ಬಂಧನದ ಕಾರಣ ನೀಡುವಲ್ಲಿ ಲೋಪ; ನೈಜೀರಿಯಾ ಪ್ರಜೆಗಳಿಬ್ಬರ ಬಿಡುಗಡೆಗೆ ಹೈಕೋರ್ಟ್ ಆದೇಶ, ಗಡಿಪಾರು ಪ್ರಕ್ರಿಯೆಗಾಗಿ ಎಫ್‌ಆರ್‌ಆರ್‌ಒಗೆ ಹಸ್ತಾಂತರಿಸಲು ನಿರ್ದೇಶನ

ಬೆಂಗಳೂರು: ಮಾದಕವಸ್ತು ಸಂಗ್ರಹ ಹಾಗೂ ಮಾರಾಟ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಿಡುಗಡೆಗೊಳಿಸಿರುವ ಹೈಕೋರ್ಟ್, ಅಧಿಕೃತ ದಾಖಲೆಗಳಿಲ್ಲದೆ ಕಳೆದೊಂದು ದಶಕದಿಂದ ಭಾರತದಲ್ಲಿ ನೆಲೆಸಿರುವ ಅರ್ಜಿದಾರ ವಿದೇಶಿಗರನ್ನು ಬಿಡುಗಡೆಗೊಂಡ ನಂತರ ದೇಶದಿಂದ ಗಡಿಪಾರು ಮಾಡಲು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಹಸ್ತಾಂತರಿಸಬೇಕು ಎಂದು ಆದೇಶಿಸಿದೆ.

ಅಕ್ರಮವಾಗಿ ಬಂಧನದಲ್ಲಿರಿಸಲಾಗಿರುವ ನಮ್ಮನ್ನು ಬಿಡುಗಡೆ ಮಾಡಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ನೈಜಿರಿಯಾ ಪ್ರಜೆಗಳಾದ (ಸದ್ಯ ಕೋಗಿಲು ಲೇ ಔಟ್‌ ವಿಳಾಸ ಹೊಂದಿರುವ) ಇಮೆಕಾ ಜೇಮ್ಸ್‌ ಐವೊಬಾ ಹಾಗೂ ವುಡೆರಿಕ್‌ ಫಿಡೆಲಿಸ್‌ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದ್ದು, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.

ಮುಕ್ತ ನ್ಯಾಯಾಲಯದಲ್ಲಿ ತೀರ್ಪಿನ ಸಾರಾಂಶ ಓದಿದ ನ್ಯಾಯಪೀಠ, ರ್ಜಿದಾರರಿಗೆ ನೀಡಲಾದ ಬಂಧನದ ಕಾರಣಗಳು ದೋಷಪೂರಿತವಾಗಿರುವುದರಿಂದ ಹಾಗೂ ಬಂಧನದ ಕಾರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿರುವುದರಿಂದ ಅರ್ಜಿದಾರರು ಬಿಡುಗಡೆ ಹೊಂದಲು ಅರ್ಹರಾಗಿದ್ದಾರೆ. ಅರ್ಜಿದಾರರು ಬಿಡುಗಡೆಯಾದ ತಕ್ಷಣ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ 10 ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಕಾರಣಕ್ಕಾಗಿ, ಅವರ ವಿರುದ್ಧದ ಕಾನೂನು ಪ್ರಕ್ರಿಯೆ ಹಿಂಪಡೆಯುವುದಕ್ಕೆ ಹಾಗೂ ಗಡೀಪಾರು ಮಾಡುವುದಕ್ಕೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಅವರನ್ನು ಸಂಬಂಧಪಟ್ಟ ವ್ಯಾಪ್ತಿಯ ಎಫ್‌ಆರ್‌ಆರ್‌ಒಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದೆ.

