೆ ನಿರ್ಧರಿಸುವುದಿಲ್ಲ. ಸಂಬಂಧಿತ ಆಸ್ಪತ್ರೆಯು ಅಗತ್ಯವಿರುವ ರೋಗಿಯನ್ನು ಹುಡುಕಬಹುದು. ಎಲ್ಲ ರೀತಿಯ ಪರೀಕ್ಷೆಗಳು ಹೊಂದಿಕೆಯಾದರೆ ಯಾವುದೇ ಪರಿಹಾರ ಪಡೆಯದೇ ತನ್ನ ಒಂದು ಕಿಡ್ನಿಯನ್ನು ನೀಡಲು ವೈದ್ಯೆಗೆ ಯಾವುದೇ ಆಕ್ಷೇಪವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಖಾಸಗಿ ಆಸ್ಪತ್ರೆ ಮತ್ತು ಅಂಗಾಂಗ ಕಸಿ ಸಮಿತಿ ಪರ ವಕೀಲರು, ಅರ್ಜಿದಾರ ವೈದ್ಯೆಯ ಕಿಡ್ನಿ ಹೊಂದಬಹುದಾದ ಹಾಗೂ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅದನ್ನು ಸ್ವೀಕರಿಸಲು ಸಾಧ್ಯತೆ ಇರುವ ಐವರು ವ್ಯಕ್ತಿಗಳನ್ನು ಗುರುತಿಸಲಾಗಿದೆ. ಐವರಲ್ಲಿ ಒಬ್ಬರಿಗೆ ಕಿಡ್ನಿ ಕಸಿ ಮಾಡಬಹುದಾಗಿದೆ. ಕಿಡ್ನಿ ಹೊಂದಾಣಿಕೆ ಮತ್ತು ಇತರ ವಿಚಾರಗಳನ್ನು ಪರಿಶೀಲಿಸಲು ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕಿದೆ. ಇದಕ್ಕೆ ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

 

Related Articles

Comments (0)

Leave a Comment