ಅನಂತಪದ್ಮನಾಭ ದೇಗುಲಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ ಅರ್ಜಿ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Jagan Ramesh
- January 27, 2026
- 27 Views
ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅನಂತಶಯನ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರು ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಆಡಳಿತಾಧಿಕಾರಿ ನೇಮಿಸಿ 2025ರ ಡಿಸೆಂಬರ್ 29ರಂದು ಹೊರಡಿಸಲಾಗಿರುವ ಆದೇಶ ಪ್ರಶ್ನಿಸಿ 2002ರಲ್ಲಿ ದೇವಸ್ಥಾನದ ಮೊಕ್ತೇಸರರಾಗಿ ಆಯ್ಕೆಯಾಗಿರುವ ಕಾರ್ಕಳದ ವೇದವ್ಯಾಸ ಭಟ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ, ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಉಡುಪಿ ಜಿಲ್ಲೆಯ ಸಹಾಯಕ ಆಯುಕ್ತರು ಹಾಗೂ ಉಪ ಆಯುಕ್ತರು ಮತ್ತು ಆಡಳಿತಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತು.
ಜತೆಗೆ, ಇದೇ ವಿಚಾರವಾಗಿ 2018ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನೂ ಈ ಅರ್ಜಿಯೊಂದಿಗೆ ಸೇರಿ ವಿಚಾರಣೆ ನಡೆಸುವ ಸಂಬಂಧ ರೋಸ್ಟರ್ ನ್ಯಾಯಪೀಠದ ಮುಂದೆ ಅರ್ಜಿಯನ್ನು ನಿಗದಿಪಡಿಸಿ ಆದೇಶಿಸಲು ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
ಪ್ರಕರಣವೇನು?
ಸ್ಥಳೀಯ ಸಂಪ್ರದಾಯ ಮತ್ತು ಗ್ರಾಮಸ್ಥರ ಅಭಿಪ್ರಾಯದಂತೆ ದೇವಸ್ಥಾನಕ್ಕೆ 2002ರಲ್ಲಿ ವ್ಯವಸ್ಥಪನಾ ಸಮಿತಿ ನೇಮಕ ಮಾಡಲಾಗಿತ್ತು. 2012ರಲ್ಲಿ ದೇವಸ್ಥಾನವನ್ನು ಮುಜರಾಯಿ ವ್ಯಾಪ್ತಿಯಿಂದ ಹೊರಗಿಡಲು ಮನವಿ ಮಾಡಲಾಗಿತ್ತು. ಸ್ಥಳೀಯರ ನಡುವೆ ವ್ಯಾಜ್ಯ ಉಂಟಾಗಿದ್ದರಿಂದ 2018ರ ಡಿಸೆಂಬರ್ 14ರಂದು ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದು, ಅರ್ಜಿಯು ವಿಚಾರಣಾ ಹಂತದಲ್ಲಿದೆ.
ಈ ನಡುವೆ ವ್ಯವಸ್ಥಾಪನಾ ಮಂಡಳಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿತ್ತು. 2024ರ ಡಿಸೆಂಬರ್ 14ರಂದು ಇದನ್ನೂ ಸಹ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ಆ ಅರ್ಜಿಯೂ ನ್ಯಾಯಾಲುದಲ್ಲಿ ಬಾಕಿ ಇದೆ. ಈ ನಡುವೆ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ 2025ರ ಡಿಸೆಂಬರ್ 29ರಂದು ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಉಡುಪಿ ಜಿಲ್ಲೆಯ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದು, ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.


Comments (0)