ಡಿಫಾಲ್ಟ್ ಜಾಮೀನು ಕೋರಿ ಬಿಕ್ಲು ಶಿವ ಕೊಲೆ ಆರೋಪಿಗಳಿಂದ ಹೈಕೋರ್ಟ್‌ಗೆ ಅರ್ಜಿ; ಸಿಐಡಿಗೆ ನೋಟಿಸ್

ಬೆಂಗಳೂರು: ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಹತ್ಯೆ ಪ್ರಕರಣ ಸಂಬಂಧ ಕಡ್ಡಾಯ (ಡಿಫಾಲ್ಟ್‌ ) ಜಾಮಿನು ಕೋರಿ ನಾಲ್ವರು ಆರೋಪಿಗಳು ಸಲ್ಲಿಸಿರುವ ಅರ್ಜಿ ಸಂಬಂಧ ತನಿಖಾಧಿಕಾರಿಗಳಾದ ಸಿಐಡಿ ಪೊಲಿಸರಿಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಡಿಫಾಲ್ಟ್ ಜಾಮೀನು ಕೋರಿ 2ನೇ ಆರೋಪಿ ಕಿರಣ್‌, 3ನೇ ಆರೋಪಿ, ವಿಮಲ್‌ ರಾಜ್‌, 6ನೇ ಆರೋಪಿ ಪ್ರದೀಪ್‌ ಹಾಗೂ 7ನೇ ಆರೋಪಿ ಆರ್‌.ಮದನ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಿಐಡಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿತು.

ಪ್ರಕರಣವೇನು?
ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ರೌಡಿಶೀಟರ್‌ ಬಿಕ್ಲು ಶಿವನ ಕೊಲೆಯಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಮೃತನ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಭಾರತಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣದಲ್ಲಿ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌ 5ನೇ ಆರೋಪಿಯಾಗಿದ್ದು, ಅರ್ಜಿದಾರರು ಉಳಿದ ಆರೋಪಿಗಳಾಗಿದ್ದಾರೆ.

ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಅರ್ಜಿದಾರ ಆರೋಪಿಗಳನ್ನು ಬಂಧಿಸಿದ್ದರು. ಡಿಫಾಲ್ಟ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 81ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ 2025ರ ಅಕ್ಟೋಬರ್ 17ರಂದು ವಜಾಗೊಳಿಸಿತ್ತು.

ಇದರಿಂದ, ಹೈಕೋರ್ಟ್‌ ಮೆಟ್ಟಿಲೇರಿರುವ ಆರೋಪಿಗಳು ಪ್ರಕರಣ ದಾಖಲಾಗಿ 90 ದಿನ ಕಳೆದಿದ್ದರೂ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿಲ್ಲ. ಇದರಿಂದ, ಜಾಮೀನು ನೀಡಬೇಕು. ಪ್ರಕರಣದಲ್ಲಿ ಕೊಕಾ ಕಾಯ್ದೆಯ ನಿಯಮಗಳನ್ನು ಅನ್ವಯಿಸಿ ಆರೋಪಪಟ್ಟಿ ಸಮಯ ವಿಸ್ತರಿಸಿರುವ ಕ್ರಮ ಸಹ ಸರಿ ಇಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿ, ತಮಗೆ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದಾರೆ.

Related Articles

Comments (0)

Leave a Comment