ಇದೇ ವೇಳೆ, ಎಸ್‌ಒಪಿಯಲ್ಲಿ ತಿಳಿಸಿರುವಂತೆ ರಾಜ್ಯ ಮಟ್ಟದ ಸ್ಕ್ರೀನಿಂಗ್ ಸಮಿತಿ ಮತ್ತು ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಯನ್ನು ರಚಿಸಬೇಕು ಹಾಗೂ ಸಮಿತಿ ರಚನೆಯ ಕುರಿತು ಈ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ನಾಲ್ಕು ತಿಂಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ನಾಗರಿಕ ಕೇಂದ್ರಿತವಲ್ಲ:
ಭಾರತದ ಸಂವಿಧಾನದ ವಿಧಿ 22(1)ರ ಪ್ರಕಾರ, ಬಂಧಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಆತನ ಬಂಧನಕ್ಕೆ ಕಾರಣಗಳನ್ನು ತಿಳಿಸುವುದು ಕಡ್ಡಾಯವಾಗಿದೆ. ಬಂಧನದ ಕಾರಣಗಳನ್ನು ತಿಳಿಸಬೇಕೆನ್ನುವುದು ಒಂದು ಕಡ್ಡಾಯವಾದ ಸಾಂವಿಧಾನಿಕ ರಕ್ಷಣೆಯಾಗಿದೆಯೇ ಹೊರತು ಅದು ಔಪಚಾರಿಕ ಕಾರ್ಯವಿಧಾನವಷ್ಟೇ ಅಲ್ಲ. 22ನೇ ವಿಧಿಯು ಕೇವಲ ನಾಗರಿಕ ಕೇಂದ್ರಿತವಲ್ಲದೆ, ವ್ಯಕ್ತಿ ಕೇಂದ್ರಿತವಾಗಿದೆ. ಈ ಹಿನ್ನೆಲೆಯಲ್ಲಿ ಅದರ ಅಡಿ‌ ದೊರೆತಿರುವ ಸಾಂವಿಧಾನಿಕ ರಕ್ಷಣೆಯು ಭಾರತದ ಭೂಪ್ರದೇಶದಲ್ಲಿರುವ ವಿದೇಶಿಗರಿಗೂ ಸೇರಿದಂತೆ ದೇಶದ ಎಲ್ಲ ಪ್ರಜೆಗಳಿಗೂ ಅನ್ವಯಿಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಬಂಧನದ ಕಾರಣಗಳನ್ನು ತಿಳಿಸಲು ಕಾನೂನು ಯಾವುದೇ ಕಟ್ಟುನಿಟ್ಟಾದ ಸ್ವರೂಪವನ್ನು ನಿಗದಿಪಡಿಸಿಲ್ಲ. ಬಂಧಿತ ವ್ಯಕ್ತಿಗೆ ಆತನ ಬಂಧನದ ಆಧಾರದ ಬಗ್ಗೆ ಅರಿವು ಮೂಡಿಸಿದರೆ, ಅದು ಕಾನೂನಿನ ಗಮನಾರ್ಹ ಪಾಲನೆಯೆಂದು ಪರಿಗಣಿಸಲ್ಪಡುತ್ತದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಂಗ ವಿಮರ್ಶೆಯು ಬಂಧನದ ಕಾರಣಗಳನ್ನು ತಿಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕಷ್ಟೇ ಸೀಮಿತವಾಗಿರುತ್ತದೆಯೇ ಹೊರತು ಆ ಕಾರಣಗಳು ಸಮರ್ಪಕವಾಗಿವೆಯೇ ಅಥವಾ ಸರಿಯಾಗಿವೆಯೇ ಎಂಬ ಬಗ್ಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ.

ಉದ್ದೇಶಪೂರ್ವಕ ಕೃತ್ಯ:
ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರಿದ್ದ ಉಪ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಅವರು, ಬಹುಶಃ ಎಸ್‌ಒಪಿಗೆ ಸಂಬಂಧಿಸಿದಂತೆ ದೇಶದಲ್ಲೇ ಮೊದಲ ತೀರ್ಪು ಇದಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇಂಥ ಜನರು ಒಂದಿಲ್ಲೊಂದು ಅಪರಾಧ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿಯೇ ಸಿಲುಕಿಕೊಳ್ಳುತ್ತಾರೆ. ಆನಂತರ ಪ್ರಕರಣದ ವಿಚಾರಣೆ ಬಾಕಿ ಇದೆ ಎಂಬ ನೆಪದಲ್ಲಿ ಅವಧಿ ಮೀರಿ ಇಲ್ಲಿಯೇ ಉಳಿದುಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಎಸ್‌ಒಪಿಯೇ ಸರಿಯಾಗಿದೆ ಎಂದು ಮೌಖಿಕವಾಗಿ ಹೇಳಿತು.

ಪ್ರಕರಣದ ಹಿನ್ನೆಲೆ:
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅರ್ಜಿದಾರರನ್ನು 2024ರ ಮೇ 12ರಂದು ನಗರದ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಈ ವೇಳೆ, ಆರೋಪಿಗಳಿಂದ 400 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಹಾಗೂ ವಿದೇಶಿಯರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವು ಬೆಂಗಳೂರಿನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಇದರಿಂದ ಅರ್ಜಿದಾರರು ತಮ್ಮ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಧಿಕೃತ ವೀಸಾ ಹಾಗೂ ಪಾಸ್‌ಪೋರ್ಟ್‌ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ ಎಂದು ಆತಂಕ ವ್ಯಕ್ತಪಡಿಸಿತ್ತು. ಜತೆಗೆ, ಎಫ್‌ಆರ್‌ಆರ್‌ಒ ನಲ್ಲಿ ನೋಂದಣಿ ಮಾಡಿಸದೆ ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ವಿದೇಶಿ ಪ್ರಜೆಗಳು ಠಿಕಾಣಿ ಹೂಡಿದ್ದಾರೆ ಎಂದರೆ ಹೇಗೆ? ಇಂಥದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕರ್ತವ್ಯ ಲೋಪ ಎಸಗಿದಂತಲ್ಲವೇ ಎಂದು ಪ್ರಶ್ನಿಸಿತ್ತಲ್ಲದೆ, ಮಾನ್ಯತೆ ಹೊಂದಿರುವ ವೀಸಾ ಇಲ್ಲದೆ, ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಣಿ ಮಾಡಿಸದೆ ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳ ಕುರಿತಂತೆ ರಾಜ್ಯ ಸರ್ಕಾರದಿಂದ ವಿವರಣೆ ಕೇಳಿತ್ತು.

Related Articles

Comments (0)

Leave a Comment